ರಾಣಿಬೆನ್ನೂರು: ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಅಖಿಲ ಭಾರತ ವಿದ್ಯಾರ್ಥಿ ಪರಿಷತ್(ಎಬಿವಿಪಿ) ವತಿಯಿಂದ ಬುಧವಾರ ನಗರದಲ್ಲಿ ತಿರಂಗಾ ಯಾತ್ರೆ ನಡೆಯಿತು.ನಗರದ ಹಳೇ ಪಿ.ಬಿ. ರಸ್ತೆಯ ಖನ್ನೂರು ನರ್ಸಿಂಗ್ ಕಾಲೇಜಿನಿಂದ ಆರಂಭವಾದ ತಿರಂಗಾ ಯಾತ್ರೆಗೆ ಡಾ. ಗಿರೀಶ ಕೆಂಚಪ್ಪನವರ ಚಾಲನೆ ನೀಡಿದರು.ನಂತರ ರಾಜರಾಜೇಶ್ವರಿ ನಗರ, ಕೆಇಬಿ ಗಣೇಶ ದೇವಸ್ಥಾನ, ಬಸ್ ನಿಲ್ದಾಣ, ಕೋರ್ಟ್ ವೃತ್ತ, ಅಂಚೆ ವೃತ್ತದಿಂದ ಮತ್ತೆ ಮೇಡ್ಲೇರಿ ಕ್ರಾಸ್‌ನಿಂದ ರಾಜರಾಜೇಶ್ವರಿ ಕಾಲೇಜಿನ ಮೈದಾನಕ್ಕೆ ಬಂದು ತಲುಪಿತು.ಅಭಾವಿಪ ರಾಜ್ಯ ಕಾರ್ಯಕಾರಿಣಿ ಸದಸ್ಯ ಅಭಿಲಾಷ್ ಬದಾಮಿ ಮಾತನಾಡಿ, ಸ್ವಾತಂತ್ರ್ಯ ನಮಗೆ ದಾನವಾಗಿ ಸಿಕ್ಕಿಲ್ಲ. ಕೋಟ್ಯಂತರ ಬಲಿದಾನ ಪ್ರತೀಕವಾಗಿದೆ. ಅನೇಕ ಮಹನೀಯರ ತ್ಯಾಗ, ಬಲಿದಾನದಿಂದಾಗಿ ದೇಶಕ್ಕೆ ಸ್ವಾತಂತ್ರ್ಯ ಲಭಿಸಿದೆ. ಯುವಪೀಳಿಗೆ ಅದನ್ನು ಅರಿತುಕೊಂಡು ಜವಾಬ್ದಾರಿಯುತ ನಾಗರಿಕರಾಗಿ ಬೆಳೆದು ಸಮಸಮಾಜ ನಿರ್ಮಾಣಕ್ಕೆ ನಾಂದಿ ಹಾಕಬೇಕು ಎಂದರು.ಜಿಲ್ಲಾ ಸಂಘಟನಾ ಕಾರ್ಯದರ್ಶಿ ಹನುಮಂತ ಹಳ್ಳೂರ ಮಾತನಾಡಿ, ಸ್ವಾತಂತ್ರ್ಯ ನಮ್ಮ ಹೃದಯದಲ್ಲಿ ಇರಬೇಕು. ದೇಶಭಕ್ತಿ ನಮ್ಮ ರಕ್ತದಲ್ಲಿ ಇರಬೇಕು. ಆಗ ಮಾತ್ರ ಸ್ವಾತಂತ್ರ್ಯಕ್ಕೆ ಒಂದು ಅರ್ಥ ಬರುತ್ತದೆ. ಈ ತಿರಂಗಾ ಕಾರ್ಯಕ್ರಮಗಳಿಂದ ಯುವಜನತೆಯಲ್ಲಿ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಎಬಿವಿಪಿ ನಿರಂತರವಾಗಿ ಮಾಡಲಾಗುತ್ತಿದೆ ಎಂದರು.ಡಾ. ರತ್ನ ಪ್ರಭಾ ಕೆಂಚ್ಚಪ್ಪನವರ, ಪ್ಯಾರ ಮೆಡಿಕಲ್ ಕಾಲೇಜಿನ ಪ್ರಾಂಶುಪಾಲರಾದ ಬಸವರಾಜ ಕಮ್ಮಾರ, ಮಂಜುನಾಥ, ನಗರ ಕಾರ್ಯದರ್ಶಿ ಪವನ್ ಕುಮಾರ್ ಇಟಗಿ, ಸಹ ಕಾರ್ಯದರ್ಶಿ ಎಲ್ಲಮ್ಮ, ದರ್ಶನ್, ಸುಶ್ಮಿತಾ, ನವೀನ್, ಬಸವರಾಜ್ ಪುನೀತ್ ಹಾಗೂ ಅನೇಕ ವಿದ್ಯಾರ್ಥಿಗಳು ಕಾರ್ಯಕರ್ತರು ಭಾಗವಹಿಸಿದ್ದರು.
ಹಾವೇರಿ: ಶ್ರೀಮತಿ ಗಂಗಮ್ಮ ಎಸ್. ಬೊಮ್ಮಾಯಿ ಟ್ರಸ್ಟ್ ವತಿಯಿಂದ ಆ. 14ರಂದು ಸಂಜೆ 4 ಗಂಟೆಗೆ ರಜನಿ ಕಲ್ಯಾಣ ಮಂಟಪದಲ್ಲಿ ಶ್ರೇಷ್ಠ ಸಾಹಿತ್ಯ ಕೃತಿಗಳಿಗೆ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಏರ್ಪಡಿಸಲಾಗಿದೆ ಎಂದು ಮಾಜಿ ಸಿಎಂ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.