ತಾಲೂಕು ಗಾಣಿಗರ ಪ್ರಥಮ ಸಮಾವೇಶ ಹಾಗೂ ಗುರುವಂದನಾ ಸಭೆ । ಸಮಾಜದ ಪ್ರತಿಭಾವಂತ ಮಕ್ಕಳಿಗೆ ಸನ್ಮಾನ ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ ಗುಂಡ್ಲುಪೇಟೆಯಲ್ಲಿ ಗಾಣಿಗ ಸಮಾಜಕ್ಕೆ ಸಮುದಾಯ ಭವನ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಅವಕಾಶ ಕಲ್ಪಿಸುವುದಾಗಿ ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಭರವಸೆ ನೀಡಿದರು. ಪಟ್ಟಣದ ಜೆಎಸ್ಎಸ್ ಕಲ್ಯಾಣ ಮಂಟಪದಲ್ಲಿ ತಾಲೂಕು ಶಿವಜ್ಯೋತಿ ಗಾಣಿಗರ ಯುವಕರ ಸಂಘದ ಆಯೋಜಿಸಿದ್ದ ತಾಲೂಕು ಗಾಣಿಗರ ಪ್ರಥಮ ಸಮಾವೇಶ ಹಾಗೂ ಗುರುವಂದನಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಯಾವುದೇ ಸಮಾಜ ಅರ್ಥಿಕವಾಗಿ ಬೆಳವಣಿಗೆ ಅಗಬೇಕಾದರೆ ಶಿಕ್ಷಣವು ಮೂಲ ಅಸ್ತ್ರವಾಗಿದೆ. ಇದನ್ನು ಮನಗಂಡು ಗಾಣಿಗ ಸಮಾಜ ತಮ್ಮ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಿಸಬೇಕು. ಕೆಲ ದಶಕಗಳ ಹಿಂದೆ ಗಾಣದ ಮೂಲಕ ಎಣ್ಣೆ ತೆಗೆಯುತ್ತಿದ್ದ ಗಾಣಿಗ ಸಮಾಜದ ಕುಲ ಕಸುಬು ಇಂದಿನ ಅಧುನಿಕ ಯುಗದಲ್ಲಿ ಮರೆಯಾಗುತ್ತಿವೆ. ಆದರೂ ಕುಲ ಕಸುಬು ಮುಖ್ಯ ಎಂದರು. ಶ್ರೀ ಕ್ಷೇತ್ರ ತೈಲೇಶ್ವರ ಗಾಣಿಗರ ಮಹಾಸಂಸ್ಥಾನ ಮಠದ ಶ್ರೀ ಪೂರ್ಣಾನಂದ ಪುರಿ ಸ್ವಾಮೀಜಿ ಆಶೀರ್ವಚನ ನೀಡಿ, ಸಮುದಾಯ ಸಂಘಟಿತರಾದರೆ ಮಾತ್ರ ಸರ್ಕಾರದ ಸೌಲಭ್ಯಗಳನ್ನು ಪಡೆಯಲು ಸಾದ್ಯ ಎಂದರು. ಶ್ರೀ ಮಠದಲ್ಲಿ ಶಿಕ್ಷಣ ಹಾಗು ಜನಾಂಗದ ಅಭಿವೃದ್ಧಿಪರ ಚಿಂತನೆಗಳನ್ನ ಮಾಡಿದ್ದೇವೆ. ಸಮುದಾಯದ ಒಳಪಂಗಡಗಳನ್ನು ಸಂಘಟಿಸಿ ಒಂದು ಗುಡಿಸಲು ಪ್ರಯತ್ನಿಸಲಾಗುತ್ತಿದೆ. ಅಲ್ಲದೆ ಸಮುದಾಯದ ಮಕ್ಕಳಿಗೆ ಉಚಿತ ಶಿಕ್ಷಣ, ವಸತಿ ವ್ಯವಸ್ಥೆ ಕಲ್ಪಿಸಲು ಪ್ರಯತ್ನಿಸಲಾಗುತ್ತಿದೆ ಎಂದರು. ಕಾರ್ಯಕ್ರಮದಲ್ಲಿ ಗಾಣಿಗ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಹಾಗೂ ನಿವೃತ್ತ ಅಧಿಕಾರಿಗಳಿಗೆ ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಸನ್ಮಾನಿಸಿದರು. ಡಿ.೨ ರಂದು ಸಮಾವೇಶ ವರ್ಷಾಂತ್ಯದ ಡಿ.೨ ರಂದು ರಾಜ್ಯ ಮಟ್ಟದ ಗಾಣಿಗ ಜನಾಂಗದ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಜಿಲ್ಲೆಯ ಸಹಸ್ರಾರು ಸಂಖ್ಯೆಯಲ್ಲಿ ಗಾಣಿಗರು ಸಮಾವೇಶದಲ್ಲಿ ಭಾಗವಹಿಸಬೇಕು ಎಂದು ಎಂದು ಗಾಣಿಗ ಸಮಾಜದ ರಾಜ್ಯಾಧ್ಯಕ್ಷ ಎಂ. ರಾಜಶೇಖರ್ ಮನವಿ ಮಾಡಿದರು. ಬೆಂಗಳೂರು ನಗರದಲ್ಲಿ ನಿರ್ಮಾಣವಾಗಿರುವ ಗಾಣಿಗ ಸಮುದಾಯ ಭವನ ಹಾಗೂ ಸಮಾಜದ ಸಮಾವೇಶವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಲಿದ್ದಾರೆ. ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೇರಿದಂತೆ ಸಚಿವರು,ಶಾಸಕರು ಇರಲಿದ್ದಾರೆ ಎಂದರು. ಗುಂಡ್ಲುಪೇಟೆಯಲ್ಲಿ ನಡೆದ ಗಾಣಿಗರ ಪ್ರಥಮ ಸಮಾವೇಶ ಹಾಗು ಗುರುವಂದನಾ ಸಮಾರಂಭವನ್ನು ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಉದ್ಘಾಟಿಸಿದರು.