ಕನ್ನಪ್ರಭ ವಾರ್ತೆ ಉಳ್ಳಾಲ
ಅಂತರ್ಜಲಕ್ಕೆ ತೈಲ ಮಿಶ್ರಣದಿಂದ ಬಾವಿ, ಕೊಳವೆ ಬಾವಿಗಳಲ್ಲಿ ಕುಡಿಯುವ ನೀರು ಕಲುಷಿತಗೊಂಡಿರುವ ಪರಿಣಾಮ ಮುಡಿಪು ಸಮೀಪದ ಸಂಬಾರು ತೋಟ ಪರಿಸರದ ಸ್ಥಳೀಯರು ಕಳೆದ ಆರು ತಿಂಗಳಿಂದ ನೀರಿನ ಸಮಸ್ಯೆ ಎದುರಿಸುತ್ತಿದ್ದು ನಿವಾಸಿಗಳು ಆತಂಕ ಎದುರಿಸುವಂತಾಗಿದೆ.ಈ ಪ್ರದೇಶದಲ್ಲಿ ಸುಮಾರು ನೂರಕ್ಕೂ ಹೆಚ್ಚು ಮನೆಗಳಿದ್ದು ಇದೀಗ ಈ ಪರಿಸರದ 12 ಕೊಳವೆ ಬಾವಿ ಹಾಗೂ ನಾಲ್ಕೈದು ಬಾವಿಗಳ ನೀರಿನಲ್ಲಿ ತೈಲ ಮಿಶ್ರಿತ ನೀರು ಕಂಡು ಬಂದಿದೆ. ನೀರಿನಲ್ಲಿ ಕಾರ್ಬನ್ ಅನಾಲಿಸ್ಟಿಕ್ ಟೆಸ್ಟ್, ವಿಒಸಿ ಟೆಸ್ಟ್, ಮಂಗಳೂರು ಬಯೊಟೆಕ್ ಲ್ಯಾಬೋರೇಟರ್ ಸೇರಿದಂತೆ ಆರೋಗ್ಯ ಇಲಾಖೆಯಿಂದ ಪರೀಕ್ಷೆ ನಡೆಸಲಾಗಿದ್ದು, ತೈಲಾಂಶ ಮಿಶ್ರಿತ ಪ್ರಮಾಣ ಕಂಡು ಬಂದ ಕಾರಣ ಕುಡಿಯಲು ಯೋಗ್ಯವಲ್ಲ ಎಂದು ವರದಿ ನೀಡಲಾಗಿದೆ.ಸಂಬಾರ ತೋಟ ಪ್ರದೇಶದಲ್ಲಿ ಈಗಾಗಲೇ ಹಲವು ಮನೆಗಳ ಸದಸ್ಯರಲ್ಲಿ ಕೆಮ್ಮು, ವಾಂತಿ ಬೇಧಿ ಸೇರಿದಂತೆ ಚರ್ಮದ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿದ್ದು ಪರಿಸರದ ನಿವಾಸಿಗಳು ಆತಂಕಗೊಂಡಿದ್ದಾರೆ.
ಈ ಭಾಗದ ಅನೇಕ ಮನೆಗಳಿಗೆ ಪಂಚಾಯಿತಿಯ ನೀರಿನ ಸಂಪರ್ಕವೂ ಇಲ್ಲದಿರುವುದರಿಂದ ಜನರು ಕುಡಿಯುವ ನೀರಿಗಾಗಿ ಪರದಾಡುತ್ತಿದ್ದಾರೆ. ಕಳೆದ ಆರು ತಿಂಗಳ ಹಿಂದೆಯೇ ಇಲ್ಲಿ ಸಮಸ್ಯೆ ಎದುರಾದಾಗ ಪಜೀರು ಗ್ರಾಮ ಪಂಚಾಯಿತಿ, ಆರೋಗ್ಯ ಇಲಾಖೆ ಹಾಗೂ ಇತರ ಇಲಾಖೆಗಳಿಗೆ ಸಮಸ್ಯೆ ಪರಿಹರಿಸಲು ಮನವಿ ಮಾಡಿದ್ದರು.ಇತ್ತೀಚೆಗೆ ನೀರಿನ ಸಮಸ್ಯೆ ಹೆಚ್ಚುತ್ತಿರುವುದರಿಂದ ಸ್ಥಳೀಯರು ಮತ್ತೊಮ್ಮೆ ವಿವಿಧ ಇಲಾಖೆಗಳಿಗೆ ದೂರು ನೀಡಿದ್ದು, ಕಳೆದ ಕೆಲವು ದಿನಗಳ ಹಿಂದೆ ಉಳ್ಳಾಲ ತಾಲೂಕು ತಹಸೀಲ್ದಾರ್, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಲಕ್ಷ್ಮೀಕಾಂತ್, ಪಜೀರು ಪಂಚಾಯಿತಿ ಅಧ್ಯಕ್ಷ ರಫೀಕ್, ಕುರ್ನಾಡು ಆರೋಗ್ಯಾಧಿಕಾರಿ, ಇತರ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಧಿಕಾರ ಸೂಚನೆಯಂತೆ ಪಜೀರು ಪಂಚಾಯಿತಿಯು ಸಾಂಬಾರ್ ತೋಟದಲ್ಲಿರುವ ಪೆಟ್ರೋಲ್ ಪಂಪನಲ್ಲಿ ಬಸ್ ಹಾಗೂ ಇತರ ವಾಹನಗಳನ್ನು ತೊಳೆಯದಂತೆ ಸೂಚನೆ ನೀಡಿತ್ತು.
ಸ್ಪೀಕರ್ ಯು.ಟಿ. ಖಾದರ್ ನಿರ್ದೇಶನದಂತೆ ಉಳ್ಳಾಲ ತಹಸೀಲ್ದಾರ್ ಹಾಗೂ ಅಧಿಕಾರಿಗಳ ತಂಡ ಬುಧವಾರದಂದು ಭೇಟಿ ನೀಡಿ ಪರಿಶೀಲಿಸಿದರು.---
ನಮಗೆ ಪಂಚಾಯಿತಿ ನೀರಿನ ವ್ಯವಸ್ಥೆಯೂ ಇಲ್ಲದ ಕಾರಣ ಸಮೀಪದ ಮನೆಯ ಬಾವಿಯ ನೀರನ್ನೇ ಬಳಸುತ್ತಿದ್ದೇವೆ. ಆದರೆ ಇದೀಗ ಆ ಬಾವಿಯ ನೀರಿನಲ್ಲಿ ಪೆಟ್ರೋಲ್ ಡೀಸೆಲ್ ವಾಸನೆ ಬರುತ್ತಿದೆ. ಇದರಿಂದಾಗಿ ಮನೆಯ ಮಕ್ಕಳಿಗೆ ಎಲ್ಲರಿಗೂ ಕೆಮ್ಮು, ವಾಂತಿ ಭೇದಿಯ ಸಮಸ್ಯೆ ಉಂಟಾಗಿದೆ.- ನಸೀಮಾ, ಸಂಬಾರತೋಟ