ಹಾವೇರಿ: ತಾಲೂಕಿನ ಯತ್ನಳ್ಳಿ ಗ್ರಾಮದ ಹೊರವಲಯದ ರಸ್ತೆಯ ಕಾಲುವೆಯಲ್ಲಿ 10 ಬ್ಯಾಲೆಟ್ ಬಾಕ್ಸ್‌ಗಳು ಪತ್ತೆಯಾಗಿದ್ದು, ಈ ಬಗ್ಗೆ ಗ್ರಾಮಸ್ಥರು ಹಲವು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ.ಜಿಲ್ಲೆಯ ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಮತದಾನ ಪ್ರಕ್ರಿಯೆ ಬುಧವಾರವಷ್ಟೇ ನಡೆದಿದೆ. ಮರುದಿನವೇ ಕಾಲುವೆಯಲ್ಲಿ ಬ್ಯಾಲೆಟ್ ಬಾಕ್ಸ್‌ಗಳು ಸಿಕ್ಕಿವೆ. ಇದರಿಂದಾಗಿ ಜನರಲ್ಲಿ ಹಲವು ಅನುಮಾನಗಳು ಮೂಡಿವೆ. ಆದರೆ, ಈ ಬ್ಯಾಲೆಟ್ ಬಾಕ್ಸ್‌ಗಳು ಹಳೆಯದ್ದಾಗಿವೆ. ಶಿಗ್ಗಾಂವಿ ಚುನಾವಣೆಗೂ ಈ ಬಾಕ್ಸ್‌ಗಳಿಗೂ ಯಾವುದೇ ಸಂಬಂಧವಿಲ್ಲವೆಂದು ಜಿಲ್ಲಾಡಳಿತ ತಿಳಿಸಿದೆ.ಗುರುವಾರ ಬೆಳಗ್ಗೆ ವಾಯುವಿಹಾರಕ್ಕೆ ಹೋಗಿದ್ದೆ. ಇದೇ ಸಂದರ್ಭದಲ್ಲಿ ಕಾಲುವೆಯಲ್ಲಿ ಕಬ್ಬಿಣದ ಬಾಕ್ಸ್‌ಗಳು ಕಂಡವು. ಏನೆಂದು ನೋಡಲು ಹೋದಾಗ, ಬ್ಯಾಲೆಟ್ ಬಾಕ್ಸ್‌ಗಳು ಎಂಬುದು ಗೊತ್ತಾಯಿತು. ಹಳೆಯ ಚುನಾವಣೆ ಸಂದರ್ಭದಲ್ಲಿ ಬಳಕೆ ಮಾಡಿದ ಬ್ಯಾಲೆಟ್ ಬಾಕ್ಸ್‌ಗಳಿರಬಹುದು. ಈ ಬಾಕ್ಸ್‌ಗಳ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ ಎಂದು ಗ್ರಾಮಸ್ಥರು ಹೇಳಿದ್ದಾರೆ. ಮತಪಟ್ಟಿಗೆ ಕಳ್ಳತನಕ್ಕೆ ಯತ್ನಿಸಿದವರ ಮೇಲೆ ದೂರು ದಾಖಲು: ರಾಜ್ಯ ಚುನಾವಣಾ ಆಯೋಗದ ಮತಪೆಟ್ಟಿಗೆಗಳನ್ನು ಕಳ್ಳತನ ಹಾಗೂ ಹಾನಿ ಮಾಡಲು ಪ್ರಯತ್ನ ಮಾಡಿರುವ ಪ್ರಕರಣವನ್ನು ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಿದೆ. ಈ ಘಟನೆಯ ಬಗ್ಗೆ ಹಾವೇರಿ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಈ ಬಗ್ಗೆ ತನಿಖೆ ಕೈಗೊಂಡಿದ್ದು ತಪ್ಪಿಸ್ಥರ ಮೇಲೆ ಕಠಿಣ ಶಿಕ್ಷೆಗೆ ಒಳಪಡಿಸಿ ಕಾನೂನಿನ ಪ್ರಕಾರ ಮುಂದಿನ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ತಿಳಿಸಿದ್ದಾರೆ. ಈ ಬಾಕ್ಸ್‌ಗಳು ಹಳೆಯದ್ದು. ಶಿಗ್ಗಾಂವಿ ಚುನಾವಣೆಗೆ ಅದಕ್ಕೂ ಯಾವುದೇ ಸಂಬಂಧವಿಲ್ಲ. ಇದರಲ್ಲಿ ಯಾವುದೇ ಅನುಮಾನಪಡುವ ಅಗತ್ಯವೂ ಇಲ್ಲ ಎಂದು ಹೇಳಿದರು.ಹಾವೇರಿ ಶಹರದ ಗುತ್ತಲ ರಸ್ತೆಯಲ್ಲಿರುವ ಎಪಿಎಂಸಿ ಉಗ್ರಾಣದಲ್ಲಿ ಹಾವೇರಿ ತಹಸೀಲ್ದಾರ್‌ರು ರಾಜ್ಯ ಚುನಾವಣಾ ಆಯೋಗದಿಂದ ಹಂಚಿಕೆಯಾದ ಮತಪೆಟ್ಟಿಗೆಗಳನ್ನು ಗ್ರಾಪಂ ಸಾರ್ವತ್ರಿಕ ಚುನಾವಣೆ ಬಳಿಕ ಒಟ್ಟು 621 ಮತಪೆಟ್ಟಿಗೆಗಳ ಪೈಕಿ 41 ಮತಪೆಟ್ಟಿಗೆಗಳು ತಹಸೀಲ್ದಾರ್ ಕಚೇರಿಯಲ್ಲಿ ಮತ್ತು 580 ಮತಪೆಟ್ಟಿಗೆಗಳು ಎಪಿಎಂಸಿ ಉಗ್ರಾಣದಲ್ಲಿ ಶೇಖರಿಸಿಟ್ಟಿರುತ್ತಾರೆ. ಯಾರೋ ಕಿಡಿಗೇಡಿಗಳು ಬಾಗಿಲನ್ನು ಮುರಿದು ಸಂಗ್ರಹಿಸಿಟ್ಟಿರುವ ಒಟ್ಟು 580 ಮತಪೆಟ್ಟಿಗೆಗಳಲ್ಲಿ ಖಾಲಿ ಇರುವ 10 ಮತಪೆಟ್ಟಿಗೆಗಳನ್ನು ಕಳ್ಳತನ ಮಾಡಿ ಕೊಂಡೊಯ್ಯಲು ಪ್ರಯತ್ನ ಮಾಡಿದ್ದಾರೆ.ಕಳ್ಳತನ ಮಾಡಿರುವ (ರಾಜ್ಯ ಚುನಾವಣಾ ಆಯೋಗದ) 10 ಮತಪೆಟ್ಟಿಗೆಗಳನ್ನು ಎಪಿಎಂಸಿ ಉಗ್ರಾಣದ ಹತ್ತಿರವಿರುವ ಯತ್ತಿನಹಳ್ಳಿ ಗ್ರಾಮಕ್ಕೆ ಹೊಂದಿಕೊಂಡಿರುವ ನೂತನ ಲೇಔಟಿನ ಪ್ಲಾಟ್‌ಗಳ ಚರಂಡಿಯಲ್ಲಿಯೇ ಬಿಟ್ಟು ಹೋಗಿದ್ದಾರೆ. ಈ ವಿಷಯವು ಗಮನಕ್ಕೆ ಬಂದ ತಕ್ಷಣ ಪರಿಶೀಲಿಸಲಾಗಿ ಈಗ ಪತ್ತೆಯಾಗಿರುವ ಮತಪೆಟ್ಟಿಗೆಗಳು ರಾಜ್ಯ ಚುನಾವಣಾ ಆಯೋಗದ ಮತಪೆಟ್ಟಿಗೆಗಳಾಗಿರುವುದು ಕಂಡು ಬಂದಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.