ಅಸ್ಪೃಶ್ಯತೆ ಅನಿಷ್ಠತೆಗೆ ತಿಲಾಂಜಲಿ ಇಟ್ಟ ಅಧಿಕಾರಿಗಳು

KannadaprabhaNewsNetwork |  
Published : Feb 25, 2026, 03:15 AM IST
ಅಶ್ಪೃಶ್ಯತೆಯೆಂಬ ಅನಿಷ್ಠ ಪದ್ಧತಿಗೆ ತಿಲಾಂಜಲಿ ಇಟ್ಟ ಅಧಿಕಾರಿಗಳು, ಸಂತಸಗೊಂಡ ದಲಿತರು. | Kannada Prabha

ಸಾರಾಂಶ

ಬಾಗಲಕೋಟೆ ಜಿಲ್ಲೆಯ ತೇರದಾಳ ತಾಲೂಕಿನ ತಮದಡ್ಡಿ ಗ್ರಾಮದಲ್ಲಿ ನಡೆದ ಸಾಮಾಜಿಕ‌ ಬಹಿಷ್ಕಾರ ವಿವಾದ ಜಮಖಂಡಿ ಎಸಿ ಶ್ವೇತಾ ಬೀಡಿಕರ ಹಾಗೂ ಪೊಲೀಸರ ಮಧ್ಯಸ್ಥಿಕೆಯಲ್ಲಿ ಸುಖಾಂತ್ಯಗೊಂಡಿದೆ.

ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ

ಬಾಗಲಕೋಟೆ ಜಿಲ್ಲೆಯ ತೇರದಾಳ ತಾಲೂಕಿನ ತಮದಡ್ಡಿ ಗ್ರಾಮದಲ್ಲಿ ನಡೆದ ಸಾಮಾಜಿಕ‌ ಬಹಿಷ್ಕಾರ ವಿವಾದ ಜಮಖಂಡಿ ಎಸಿ ಶ್ವೇತಾ ಬೀಡಿಕರ ಹಾಗೂ ಪೊಲೀಸರ ಮಧ್ಯಸ್ಥಿಕೆಯಲ್ಲಿ ಸುಖಾಂತ್ಯಗೊಂಡಿದೆ.

ತಾಲೂಕಿನ ತಮದಡ್ಡಿ ಗ್ರಾಮದ ದಲಿತರು ತಮಗೆ ಹಲವು ದಶಕಗಳಿಂದ ದೇವಸ್ಥಾನ ಪ್ರವೇಶ ನೀಡದೆ ಹಾಗೂ ಕ್ಷೌರ ಮಾಡದೆ, ಗ್ರಾಮದ ಯಾವುದೇ ಜಾತ್ರೆ ಹಬ್ಬ ಹರಿದಿನಗಳಲ್ಲಿ ಸಹಭೋಜನಕ್ಕೆ ಅವಕಾಶ ನೀಡದೆ ತಾರತಮ್ಯ ಮಾಡಿ ಅಸ್ಪೃಶ್ಯತೆ ಮುಂದುವರೆಸಿಕೊಂಡು ಹೋಗುತ್ತಿದ್ದಾರೆ ಎಂದು ಆರೋಪಿಸಿ ಫೆ.೧೭ರಂದು ಡಿವೈಎಸ್ಪಿ, ಎ.ಸಿ. ಮತ್ತು ಸಮಾಜಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು.

ಇದನ್ನು ಗಂಭೀರವಾಗಿ ತೆಗೆದುಕೊಂಡ ಉಪವಿಭಾಗಾಧಿಕಾರಿ ಶ್ವೇತಾ ಬೀಡಿಕರ್, ತಹಸೀಲ್ದಾರ್‌ ಹಾಗೂ ಪೊಲೀಸ್ ಅಧಿಕಾರಿಗಳು, ಜಮಖಂಡಿ ಡಿ.ವೈ.ಎಸ್.ಪಿ. ರೋಷನ್ ಜಮೀರ್‌ ಗ್ರಾಮಕ್ಕೆ ಭೇಟಿ ನೀಡಿ ಶಾಂತಿ ಸಭೆ ನಡೆಸಿದ ಗ್ರಾಮಸ್ಥರ ಮನವೊಲಿಸಿ, ದಲಿತರಿಗೆ ದೇವಸ್ಥಾನ ಪ್ರವೇಶ ಮಾಡಿಸಿ ಪೂಜೆ ಮಾಡಿಸಿದರು. ಗ್ರಾಮದಲ್ಲಿನ ಹೇರ್ ಕಟಿಂಗ್‌ ಅಂಗಡಿಯಲ್ಲಿ ದಲಿತ ವ್ಯಕ್ತಿಗೆ ಕ್ಷೌರ ಮಾಡಿಸಿದರು. ಮುಂಬರುವ ಹಬ್ಬಹರಿದಿನಗಳಲ್ಲಿ ಗ್ರಾಮಸ್ಥರು ಹಾಗೂ ಅಧಿಕಾರಿಗಳ ಸಮೇತ ದಲಿತರೊಂದಿಗೆ ಸಹಭೋಜನ ಮಾಡುವುದಾಗಿ ಭರವಸೆ ನೀಡಿದರು.

ಇದಕ್ಕೂ ಮುನ್ನ ಸಂಧಾನ ಸಭೆಯಲ್ಲಿ ಮಾತನಾಡಿದ ಜಮಖಂಡಿ ಡಿ.ವೈ.ಎಸ್.ಪಿ. ರೋಷನ್ ಜಮೀರ್‌, ಸಮಾಜದಲ್ಲಿ ಯವಾಗಲೂ ಆರೋಗ್ಯಕರ ಚರ್ಚೆಗಳಾಗಬೇಕು. ಅದರಿಂದ ಆರೋಗ್ಯಕರ ಸಮಾಜ ನಿರ್ಮಾಣವಾಗುವುದು. ಸಮಸ್ಯೆಗಳಾದ ಧ್ವನಿ ಎತ್ತಬೇಕು. ಯಾವುದೇ ಗ್ರಾಮವಿರಲಿ ಅಲ್ಲಿ ಸಾಮರಸ್ಯದ ಬದುಕಿರಬೇಕು. ಜಾತಿಗಳು ನಮ್ಮ ಕುಲಕಸಬಿನ ಆಧಾರದ ಮೇಲೆ ಬಂದಿವೆ ಹೊರತು ಹುಟ್ಟಿನಿಂದಲ್ಲ. ಪ್ರತಿಯೊಬ್ಬರಲ್ಲಿ ಹರಿಯುವ ರಕ್ತವೊಂದೆ ಇರುವಾಗ ತಾರತಮ್ಯವೇಕೆ? ಮುಗಿದು ಹೋಗಿ ಸಮಾಧಿಯಾದ ಕೆಟ್ಟ ಅಧ್ಯಾಯವನ್ನು ಮತ್ತೆ ತೆಗೆಯಬೇಡಿ. ಅದು ನಮ್ಮನ್ನೇ ಸಮಾಧಿ ಮಾಡಿಬಿಡುತ್ತದೆ ಎಂದು ಜಮಖಂಡಿ ಡಿ.ವೈ.ಎಸ್.ಪಿ. ರೋಷನ್ ಜಮೀರ್‌ ಹೇಳಿದರು.

ಸಭೆಯಲ್ಲಿ ಮಾತನಾಡಿದ ಎಸಿ ಶ್ವೇತಾ ಬೀಡಿಕರ್, ಇಂತಹ ಅನಾಚಾರಗಳನ್ನು ಸರಕಾರ ಸಹಿಸದು. ಸಂವಿಧಾನದಲ್ಲಿ ಪ್ರತಿಯೊಬ್ಬರಿಗೂ ಗೌರಯುತವಾಗಿ ಬದುಕುವ ಹಕ್ಕು ಇದೆ. ಇಂದು ನಾವೆಲ್ಲರೂ ಆಧುನಿಕ ಭಾರತದಲ್ಲಿ ಬದುಕುತ್ತಿದ್ದೇವೆ. ಕಾರಣ ಕೀಳುಮಟ್ಟದ ಆಚರಣೆ ಬೇಡ ಶ್ರೇಷ್ಠ ವಿಚಾರಗಳನ್ನು ಅಳವಡಿಸಿಕೊಂಡು ಪರಸ್ಪರರನ್ನು ಗೌರವಿಸುತ್ತಾ ಬದುಕೋಣ. ಇನ್ಮುಂದೆ ಪೂಜಾರಿಗಳಾಗಲಿ ಅಥವಾ ಆಡಳಿತ ಮಂಡಳಿಯವರಾಗಲಿ ದಲಿತರಿಗೆ ಕಡ್ಡಾಯವಾಗಿ ಗ್ರಾಮದಲ್ಲಿರುವ ಎಲ್ಲಾ ದೇವಸ್ಥಾನ, ಮಠ ಮಂದಿರಗಳಲ್ಲಿ ಪ್ರವೇಶ ನೀಡಲೇಬೇಕು. ತಪ್ಪಿದಲ್ಲಿ ಕಠಿಣ ಶಿಕ್ಷೆಗೆ ಗುರಿಯಾಗುವಿರಿ ಎಂದು ತಾಕೀತು ಮಾಡಿದರಲ್ಲದೆ,

ಉಪವಿಭಾಗಾಧಿಕಾರಿ ಶ್ವೇತಾ ಬಿಡಿಕರ ಅವರು ಮಾತನಾಡಿ, ಇದು ಅಮಾನವೀಯ ಘಟನೆ ಇಂತಹ ಘಟನೆಗಳು ಎಲ್ಲಿಯೂ ಆಗಬಾರದು. ನಮ್ಮ ಸಂವಿಧಾನ ಪ್ರತಿಯೊಬ್ಬರಿಗೂ ಸಮಾನತೆಯಿಂದ ಬದುಕುವ ಹಕ್ಕು ನೀಡಿದೆ. ಇಲ್ಲಿನ ದಲಿತರು ನೀವು ಬದಲಾಗಬಹುದು ಎಂಬ ನಿರೀಕ್ಷೆ ಇಟ್ಟುಕೊಂಡು ಇಲ್ಲಿಯವರೆಗೂ ಸಹಿಸಿಕೊಂಡು ಬಂದಿದ್ದಾರೆ. ಈಗಲಾದರೂ ನೀವು ಸರಿಪಡಿಸಿಕೊಳ್ಳಬೇಕು. ಹಿಂದೆ ಏನಾಗಿದೆ ಅದೀಗ ಬೇಡ. ನಿಮ್ಮೆಲ್ಲರನ್ನೂ ನಾನು ಗಮನಿಸಿದ್ದೇನೆ. ನೀವೆಲ್ಲರೂ ಬೌದ್ಧಿಕವಾಗಿ ಪ್ರಭುದ್ಧರಿದ್ದೀರಿ. ನಮ್ಮ ಘನತೆ ಗೌರವಕ್ಕೆ ಧಕ್ಕೆ ತರುವ ಅನಾಚಾರಗಳು ಬೇಡ. ನಾವೆಲ್ಲರೂ ಒಂದೇ ಎನ್ನುವ ಭಾವ ಮೂಡಲಿ. ಎಲ್ಲರೂ ಸಾಮರಸ್ಯದಿಂದ ಜೀವನ ಮಾಡಿ ನಿಮ್ಮಿಂದ ಈ ಗ್ರಾಮವು ಆದರ್ಶಗ್ರಾಮವಾಗಲಿ ಕಿವಿಮಾತು ಹೇಳಿದರು.

ಸಮಾಜ ಕಲ್ಯಾಣ ಇಲಾಖೆ, ಪಂಚಾಯತಿ ಇಲಾಖೆ, ಕಂದಾಯ ಇಲಾಖೆಯ ಎಲ್ಲ ಅಧಿಕಾರಿಗಳು ಉಪಸ್ಥಿತರಿದ್ದರು. ಪಿ,ಎಸ್.ಐ. ಸಿಂಗನ್ನವರ ನಿರೂಪಿಸಿ ವಂದಿಸಿದರು.

ಪಿಡಿಒ ಸಸ್ಪೆಂಡ್‌ ಮಾಡಲು ಒತ್ತಾಯ: ತಮದಡ್ಡಿ ಗ್ರಾಮಪಂಚಾಯತಿ ಪಿಡಿಒ ಎಸ್.ಸಿ & ಎಸ್.ಟಿ ಅನುದಾನದ ಹಣ ದುರ್ಬಳಕೆ ಮಾಡಿಕೊಂಡಿದ್ದಾರೆ. ನಮ್ಮ ಪ್ರದೇಶದಲ್ಲಿ ಏನು ಅಭಿವೃದ್ಧಿ ಕಾರ್ಯ ಮಾಡಿಲ್ಲ. ಚರಂಡಿ, ರಸ್ತೆ ಕೆಲಸ ಮಾಡಿ ಎಂದರೆ ಇದು ಮುಳಗಡೆ ಪ್ರದೇಶವಿದೆ ಎಂದು ಹಾರಿಕೆ ಉತ್ತರ ಕೊಟ್ಟು ನಮ್ಮ ಹಣ ದುರುಪಯೋಗ ಮಾಡಿಕೊಂಡಿದ್ದಾರೆ. ತಕ್ಷಣವೇ ಅವರ ಮೇಲೆ ಅಟ್ರಾಸಿಟಿ ಕೇಸ್ ದಾಖಲಿಸಬೇಕು. ಕೂಡಲೇ ಸಸ್ಪೆಂಡ್‌ ಮಾಡಬೇಕು ಎಂದು ದಲಿತರು ಒತ್ತಾಯಿಸಿದರು. ಈ ಕುರಿತು ಮೇಲಧಿಕಾರಿಗಳ ಗಮನಕ್ಕೆ ತಂದುಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಉಪವಿಭಾಗಾಧಿಕಾರಿ ಭರವಸೆ ನೀಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಾಳೆ 25 ಪುಸ್ತಕಗಳ ಲೋಕಾರ್ಪಣೆ, ಬೆರಗು ಪ್ರಶಸ್ತಿ ಪ್ರದಾನ
ಯಶಸ್ಸು ನೆತ್ತಿಗೆರಬಾರದು