ಹಳೇ ಕಟ್ಟಡದ ಸಜ್ಜಾ ಕುಸಿದು ವಾಹನಗಳಿಗೆ ಹಾನಿ

KannadaprabhaNewsNetwork |  
Published : Nov 07, 2026, 01:45 AM IST
6ಎಚ್ಎಸ್ಎನ್4 : ಹೊಳೆನರಸೀಪುರದ ಚೆನ್ನಾಂಬಿಕ ವೃತ್ತದ ಸಮೀಪ ಮನೆಯ ಮುಂಭಾಗದ ಸುಣ್ಣದ ಗಾರೆಯ ಸಜ್ಜ ಕುಸಿದು ಬಿದ್ದ ಪರಿಣಾಮ ಕೆಳಗೆ ನಿಲ್ಲಿಸಲಾಗಿದ್ದ ಕಾರು ಹಾಗೂ ಗೂಡ್ಸ್ ಆಟೋ ಸಂಪೂರ್ಣ ಜಖಂಗೊಂಡಿದೆ. | Kannada Prabha

ಸಾರಾಂಶ

ಹೊಳೆನರಸೀಪುರ ಪಟ್ಟಣದಲ್ಲಿ ಮನೆಯ ಮುಂಭಾಗದ ಸುಣ್ಣದ ಗಾರೆಯ ಸಜ್ಜ ಕುಸಿದು ಬಿದ್ದ ಪರಿಣಾಮ ರಸ್ತೆಯಲ್ಲಿ ನಿಲ್ಲಿಸಿದ್ದ ಕಾರು ಹಾಗೂ ಗೂಡ್ಸ್ ಆಟೋ ಸಂಪೂರ್ಣ ಜಖಂಗೊಂಡಿದೆ. ಜತೆಗೆ ಘಟನೆಯ ವೇಳೆ ಸ್ಥಳದಲ್ಲಿ ಯಾರೂ ಇಲ್ಲದ ಕಾರಣ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಮತ್ತು ಕೂದಲೆಳೆ ಅಂತರದಲ್ಲಿ ಸಂಭವನೀಯ ಭಾರೀ ಅನಾಹುತವೊಂದು ತಪ್ಪಿದೆ. ಕಾಂಕ್ರೀಟ್ ಒಳಗೆ ನೀರಿಳಿದು ಕಬ್ಬಿಣ ತುಕ್ಕು ಹಿಡಿದಿರುವುದು ಗಮನಕ್ಕೆ ಬಂದರೆ ಕೂಡಲೇ ರಿಪೇರಿ ಮಾಡಿಸುವುದು ಅಥವಾ ದುರ್ಬಲ ಭಾಗಗಳನ್ನು ತೆರವುಗೊಳಿಸುವ ಕಾರ್ಯವೂ ಇಂತಹ ಅವಘಡಗಳನ್ನು ತಪ್ಪಿಸಲು ಅನಿವಾರ್ಯವಾಗಿದೆ ಎಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ.

ಹೊಳೆನರಸೀಪುರ: ಪಟ್ಟಣದಲ್ಲಿ ಮನೆಯ ಮುಂಭಾಗದ ಸುಣ್ಣದ ಗಾರೆಯ ಸಜ್ಜ ಕುಸಿದು ಬಿದ್ದ ಪರಿಣಾಮ ರಸ್ತೆಯಲ್ಲಿ ನಿಲ್ಲಿಸಿದ್ದ ಕಾರು ಹಾಗೂ ಗೂಡ್ಸ್ ಆಟೋ ಸಂಪೂರ್ಣ ಜಖಂಗೊಂಡಿದೆ. ಜತೆಗೆ ಘಟನೆಯ ವೇಳೆ ಸ್ಥಳದಲ್ಲಿ ಯಾರೂ ಇಲ್ಲದ ಕಾರಣ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಮತ್ತು ಕೂದಲೆಳೆ ಅಂತರದಲ್ಲಿ ಸಂಭವನೀಯ ಭಾರೀ ಅನಾಹುತವೊಂದು ತಪ್ಪಿದೆ. ಪಟ್ಟಣದ ಚನ್ನಾಂಬಿಕ ವೃತ್ತದ ಸಮೀಪದ ಪೇಟೆ ಮುಖ್ಯ ರಸ್ತೆಯ ವಕೀಲ ಆನಂದೇಶ್ವರ ಹಾಗೂ ಸಿವಿಲ್ ಎಂಜಿನಿಯರ್‌ ಆಗಿದ್ದ ದಿ. ನಾರಾಯಣ್ ಅವರ ಮನೆಯ ಮುಂಭಾಗದ ಸುಣ್ಣದ ಗಾರೆಯ ಸಜ್ಜ ಕುಸಿದು ಬಿದ್ದಿದೆ. ಶುಕ್ರವಾರ ರಸ್ತೆಯ ಎಡಭಾಗದಲ್ಲಿ ವಾಹನಗಳ ಪಾರ್ಕಿಂಗ್‌ಗೆ ಸೂಚಿಸಿರುವ ಕಾರಣದಿಂದ ಪವಿತ್ರ ಮೆಡಿಕಲ್ಸ್ ಮಾಲೀಕ ಶಿವರುದ್ರಪ್ಪ ಅವರು ಅಂಗಡಿ ಎದುರಿನ ರಸ್ತೆ ಬದಿಯಲ್ಲಿ ಕಾರು ನಿಲ್ಲಿಸಿದ್ದರು ಮತ್ತು ಇ- ಕಾರ್ಟ್‌ ಡೆಲಿವರಿ ಪಾಯಿಂಟ್‌ಗೆ ಸರಕು ಇಳಿಸಲು ಬಂದಿದ್ದ ಗೂಡ್ಸ್ ಆಟೋ ಕೂಡ ಜಕ್ಕಂಗೊಂಡಿದೆ. ಶತಮಾನ ದಾಟಿರುವ ಹಳೆಯದಾಗಿದ್ದ ಹಾಗೂ ಇತ್ತೀಚಿನ ಮಳೆಯ ತೇವಾಂಶದಿಂದ ಶಿಥಿಲಗೊಂಡಿದ್ದ ಕಟ್ಟಡದ ಮುಂಭಾಗದ ಸುಣ್ಣದ ಗಾರೆಯ ಸಜ್ಜ ಒಮ್ಮೆಲೆ ಭಾರೀ ಶಬ್ದದೊಂದಿಗೆ ಕುಸಿದು ಬಿದ್ದಿದೆ. ಈ ದುರ್ಘಟನೆಯಿಂದ ಕಾರಿನ ಮುಂಭಾಗ ಹಾಗೂ ಮೇಲ್ಚಾವಣಿ ಸಂಪೂರ್ಣ ನಜ್ಜುಗುಜ್ಜಾಗಿದೆ ಹಾಗೂ ಗೂಡ್ಸ್ ಆಟೋದ ಕ್ಯಾಬಿನ್ ಹಾಗೂ ಬಾಡಿ ಭಾಗ ಜಖಂಗೊಂಡಿದ್ದು, ಲಕ್ಷಾಂತರ ರುಪಾಯಿ ನಷ್ಟ ಸಂಭವಿಸಿದೆ. ಸಜ್ಜ ಕುಸಿಯುವ ಸಂದರ್ಭದಲ್ಲಿ ಅದೃಷ್ಟವಶಾತ್ ರಸ್ತೆಯಲ್ಲಿ ಜನರ ಓಡಾಟವಿರಲಿಲ್ಲ, ಜತೆಗೆ ವಾಹನದ ಬಳಿಯಾಗಲಿ ಅಥವಾ ಸಜ್ಜದ ಕೆಳಗಾಗಲಿ ಯಾರೂ ನಿಂತಿರಲಿಲ್ಲ. ಇದರಿಂದಾಗಿ ಸಂಭವಿಸಬಹುದಾಗಿದ್ದ ದೊಡ್ಡ ಮಟ್ಟದ ಜೀವಹಾನಿ ತಪ್ಪಿದಂತಾಗಿದೆ. ಹಳೆಯ ಮನೆಗಳು ಹಾಗೂ ಸವೆದು ಹೋಗಿರುವ ಕಟ್ಟಡಗಳ ಸಜ್ಜ, ಬಾಲ್ಕನಿ ಮತ್ತು ಪ್ಯಾರಾಪೆಟ್ ಗೋಡೆಗಳ ಸುರಕ್ಷತೆಯನ್ನು ಮುಂಚಿತವಾಗಿಯೇ ಪರಿಶೀಲಿಸಿಕೊಳ್ಳುವುದು ಅಗತ್ಯವಾಗಿದ್ದು, ಕಾಂಕ್ರೀಟ್ ಒಳಗೆ ನೀರಿಳಿದು ಕಬ್ಬಿಣ ತುಕ್ಕು ಹಿಡಿದಿರುವುದು ಗಮನಕ್ಕೆ ಬಂದರೆ ಕೂಡಲೇ ರಿಪೇರಿ ಮಾಡಿಸುವುದು ಅಥವಾ ದುರ್ಬಲ ಭಾಗಗಳನ್ನು ತೆರವುಗೊಳಿಸುವ ಕಾರ್ಯವೂ ಇಂತಹ ಅವಘಡಗಳನ್ನು ತಪ್ಪಿಸಲು ಅನಿವಾರ್ಯವಾಗಿದೆ ಎಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಬ್ಬಿಗೆ ಸ್ಥಳೀಯ ರಿಕವರಿ ಆಧಾರದಲ್ಲಿ ನ್ಯಾಯಯುತ ಬೆಲೆ ನೀಡಲು ಆಗ್ರಹ
ಕರ್ತವ್ಯ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ವಹಿಸಿದ್ದರೆ ಸೂಕ್ತ ಕ್ರಮ