ಕನ್ನಡಪ್ರಭ ವಾರ್ತೆ ಕೋಲಾರ
ಅವಿಭಕ್ತ ಕುಟುಂಬಗಳು ಮರೆಯಾಗುತ್ತಿರುವುದರಿಂದ ಮಕ್ಕಳು, ಯುವಕರಿಗೆ ಸೂಕ್ತ ಮಾರ್ಗದರ್ಶನ ನೀಡಬೇಕಾದ ಹಿರಿಯರು ಮನೆಗಳಲ್ಲಿ ಇಲ್ಲವಾದ ಕಾರಣ ಇಂದು ಸಂಸ್ಕಾರ ಮರೆಯಾಗಿ ವೃದ್ಧಾಶ್ರಮಗಳು ಹೆಚ್ಚಾಗುತ್ತಿವೆ ಎಂದು ರಾಜ್ಯ ಪತ್ರಕರ್ತರ ಸಂಘದ ಕಾರ್ಯಕಾರಿ ಸದಸ್ಯ ವಿ.ಮುನಿರಾಜು ವಿಷಾಧಿಸಿದರು.ಜಿಲ್ಲಾಡಳಿತ ಮತ್ತು ಜಿಪಂ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಕೋಲಾರ ಹಾಗೂ ವಿಕಲ ಚೇತನರ ಸಂಘ ಸಂಸ್ಥೆಗಳಿಂದ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಕೋಲಾರ ಮತ್ತು ವಕೀಲರ ಸಂಘದಿಂದ ಕಾನೂನು ಅರಿವು- ನೆರವು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಅವಿಭಕ್ತ ಕುಟುಂಬಗಳಲ್ಲಿ ಹಿರಿಯರು ನೀಡುತ್ತಿದ್ದ ಮಾರ್ಗದರ್ಶನ ಇಂದು ಇಲ್ಲವಾಗಿದೆ, ಹಿರಿಯರ ಕಡೆಗಣನೆ ನೋವಿನ ಸಂಗತಿಯಾಗಿದ್ದು, ಅವರ ಬದುಕು ಅತಂತ್ರವಾಗಿದೆ, ಸರ್ಕಾರ ಹಿರಿಯ ನಾಗರಿಕರಿಗೆ ನೀಡುತ್ತಿರುವ ೧೨೦೦ ರು. ವೃದ್ಧಾಪ್ಯ ವೇತನ ಅವರ ಜೀವನಕ್ಕೆ ಸಾಲದಾಗಿದ್ದು, ಕನಿಷ್ಠ ೫ ಸಾವಿರಕ್ಕಾದರೂ ಏರಿಸಬೇಕು ಎಂದು ಆಗ್ರಹಿಸಿದರು.ಉನ್ನತಿಗೆ ಬಳಸಬೇಕಾದ ಮೊಬೈಲ್‌ಗಳು ಇಂದು ಮಕ್ಕಳು, ಯುವಕರು ದಾರಿ ತಪ್ಪಲು ರಹದಾರಿ ನೀಡಿದಂತಿದೆ, ಅತಿಯಾದ ಮೊಬೈಲ್ ಬಳಕೆ ಮಕ್ಕಳ ಬದುಕನ್ನೇ ನಾಶಮಾಡುತ್ತಿದೆ, ರೀಲ್ಸ್ ಹುಚ್ಚು ಹೆಚ್ಚಿ ದುಶ್ಚಟಗಳಿಗೆ ಬಲಿಯಾಗುವಂತಾಗಿದೆ ಎಂದು ತಿಳಿಸಿ, ಮನೆಗಳಲ್ಲಿ ಮೊಬೈಲ್‌ಗೆ ಅವಕಾಶ ನೀಡದಿರಿ ಎಂದು ಮನವಿ ಮಾಡಿದರು.
ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಕಲ್ಯಾಣಾಧಿಕಾರಿ ಆರ್.ಮಂಜುಳಾ ಅಧ್ಯಕ್ಷತೆ ವಹಿಸಿದ್ದು, ಹಿರಿಯ ನಾಗರಿಕರಿಗಾಗಿ ಕ್ರೀಡಾಕೂಟ ನಡೆಸಿ ಇದೀಗ ಬಹುಮಾನ ವಿತರಿಸಲಾಗುತ್ತಿದೆ, ಇಲಾಖೆಯಲ್ಲಿ ಸಿಗುವ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಳ್ಳಿ ಎಂದು ತಿಳಿಸಿ ಶುಭ ಕೋರಿದರು.ತಾಲೂಕು ಶಿಶು ಅಭಿವೃದ್ಧಿ ಅಧಿಕಾರಿ ರವಿಕುಮಾರ್ ಮಾತನಾಡಿ, ಮಕ್ಕಳು, ಯುವಕರಿಗೆ ಹಿರಿಯರ ಮಾರ್ಗದರ್ಶನ ಅಗತ್ಯವಾಗಿದೆ, ಜತೆಗೆ ಯುವಕರಲ್ಲಿ ಹಿರಿಯರ ಕುರಿತು ಕೀಳರಿಮೆ ಖಂಡನೀಯವಾಗಿದ್ದು, ಮುಂದೊಂದು ದಿನ ನಾವೂ ವೃದ್ಧರಾಗುತ್ತೇವೆ ಎಂಬ ಪರಿಕಲ್ಪನೆಯೇ ಮಾಯವಾಗಿ ತಪ್ಪು ಮಾಡುತ್ತಿದ್ದೇವೆ ಎಂದರು.
ಹಿರಿಯರನ್ನು ಗೌರವದಿಂದ ಕಾಣಿ ಎಂದ ಅವರು, ಹಿರಿಯರೇ ಮನೆಯ ಆಧಾರಸ್ತಂಭ ಎಂಬುದನ್ನು ಮರೆಯದಿರಿ, ವೃದ್ಧರನ್ನು ಮಕ್ಕಳಂತೆ ಪೋಷಿಸುವ ಅಗತ್ಯವಿದೆ, ವೃದ್ಧಾಶ್ರಮ ಹೆಚ್ಚಳ ಬೇಸರದ ಸಂಗತಿಯಾಗಿದ್ದು, ಯುವಕರ ಮನಸ್ಥಿತಿ ಬದಲಾಗಬೇಕು ಎಂದರು.ಕಾನೂನು ಉಪ ಅಭಿರಕ್ಷಕ ಹಾಗೂ ವಕೀಲ ಸತೀಶ್ ಮಾತನಾಡಿ, ಇಂದಿನ ಯುವಕರಿಗೆ ಗುರು- ಗುರಿ ಎರಡೂ ಇಲ್ಲದಾಗಿದೆ, ಶಿಕ್ಷಣ ಕೊಟ್ಟರೆ ಮಾತ್ರ ಪ್ರಯೋಜನವಿಲ್ಲ, ಜತೆಗೆ ಸಂಸ್ಕಾರವೂ ಕಲಿಸುವ ಅಗತ್ಯವಿದೆ, ಇಂದು ಸುಶಿಕ್ಷಿತರೇ ಹೆಚ್ಚು ಅಪರಾಧ ಮಾಡುತ್ತಿರುವುದನ್ನು ಕಾಣುತ್ತಿದ್ದೇವೆ ಎಂದರು.
ಹಿರಿಯರು ದೇಶದ ಸಂಪತ್ತು, ಅವರ ಕಡೆಗಣನೆ ಸರಿಯಲ್ಲ, ಹಿರಿಯ ನಾಗರಿಕರನ್ನು ಗೌರವಿಸುವುದು ಪ್ರತಿಯೊಬ್ಬರ ಕರ್ತವ್ಯ, ಅವರ ಹಕ್ಕುಗಳ ರಕ್ಷಣೆಗೆ ಕಾನೂನು ಸೇವೆಗಳ ಪ್ರಾಧಿಕಾರ ಕೆಲಸ ಮಾಡುತ್ತಿದೆ, ಮಕ್ಕಳಿಂದ ಶೋಷಣೆಗೆ ಒಳಗಾದ ಹಿರಿಯರ ನೆರವಿಗೆ ಬರುತ್ತದೆ, ಕಾನೂನು ಪ್ರಾಧಿಕಾರದ ಸಹಾಯವಾಣಿ ೧೫೧೦೦ ನೆರವು ಪಡೆಯಿರಿ ಎಂದು ಸಲಹೆ ನೀಡಿದರು.ಹಿರಿಯ ನಾಗರಿಕರ ವೇದಿಕೆ ಅಧ್ಯಕ್ಷ ಗೋವಿಂದಪ್ಪ ಮಾತನಾಡಿ, ಪ್ರಧಾನ ಮಂತ್ರಿಗಳ ಆಯುಷ್ಮಾನ್ ಭಾರತದಲ್ಲಿ ಹಿರಿಯ ನಾಗರಿಕರ ಆರೋಗ್ಯ ರಕ್ಷಣೆಗೆ ಒತ್ತು ನೀಡಲಾಗಿದೆ, ಅದನ್ನು ಬಳಸಿಕೊಳ್ಳೋಣ, ಇದೀಗ ರಾಜ್ಯ ಸರ್ಕಾರವೂ ನಮ್ಮ ಮನವಿಗೆ ಸ್ಪಂದಿಸಿ ಕಳೆದ ಸೆ.೧೯ ರಂದು ಆದೇಶ ಮಾಡಿದೆ ಎಂದರು.
ಹಿರಿಯ ನಾಗರಿಕರ ದಿನಾಚರಣೆ ಮರೆತಿರುವ ಜನಪ್ರತಿನಿಧಿಗಳು ಹಾಗೂ ರಾಜಕಾರಣಿಗಳ ನಿರ್ಲಕ್ಷ್ಯ ಖಂಡನೀಯ ಎಂದ ಅವರು, ಹಿರಿಯ ನಾಗರಿಕರ ದಿನವನ್ನು ಸರ್ಕಾರವೇ ಆಚರಿಸಬೇಕು, ಸರ್ಕಾರದಿಂದ ನೆರವು ಸಿಗಬೇಕು, ಹಿರಿಯರ ಬಗ್ಗೆ ಹೇಗೆ ನಡೆದುಕೊಳ್ಳಬೇಕು ಎಂದು ಮೊದಲು ಯುವಕರಿಗೆ ಅರಿವು ಮೂಡಿಸಬೇಕು ಎಂದರು.ಹಿರಿಯ ಕೋಕೋ ತರಬೇತುದಾರ ಶ್ರೀಧರ್ ಪಿಳ್ಳೈ ಮತ್ತು ಸಮಾಜಸೇವೆ ಹಾಗೂ ಸಾಕ್ಷರತಾ ಸೇವೆಗಾಗಿ ಜನ್ನಘಟ್ಟ ಗ್ರಾಮದ ವಿ.ನಾರಾಯಣಪ್ಪ ಅವರನ್ನು ಸನ್ಮಾನಿಸಲಾಯಿತು.
ಅಂತರಗಂಗೆ ಬುದ್ದಿಮಾಂದ್ಯ ಮಕ್ಕಳ ಶಾಲೆ ಕಾರ್ಯದರ್ಶಿ ಕೆ.ಎಸ್.ಶಂಕರ್, ತಮ್ಮ ಸಂಸ್ಥೆಯಲ್ಲಿ ಹಿರಿಯ ನಾಗರಿಕರಿಗೆ ಅವಕಾಶವಿದ್ದು, ಸಂಕಷ್ಟಕ್ಕೆ ಒಳಗಾದವರು ಸಂಪರ್ಕಿಸಿ ಸೌಲಭ್ಯ ಪಡೆದುಕೊಳ್ಳಿ ಎಂದರು.ಇತ್ತೀಚೆಗೆ ಹಿರಿಯ ನಾಗರಿಕರಿಗಾಗಿ ನಡೆಸಲಾದ ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಪ್ರಶಸ್ತಿ ಪತ್ರ ಮತ್ತು ಬಹುಮಾನ ವಿತರಿಸಲಾಯಿತು. ದಿವ್ಯ ಜ್ಯೋತಿ ವೃದ್ಧಾಶ್ರಮದ ಅಧ್ಯಕ್ಷ ನರಸಿಂಹಪ್ಪ ಇದ್ದರು, ಜಯಲಕ್ಷ್ಮಮ್ಮ ಪ್ರಾರ್ಥಿಸಿ, ಗೋವಿಂದಪ್ಪ ಸ್ವಾಗತಿಸಿ, ರಾಮಕೃಷ್ಣೇಗೌಡ ವಂದಿಸಿದರು.