ಮಕ್ಕಳ ಗ್ರಾಮಸಭೆಗೆ ಪಾಲ್ಗೊಳ್ಳದ ಅಧಿಕಾರಿಗಳು

KannadaprabhaNewsNetwork | Published : Dec 11, 2024 12:48 AM

ಸಾರಾಂಶ

ಇಲ್ಲಿನ ಕನಕ ಸಮುದಾಯ ಭವನದಲ್ಲಿ ಬಾಣವರ ಗ್ರಾಮ ಪಂಚಾಯಿತಿ ಮತ್ತು ಪ್ರಕೃತಿ ಫೌಂಡೇಶನ್ ವತಿಯಿಂದ ಮಕ್ಕಳ ವಿಶೇಷ ಹಕ್ಕುಗಳ ಗ್ರಾಮಸಭೆಯನ್ನು ಹಮ್ಮಿಕೊಳ್ಳಲಾಗಿತ್ತು. ಆದರೆ ಈ ಸಭೆಗೆ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿ ಹೊರತುಪಡಿಸಿ ಯಾವ ಇಲಾಖೆಯ ಅಧಿಕಾರಿಯೂ ಸಹ ಪಾಲ್ಗೊಳ್ಳದಿರುವುದು ನಾಚೀಕೆಗೇಡಿನ ಸಂಗತಿಯಾಗಿದೆ. ಅಲ್ಲದೆ ಮಕ್ಕಳಿಗೆ ನಿರಾಸೆ ಉಂಟಾಗಿದೆ.

ಕನ್ನಡಪ್ರಭ ವಾರ್ತೆ ಅರಸೀಕೆರೆ

ಇಲ್ಲಿನ ಕನಕ ಸಮುದಾಯ ಭವನದಲ್ಲಿ ಬಾಣವರ ಗ್ರಾಮ ಪಂಚಾಯಿತಿ ಮತ್ತು ಪ್ರಕೃತಿ ಫೌಂಡೇಶನ್ ವತಿಯಿಂದ ಮಕ್ಕಳ ವಿಶೇಷ ಹಕ್ಕುಗಳ ಗ್ರಾಮಸಭೆಯನ್ನು ಹಮ್ಮಿಕೊಳ್ಳಲಾಗಿತ್ತು. ಆದರೆ ಈ ಸಭೆಗೆ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿ ಹೊರತುಪಡಿಸಿ ಯಾವ ಇಲಾಖೆಯ ಅಧಿಕಾರಿಯೂ ಸಹ ಪಾಲ್ಗೊಳ್ಳದಿರುವುದು ನಾಚೀಕೆಗೇಡಿನ ಸಂಗತಿಯಾಗಿದೆ. ಅಲ್ಲದೆ ಮಕ್ಕಳಿಗೆ ನಿರಾಸೆ ಉಂಟಾಗಿದೆ.

ಗ್ರಾಮಸಭೆಯಲ್ಲಿ ಮಕ್ಕಳು ತಮ್ಮ ಸಮಸ್ಯೆ ಹೇಳಿಕೊಳ್ಳಲು ಕಾತುರದಿಂದ ಭಾಗವಹಿಸಿದ್ದರಾದರೂ ಸಹ ಅಧಿಕಾರಿಗಳ ಗೈರು ಹಾಜರಿ ಮಕ್ಕಳಲ್ಲಿನ ಉತ್ಸಾಹಕ್ಕೆ ನೀರು ಎರಚಿದಂತಾಗಿತ್ತು. ಇಲ್ಲಿ ನಡೆದ ಗ್ರಾಮ ಸಭೆಯಲ್ಲಿ ಮಕ್ಕಳು ತಮ್ಮ ತಮ್ಮ ಶಾಲೆಗಳಲ್ಲಿನ ಸಮಸ್ಯೆಗಳನ್ನು ಹೇಳಿಕೊಂಡರು. ಬಹುತೇಕ ಮಕ್ಕಳು ಶಾಲೆಯಲ್ಲಿನ ಶೌಚಾಲಯದ ವ್ಯವಸ್ಥೆಯನ್ನು ಸರಿಪಡಿಸುವಂತೆ ಮತ್ತು ಶಾಲಾ ಕಾಂಪೌಂಡ್‌ನ್ನು ವ್ಯವಸ್ಥೆ ಸರಿ ಪಡಿಸುವಂತೆ ಕೇಳಿಕೊಂಡರು. ಶಾಲಾ ವಲಯದಲ್ಲಿ ಕುಡಿಯುವ ನೀರಿನ ಸಮಸ್ಯೆ ಮತ್ತು ಆಟದ ಮೈದಾನದ ಸಮಸ್ಯೆ ಸೇರಿದಂತೆ ಸಮಸ್ಯೆಗಳು ಇವೆ ಎಂದು ಅವಹಾಲು ತೋಡಿಕೊಂಡರು. ಪೇಟೆ ಶಾಲೆಯ ಓರ್ವ ವಿದ್ಯಾರ್ಥಿ ಶಾಲೆಗೆ ಕಾಂಪೌಂಡ್‌ ನಿರ್ಮಾಣ ಮಾಡಿದ್ದರೂ ಸಹ ಸಂಜೆಯ ಸಮಯದಲ್ಲಿ ಕೆಲವು ಜನರು ಕಾಂಪೌಂಡ್‌ ಜಿಗಿದು ಜನ ಒಳಗಡೆ ನುಗ್ಗಿ ಶಾಲಾ ಆವರಣವನ್ನು ಕೊಳಕು ಮಾಡುತ್ತಾರೆ. ಶಾಲಾ ಹೊರಭಾಗದಲ್ಲಿ ದ್ವಿಚಕ್ರ ವಾಹನ ಸವಾರರು ಅತಿ ವೇಗ ಮತ್ತು ಅಜಾಗರೂಕತೆಯಿಂದ ವಾಹನವನ್ನು ಓಡಿಸುತ್ತಾರೆ. ಇದರಿಂದ ನಮಗೆ ಭಯವಾಗುತ್ತದೆ. ಆದ್ದರಿಂದ ಆ ಭಾಗದಲ್ಲಿ ಉಬ್ಬುದಿಣ್ಣೆಗಳನ್ನು ನಿರ್ಮಾಣ ಮಾಡಿ ಕೊಡಬೇಕುರು. ಹಾಗೆಯೇ ಇರುವ ಶೌಚಾಲಯದ ವ್ಯವಸ್ಥೆ ಸರಿಯಿಲ್ಲ ಹಾಗೂ ಇನ್ನೊಂದು ಶೌಚಾಲಯ ನಿರ್ಮಾಣ ಮಾಡಿಕೊಡುವಂತೆ ಮನವಿ ಮಾಡಿಕೊಂಡರು.

ಶಾಲೆ ಪ್ರಾರಂಭವಾಗಿ ಅರ್ಥ ವಾರ್ಷಿಕ ರಜೆ ಮುಗಿದು ಈಗ ಪರೀಕ್ಷೆಗಳು ಸನಿಹವಾಗುತ್ತಿದ್ದರೂ ಸಹ ಪಠ್ಯ ಪುಸ್ತಕಗಳು ದೊರೆತಿಲ್ಲವೆಂದು ತಮ್ಮ ಅಳಲನ್ನು ತೋಡಿಕೊಂಡರು. ಹಾಗೆಯೇ ಕೋಟೆ ಶಾಲೆಯ ವಿದ್ಯಾರ್ಥಿಗಳು ಸಹ ತಮ್ಮ ಶಾಲೆಯ ಆವರಣದಲ್ಲಿ ಆಟದ ಮೈದಾನದ ವ್ಯವಸ್ಥೆ ಇಲ್ಲ ಮತ್ತು ಕೋಟಿಯ ಶಾಲೆಯ ಹಿಂಭಾಗದಲ್ಲಿ ಗಿಡಗಂಟಿ ಬೆಳೆದಿದ್ದು ಇದರಿಂದ ಹಾವುಗಳ ಹಾವಳಿ ಹೆಚ್ಚಾಗಿರುವುದರಿಂದ ಇಲ್ಲಿ ಸ್ವಚ್ಛತೆ ಕಾಪಾಡಲು ಮನವಿ ಮಾಡಿದರು.

ಹೀಗೆ ಹಲವಾರು ಶಾಲೆಯ ಮಕ್ಕಳು ಭಾಗವಹಿಸಿ ತಮ್ಮ ಶಾಲೆಯ ಆವರಣದಲ್ಲಿ ಆಗುವ ಶಾಲಾ ವ್ಯಾಪ್ತಿಯಲ್ಲಿ ಇರುವಂತಹ ಸಮಸ್ಯೆಗಳನ್ನು ನಿವಾರಿಸುವಂತೆ ಮನವಿ ಮಾಡಿಕೊಂಡರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಪಿಡಿಒ ಕುಮಾರಸ್ವಾಮಿರವರು ಸಂಬಂಧಪಟ್ಟ ಇಲಾಖೆಗಳ ಗಮನಕ್ಕೆ ತಂದು ಸಮಸ್ಯೆಯನ್ನು ಬಗೆಹರಿಸುವ ಭರವಸೆಯನ್ನು ನೀಡಿದರು.

ಸಮಾರಂಭದ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ವೀಣಾ ವಿಶ್ವನಾಥ್ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಸದರಿ ಮಾಹಿತಿಯನ್ನು ಗಮನಕ್ಕೆ ತಂದು ಅತ್ಯಂತ ತುರ್ತಾಗಿ ಮಕ್ಕಳ ಸಮಸ್ಯೆಯನ್ನು ಬಗೆಹರಿಸುವಂತೆ ಪಿಡಿಒರವರಿಗೆ ಸೂಚನೆ ನೀಡಿದರು.

ಗ್ರಾ.ಪಂ. ಸದಸ್ಯ ಬಿ ಆರ್‌ ಶ್ರೀಧರ್ ಮಾತನಾಡಿ, ಸಮಸ್ಯೆಗಳಿಗೆ ಅತೀ ಶೀಘ್ರದಲ್ಲಿ ಪರಿಹಾರ ಬೇಡುವ ನಿಟ್ಟಿನಲ್ಲಿ ಹೋರಾಡುವುದರ ಜೊತೆಗೆ ಸಮಸ್ಯೆ ತೀವ್ರ ಸ್ವರೂಪದ್ದಾಗಿದ್ದರೆ ಶಾಸಕರ ಗಮನಕ್ಕೂ ತಂದು ಸಮಸ್ಯೆ ಬಗೆಹರಿಸುವ ಪ್ರಯತ್ನ ಮಾಡಲಾಗುವುದು. ಈ ಕಾರ್ಯಕ್ರಮಕ್ಕೆ ಅಧಿಕಾರಿಗಳು ಭಾಗವಹಿಸದೇ ಇರುವುದರಿಂದ ಮುಂಬರುವ ದಿನಗಳಲ್ಲಿ ಈ ರೀತಿ ಆಗದ ಹಾಗೆ ಕಟ್ಟುನಿಟ್ಟಿನ ಕ್ರಮವನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಗ್ರಾಪಂ ಸದಸ್ಯರಾದ ಬಿಡಿ ಮಲ್ಲಿಕಾರ್ಜುನ್ ಡಿ ಆರ್‌ ರಾಜು, ಸಕ್ರೆಟರಿ ಕೆ ಎಸ್ ಶ್ರೀನಾಥ್, ಪ್ರಕೃತಿ ಫೌಂಡೇಶನ್ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.

Share this article