ಕಳಪೆ ಗುಣಮಟ್ಟದ ಸ್ಕೂಟರ್‌ ಮಾರಿದ ಓಲಾಗೆ ದಂಡ

KannadaprabhaNewsNetwork |  
Published : Jun 23, 2025, 11:48 PM IST
ದಂಡ. | Kannada Prabha

ಸಾರಾಂಶ

ಓಲಾ ಕಂಪನಿಯ ಉತ್ಪಾದನೆಯ ಸ್ಕೂಟರ್‌ಗಳು ಇಂತಹದೇ ಸಮಸ್ಯೆಯಿಂದ ಗ್ರಾಹಕರಿಗೆ ತೊಂದರೆ ಬಗ್ಗೆ ಕೇಂದ್ರ ಗ್ರಾಹಕರ ಸಂರಕ್ಷಣಾ ಪ್ರಾಧಿಕಾರ ಹಾಗೂ ಮಾನ್ಯ ಉಚ್ಚ ನ್ಯಾಯಾಲಯದಲ್ಲಿ ಪ್ರಕರಣಗಳು, ದೂರುಗಳು ದಾಖಲಾಗಿ ಓಲಾ ಕಂಪನಿಯ ಉತ್ಪಾದನಾ ಗುಣಮಟ್ಟದ ಬಗ್ಗೆ ಗ್ರಾಹಕರಿಗೆ ತೊಂದರೆಯಾಗದಂತೆ ಎಚ್ಚರಿಕೆ ವಹಿಸಲು ನಿರ್ದೇಶನ ಕೊಟ್ಟಿದ್ದರು.

ಧಾರವಾಡ: ಎಂಜನೀಯರ್‌ ಒಬ್ಬರಿಗೆ ಕಳಪೆ ಗುಣಮಟ್ಟದ ಎಲೆಕ್ಟ್ರಿಕ್‌ ಸ್ಕೂಟರ್ ಮಾರಿದ ಓಲಾ ಕಂಪನಿಗೆ ದಂಡ ಮತ್ತು ಪರಿಹಾರ ನೀಡಲು ಜಿಲ್ಲಾ ಗ್ರಾಹಕರ ಆಯೋಗ ಆದೇಶಿಸಿದೆ.

ವಿದ್ಯಾಗಿರಿಯ ನಿವಾಸಿ ಮಂಜುನಾಥ ಕೋಟೂರ 2023ರಲ್ಲಿ ₹1,31,719 ಹಣ ನೀಡಿ ಓಲಾ ಎಲೆಕ್ಟ್ರಿಕ್‌ ಕಂಪನಿಯಿಂದ ಸ್ಕೂಟರ್‌ ಖರೀದಿಸಿದ್ದರು. ಕೆಲವೇ ದಿನಗಳಲ್ಲಿ ಸ್ಕೂಟರ್‌ ರಸ್ತೆಯಲ್ಲಿ ಏಕಾಏಕಿ ನಿಲ್ಲುವುದು ಸೇರಿದಂತೆ ಬ್ಯಾಟರಿ ಸಮಸ್ಯೆ ಬಂತು. ಸರ್ವಿಸ್ ಸ್ಟೇಷನ್‌ಗೆ ಹಾಗೂ ಗ್ರಾಹಕರ ಸಹಾಯವಾಣಿಗೆ ವಿಷಯ ತಿಳಿಸಿದರೂ ಯಾವುದೇ ಕ್ರಮವಾಗಲಿಲ್ಲ. ಬೇಸತ್ತು ಮಂಜುನಾಥ ಸ್ಕೂಟರ್‌ ಮನೆಯಲ್ಲಿ ಇಡಬೇಕಾಯಿತು. ಜೊತೆಗೆ ಓಲಾ ಕಂಪನಿ ವಿರುದ್ಧ ಸೇವಾ ನ್ಯೂನ್ಯತೆ ಎಂದು ಆಯೋಗದಲ್ಲಿ ದೂರು ದಾಖಲಿಸಿದರು.

ದೂರು ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷರಾದ ಈಶಪ್ಪ ಭೂತೆ ಹಾಗೂ ಸದಸ್ಯರಾದ ವಿಶಾಲಾಕ್ಷಿ ಬೋಳಶೆಟ್ಟಿ, ಹಣ ವಿನಿಯೋಗಿಸಿ ತಮ್ಮ ಕೆಲಸಕ್ಕೆ ಅನುಕೂಲವಾಗಲಿ ಎಂದು ಓಲಾ ಕಂಪನಿಯಿಂದ ಸ್ಕೂಟರ್ ಖರೀದಿಸಿದರೆ, ಬ್ಯಾಟರಿ ಸಮಸ್ಯೆಯಿಂದ ದಾರಿಯಲ್ಲಿ ನಿಂತಿದ್ದು ಬೇಸರದ ಸಂಗತಿ. ಹೊಸ ಸ್ಕೂಟರ್‌ ಹೀಗಾಗುವುದು ಸೇವಾ ನ್ಯೂನತೆ. ಜತೆಗೆ ಸರ್ವಿಸ್ ಸ್ಟೇಷನ್‌ಗೆ ಹಾಗೂ ಅವರ ಗ್ರಾಹಕರ ಸಹಾಯವಾಣಿಗೆ ದೂರುಕೊಟ್ಟರೂ ಕ್ರಮ ಕೈಗೊಳ್ಳಲಿಲ್ಲ. ಇಂತಹ ನಡುವಳಿಕೆ ಗ್ರಾಹಕರಾದ ದೂರುದಾರರಿಗೆ ಸೇವಾ ನ್ಯೂನತೆ ಎಂದು ಅಭಿಪ್ರಾಯ ಪಟ್ಟು ತೀರ್ಪು ನೀಡಿದೆ.

ಓಲಾ ಕಂಪನಿಯ ಉತ್ಪಾದನೆಯ ಸ್ಕೂಟರ್‌ಗಳು ಇಂತಹದೇ ಸಮಸ್ಯೆಯಿಂದ ಗ್ರಾಹಕರಿಗೆ ತೊಂದರೆ ಬಗ್ಗೆ ಕೇಂದ್ರ ಗ್ರಾಹಕರ ಸಂರಕ್ಷಣಾ ಪ್ರಾಧಿಕಾರ ಹಾಗೂ ಮಾನ್ಯ ಉಚ್ಚ ನ್ಯಾಯಾಲಯದಲ್ಲಿ ಪ್ರಕರಣಗಳು, ದೂರುಗಳು ದಾಖಲಾಗಿ ಓಲಾ ಕಂಪನಿಯ ಉತ್ಪಾದನಾ ಗುಣಮಟ್ಟದ ಬಗ್ಗೆ ಗ್ರಾಹಕರಿಗೆ ತೊಂದರೆಯಾಗದಂತೆ ಎಚ್ಚರಿಕೆ ವಹಿಸಲು ನಿರ್ದೇಶನ ಕೊಟ್ಟಿದ್ದರು. ಈ ಎಲ್ಲ ಸಂಗತಿಗಳನ್ನು ಆಧರಿಸಿ ಓಲಾ ಕಂಪನಿ ಆಯಾ ದೂರುದಾರರಿಗೆ ಸಂದಾಯ ಮಾಡಿದ ವಾಹನಗಳ ಮೌಲ್ಯಗಳನ್ನು ಶೇ.10ರಂತೆ ಬಡ್ಡಿ ಸಮೇತ ಹಿಂದಿರುಗಿಸುವಂತೆ ಆದೇಶಿಸಿದೆ.

ಜತೆಗೆ ದೂರುದಾರರಿಗೆ ಆಗಿರುವ ಅನಾನುಕೂಲ, ತೊಂದರೆ ಹಾಗೂ ಮಾನಸಿಕ ಹಿಂಸೆಗಾಗಿ ₹50 ಸಾವಿರ ಪರಿಹಾರ ಮತ್ತು ₹10 ಸಾವಿರ ಪ್ರಕರಣದ ಖರ್ಚು ವೆಚ್ಚ ನೀಡುವಂತೆ ಆಯೋಗ ಎಲೆಕ್ಟ್ರಿಕ್‌ ಓಲಾ ಕಂಪನಿಗೆ ನಿರ್ದೇಶಿಸಿದೆ.

PREV

Recommended Stories

ನಾಳೆ ಕರಾವಳಿ, ಮಲೆನಾಡು ಜಿಲ್ಲೆಗಳಿಗೆ ರೆಡ್‌ ಅಲರ್ಟ್‌
ಮೈಸೂರು ದಸರಾ ಆನೆಗಳಿಗೆ 630 ಟನ್‌ ಆಹಾರ!