ರಾಮನಗರ: ನೋಟಿಸ್ ನೀಡದೆ ಅಕ್ರಮವಾಗಿ ಜಮೀನು ಸರ್ವೆ ಮಾಡಲು ಮುಂದಾದ ಕಂದಾಯ ಇಲಾಖೆ ಭೂ ದಾಖಲೆಗಳ ಸಹಾಯಕ ನಿರ್ದೇಶಕ(ಎಡಿಎಲ್ಆರ್) ಮತ್ತು ಬೆಂಗಳೂರು -ಮೈಸೂರು ಮೂಲಸೌಕರ್ಯ ಕಾರಿಡಾರ್ ಪ್ರದೇಶ ಯೋಜನಾ ಪ್ರಾಧಿಕಾರ (ಬಿಎಂಐಸಿಪಿಎ) ಅಧಿಕಾರಿಗಳು ರೈತರ ಪ್ರಶ್ನೆಗಳಿಗೆ ಉತ್ತರಿಸಲಾಗದೆ ಕಾಲ್ಕಿತ್ತ ಪ್ರಸಂಗ ತಾಲೂಕಿನ ಬಿಡದಿ ಹೋಬಳಿ ಶೇಷಗಿರಿಹಳ್ಳಿ ಗ್ರಾಮದಲ್ಲಿ ಗುರುವಾರ ನಡೆದಿದೆ.
ಇದನ್ನು ಗಮನಿಸಿದ ಪಕ್ಕದ ಜಮೀನಿನವರು ಸೋಮಶೇಖರಯ್ಯ ಪತ್ನಿ ಸುಶೀಲಮ್ಮ ಅವರಿಗೆ ವಿಷಯ ತಿಳಿಸಿದ್ದಾರೆ. ಸ್ಥಳಕ್ಕಾಗಮಿಸಿ ಸರ್ವೆ ಕಾರ್ಯವನ್ನು ಪ್ರಶ್ನೆ ಮಾಡಿದ ಸುಶೀಲಮ್ಮ ಅವರೊಂದಿಗೆ ಅಧಿಕಾರಿಗಳು ಉದ್ಧಟತನ ತೋರಿದ್ದಾರೆ. ಈ ವಿಚಾರ ತಿಳಿದು ಅಕ್ಕಪಕ್ಕದ ರೈತರು ಮತ್ತು ಸ್ಥಳೀಯ ಮುಖಂಡರು ಸ್ಥಳಕ್ಕೆ ಬಂದು ಪ್ರಶ್ನೆ ಮಾಡಿದಾಗ ಅಧಿಕಾರಿಗಳು ಉತ್ತರ ನೀಡಲಾಗದೆ ಕಾರು ಹತ್ತಿ ಪರಾರಿಯಾದರು.
ಶೇಷಗಿರಿಹಳ್ಳಿ ಸರ್ವೆ ನಂಬರ್ 15/9ರ ಜಮೀನು ಸೋಮಶೇಖರಯ್ಯ ಬಿನ್ ದೊಡ್ಡ ನಾರಾಯಣಪ್ಪ ಅವರಿಗೆ ಸೇರಿದ್ದಾಗಿದ್ದು, 1978ರಲ್ಲಿ ಸರ್ಕಾರಿ ಗೋಮಾಳವೂ ಮಂಜೂರಾಗಿದೆ. 2025ರಲ್ಲಿ ಅರ್ಜಿ ಸಲ್ಲಿಸಿದ್ದರೂ ಅಧಿಕಾರಿಗಳು ಪೋಡಿ ಮಾಡುತ್ತಿಲ್ಲ. ಪಕ್ಕದ ಜಮೀನಿನಲ್ಲಿ ಖಾಸಗಿ ವ್ಯಕ್ತಿ ಲೇಔಟ್ ಮಾಡಿರುವ ವಿಚಾರವಾಗಿ ವ್ಯಕ್ತಿಯೊಬ್ಬರು ತಕರಾರು ಅರ್ಜಿ ಸಲ್ಲಿಸಿದ್ದು. ಆ ತಕರಾರು ಬಗೆಹರಿಸಲು ಬಿಎಂಐಸಿಪಿಗೆ ಪತ್ರ ಬರೆದಿರುವುದಾಗಿ ರಾಮನಗರ ತಹಸೀಲ್ದಾರ್ ರವರು ಹಾರಿಕೆ ಉತ್ತರ ಹೇಳಿಕೊಂಡು ದಿನ ದೂಡುತ್ತಿದ್ದಾರೆ ಎಂದು ಭೂ ಮಾಲೀಕರಾದ ಸೋಮಶೇಖರಯ್ಯ ಪತ್ನಿ ಸುಶೀಲಮ್ಮ ಆರೋಪಿಸಿದರು.ಶೇಷಗಿರಿಹಳ್ಳಿ ಸರ್ವೆ ನಂಬರ್ 15/6, 15/7 ರ ಜಮೀನು ಪಕ್ಕದಲ್ಲಿ ಬರುತ್ತದೆ. ನಮಗೆ ಸೇರಿದ ಸರ್ವೆ ನಂಬರ್ 15/9ರ 3 ಎಕರೆಯಲ್ಲಿ ನಾವು ಅನುಭವದಲ್ಲಿದ್ದು, ಬೆಳೆ ಬೆಳೆಯುತ್ತಿದ್ದೇವೆ. ಎಡಿಎಲ್ ಆರ್ ಮತ್ತು ಬಿಎಂಐಸಿಪಿಎ ಅಧಿಕಾರಿಗಳು ಭೂಮಾಲೀಕರಿಗೆ ನೋಟಿಸ್ ನೀಡದೆ ಖಾಸಗಿ ವ್ಯಕ್ತಿಗಳೊಂದಿಗೆ ಬಂದು ಜಮೀನು ಅಳತೆ ಮಾಡುತ್ತಿದ್ದರು. ಅಧಿಕಾರಿಗಳು ನಕ್ಷೆ ಸೇರಿದಂತೆ ಯಾವುದೇ ಅಧಿಕೃತ ದಾಖಲೆಗಳನ್ನು ತಂದಿರಲಿಲ್ಲ. ಇದನ್ನು ಪ್ರಶ್ನಿಸಿದರೆ ಬೇಜವಾಬ್ದಾರಿ ಪ್ರದರ್ಶಿಸುತ್ತಿದ್ದರು ಎಂದು ದೂರಿದರು.
ಗ್ರಾಮ ಮುಖಂಡ ದೇವರಾಜು ಮಾತನಾಡಿ, ಅಧಿಕಾರಿಗಳು ಭೂ ಮಾಲೀಕರಿಗೆ ನೋಟಿಸ್ ನೀಡದೆ ಸರ್ವೆ ಕಾರ್ಯ ಮಾಡುವ ಮೂಲಕ ರೈತರಿಗೆ ದೌರ್ಜನ್ಯ ಎಸಗುತ್ತಿದ್ದಾರೆ. ಬಂಡವಾಳ ಶಾಹಿ ವ್ಯಕ್ತಿಗಳೊಂದಿಗೆ ಶಾಮೀಲಾಗಿರುವ ಅಧಿಕಾರಿಗಳು ರೈತರಿಗೆ ಪೋಡಿ ಮಾಡಿಕೊಡುತ್ತಿಲ್ಲ. ತಾವೇ ಬೇರೆಯವರಿಂದ ತಕರಾರು ಅರ್ಜಿ ಹಾಕಿಸುವ ಜೊತೆಗೆ ರೈತರಿಗೆ ಧಮಕಿ ಹಾಕುತ್ತಿದ್ದಾರೆ ಎಂದು ಆರೋಪಿಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಶಿವಣ್ಣ, ಮಂಜು, ನರಸಿಂಹಮೂರ್ತಿ, ರೈತ ಗೋಪಾಲಯ್ಯ ಮತ್ತಿತರರು ಹಾಜರಿದ್ದರು.
ಶೇಷಗಿರಿಹಳ್ಳಿ ಸರ್ವೆ ನಂಬರ್ 15ರಲ್ಲಿ ಒಟ್ಟು 48 ಎಕರೆ ಜಮೀನು ಬರುತ್ತದೆ. 1978ರಲ್ಲಿಯೇ 15 ಎಕರೆ ಸಾಗುವಳಿ ಚೀಟಿ ಮೂಲಕ ರೈತರಿಗೆ ಹಂಚಿಕೆಯಾಗಿದೆ. ಈಗ ರೈತರ ಜಮೀನನ್ನು ಕಬಳಿಸಲು ಬಂಡವಾಳ ಶಾಹಿಗಳು ಹುನ್ನಾರ ನಡೆಸುತ್ತಿದ್ದು, ಅವರೊಂದಿಗೆ ಸರ್ಕಾರಿ ಅಧಿಕಾರಿಗಳೇ ಕೈಜೋಡಿಸಿದ್ದಾರೆ. ಇದರ ಹಿಂದೆ ದೊಡ್ಡ ಭೂ ಮಾಫಿಯಾ ಕೆಲಸ ಮಾಡುತ್ತಿದೆ. ಇದಕ್ಕೆಲ್ಲ ರಾಜ್ಯ ಸರ್ಕಾರ ಕಡಿವಾಣ ಹಾಕಬೇಕು.
ಕೋಟ್ ..........
-ದೇವರಾಜು, ಮುಖಂಡರು, ಶೇಷಗಿರಿಹಳ್ಳಿ
1.ಶೇಷಗಿರಿಹಳ್ಳಿ ಗ್ರಾಮದಲ್ಲಿ ಸರ್ವೆ ನಡೆಸಲು ಆಗಮಿಸಿದರುವ ಅಧಿಕಾರಿಗಳನ್ನು ರೈತರು ಪ್ರಶ್ನೆ ಮಾಡುತ್ತಿರುವುದು.
2.ರೈತ ಮಹಿಳೆ ಸುಶೀಲಮ್ಮ ಅವರೊಂದಿಗೆ ರೈತರು ಮತ್ತು ಸ್ಥಳೀಯ ಮುಖಂಡರು.