ಚನ್ನಪಟ್ಟಣ: ವಾರ್ಡ್‌ಗಳಲ್ಲಿ ಸ್ವಚ್ಛತೆ ಸೇರಿದಂತೆ ಸಾಕಷ್ಟು ಸಮಸ್ಯೆ ಇದ್ದು, ಚುನಾಯಿತ ಸದಸ್ಯರ ಮಾತಿಗೆ ಅಧಿಕಾರಿಗಳು ಸ್ಪಂದಿಸುವುದೇ ಇಲ್ಲ. ನಮಗೆ ಮತ ನೀಡಿ ಗೆಲ್ಲಿಸಿದ ಜನರಿಗೆ ಉತ್ತರಿಸುವುದೇ ಕಷ್ಟಕರವಾಗಿದೆ ಎಂದು ನಗರಸಭೆ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದ ಪ್ರಸಂಗ ನಗರಸಭೆ ಸಾಮಾನ್ಯ ಸಭೆಯಲ್ಲಿ ನಡೆಯಿತು.
ಪಟ್ಟಣದ ನಗರಸಭೆ ಸಭಾಂಗಣದಲ್ಲಿ ಅಧ್ಯಕ್ಷ ವಾಸೀಲ್ ಅಲಿಖಾನ್ ಅಧ್ಯಕ್ಷತೆಯಲ್ಲಿ ಹಮ್ಮಿಕೊಂಡಿದ್ದ ಸಾಮಾನ್ಯ ಸಭೆಯಲ್ಲಿ ಅಧಿಕಾರಿಗಳು ನಮ್ಮ ಮಾತು ಕೇಳುತ್ತಿಲ್ಲ ಎಂದು ಕೆಲ ಸದಸ್ಯರು ಆರೋಪಿಸಿದರು.ಸಭೆಯಿಂದ ಹೊರನಡೆದ ಸದಸ್ಯೆ:ಸಭೆಯ ಪ್ರಾರಂಭದಲ್ಲಿಯೇ ಸದಸ್ಯೆ ಕಮಲಾ ರಾಮು, ನಗರಸಭೆ ಆಡಳಿತ ವೈಖರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ನಮ್ಮ ವಾರ್ಡ್‌ನಲ್ಲಿ ಸ್ವಚ್ಛತೆ ಸೇರಿ ಸಾಕಷ್ಟು ಸಮಸ್ಯೆಗಳಿವೆ. ಸಮಸ್ಯೆಗಳ ಬಗ್ಗೆ ಸಭೆಯಲ್ಲಿ ಹಾಗೂ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಹೀಗಾದರೆ, ಸಭೆಯ ಪ್ರಯೋಜನವೇನು? ಎಂದು ಸ್ವಪಕ್ಷದ ಆಡಳಿತದ ವಿರುದ್ಧ ಬೇಸರ ವ್ಯಕ್ತಪಡಿಸಿದ ಅವರು, ಪ್ರಾರಂಭದಲ್ಲಿಯೇ ಸಭೆಯಿಂದ ಹೊರನಡೆದರು.
ಅಂಗನವಾಡಿಗೆ ಆಗ್ರಹ:ನಗರದಲ್ಲಿ ನಿರ್ಮಾಣವಾಗಬೇಕಾದ ಅಂಗನವಾಡಿ ಕಟ್ಟಡ ಹಾಗೂ ಅವುಗಳ ನಿವೇಶನಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ಈ ವೇಳೆ ೧೫ನೇ ವಾರ್ಡ್ ಸದಸ್ಯೆ ಸುಮಾ ರವೀಶ್ ನಮ್ಮ ವಾರ್ಡ್ ಅಂಗನವಾಡಿ ಅಭಿವೃದ್ಧಿ ಬಗ್ಗೆ ಸಾಕಷ್ಟು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಆದರೆ ೧೪ನೇ ವಾರ್ಡ್‌ನಲ್ಲಿ ಕಟ್ಟಡಕ್ಕೆ ಅನುಮೋದನೆ ದೊರಕಿದೆ. ಎರಡು ವಾರ್ಡ್‌ಗಳು ಎಲೆಕೇರಿ ಗ್ರಾಮಕ್ಕೆ ಸೇರುತ್ತವೆ. ಕಾಮಗಾರಿ ಪ್ರಾರಂಭ ಮಾಡಬೇಕಾದರೆ ನಮ್ಮ ವಾರ್ಡ್‌ನ ಅಂಗನವಾಡಿ ಕಾಮಗಾರಿಯೂ ಪ್ರಾರಂಭವಾಗಬೇಕು ಎಂದು ಆಗ್ರಹಿಸಿದರು. ಈ ವಿಚಾರವಾಗಿ ೧೪ನೇ ವಾರ್ಡ್ ಸದಸ್ಯ ಶ್ರೀನಿವಾಸ ಮೂರ್ತಿ ನಡುವೆ ಬಿರುಸಿನ ಚರ್ಚೆ ನಡೆಯಿತು.
ಜೆಸಿಬಿ, ಡೀಸೆಲ್ ಗಲಾಟೆ:ಸದಸ್ಯರು ವಾರ್ಡ್ ಸ್ವಚ್ಛತೆಗಾಗಿ ಜೆಸಿಬಿ ಕೇಳಿದರೆ ಇಲ್ಲ ಎನ್ನುತ್ತಾರೆ. ಆದರೆ, ಪ್ರತಿ ತಿಂಗಳು ವಾಹನಗಳ ಡೀಸೆಲ್‌ಗಾಗಿ ೩.೫ ಲಕ್ಷ ರು. ವೆಚ್ಚವಾಗುತ್ತಿದೆ. ಯಾವ ವಾಹನ ಎಲ್ಲಿ ಕೆಲಸ ಮಾಡುತ್ತದೆ ಎಂಬುದೇ ಸದಸ್ಯರಿಗೆ ತಿಳಿಯುತ್ತಿಲ್ಲ. ಆರೋಗ್ಯ ನಿರೀಕ್ಷಕರು ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದು ಹಲವು ಸದಸ್ಯರು ಆರೋಗ್ಯ ನಿರೀಕ್ಷಕರ ವಿರುದ್ಧ ಮುಗಿಬಿದ್ದರು.
ಈ ವಿಚಾರವಾಗಿ ಅಧ್ಯಕ್ಷ ವಾಸಿಲ್ ಸಹ ಆರೋಗ್ಯ ಶಾಖೆಯ ವಿರುದ್ಧ ಗರಂ ಆದರು. ಪೌರಕಾರ್ಮಿಕ ಮೇಸ್ತ್ರಿಗಳು ಸಹ ಸಮರ್ಪಕವಾಗಿ ಕೆಲಸ ನಿರ್ವಹಿಸುತ್ತಿಲ್ಲ. ಅಂತಹವರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.ಗ್ಯಾಸ್ ಪೈಪ್‌ಲೈನ್ ಸಮಸ್ಯೆ:
ನಗರದಲ್ಲಿನ ಗ್ಯಾಸ್ ಪೈಪ್‌ಲೈನ್ ಅವಾಂತರದ ಬಗ್ಗೆ ಬಹುತೇಕ ಸದಸ್ಯರು ಸಭೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು. ಕಾಮಗಾರಿಗಾಗಿ ಅಗೆಯಲಾದ ರಸ್ತೆಗಳನ್ನು ಸರಿಪಡಿಸುತ್ತಿಲ್ಲ. ಇದು ಎಲ್ಲ ವಾರ್ಡ್‌ಗಳಲ್ಲೂ ಸಾಮಾನ್ಯವಾಗಿದೆ. ಗುತ್ತಿಗೆದಾರರು ನಗರಸಭೆ ಅಧಿಕಾರಿಗಳಿಗೆ ಸ್ಪಂದಿಸುತ್ತಿಲ್ಲ ಎಂದಮೇಲೆ ಅವರ ವಿರುದ್ಧ ಶಿಸ್ತು ಕ್ರಮಕ್ಕೆ ಜಿಲ್ಲಾಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಿ ಎಂದು ಸಲಹೆ ನೀಡಿದರು.ಜತೆಗೆ ಸಭೆಯಲ್ಲಿ ಅಧಿಕಾರಿಗಳು ಹಾಗೂ ಸಿಬ್ಬಂದಿ ಕೊರತೆಯ ಬಗ್ಗೆಯೂ ಚರ್ಚಿಸಲಾಯಿತು. ಶೆಟ್ಟಿಹಳ್ಳಿ ಕೆರೆ ಅಭಿವೃದ್ಧಿ ಕಾಮಗಾರಿಯ ಅನುದಾನವನ್ನು ನಿರ್ಮಿತಿ ಕೇಂದ್ರಕ್ಕೆ ನೀಡುವ ಬಗ್ಗೆ, ಕೊರತೆಯಿರುವ ಸಿಬ್ಬಂದಿ ಭರ್ತಿ ಮಾಡಲು ಕ್ರಮವಹಿಸುವ ಬಗ್ಗೆ ಹಾಗೂ ಟೆಂಡರ್ ಪ್ರಕ್ರಿಯೆ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.
ಸಭೆಯಲ್ಲಿ ಉಪಾಧ್ಯಕ್ಷ ಲೋಕೇಶ್, ಸ್ಥಾಯಿ ಸಮಿತಿ ಅಧ್ಯಕ್ಷ ಕೋಟೆಚಂದ್ರು, ಪೌರಾಯುಕ್ತ ಮಹೇಂದ್ರ ಹಾಗೂ ಇತರರಿದ್ದರು.ಪೊಟೋ೧೬ಸಿಪಿಟಿ೧:
ಚನ್ನಪಟ್ಟಣದ ನಗರಸಭೆ ಸಭಾಂಗಣದಲ್ಲಿ ಅಧ್ಯಕ್ಷ ವಾಸೀಲ್ ಅಲಿಖಾನ್ ಅಧ್ಯಕ್ಷತೆಯಲ್ಲಿ ಸಾಮಾನ್ಯ ಸಭೆ ನಡೆಯಿತು.