ಮೂಲ ಸೌಕರ್ಯ ಒದಗಿಸಲು ಆಗ್ರಹಿಸಿ ಪ್ರತಿಭಟನೆ

KannadaprabhaNewsNetwork | Published : Jul 2, 2025 12:20 AM
4 | Kannada Prabha

ಸಾರಾಂಶ

ತಿವರ್ಷ ಇರುತ್ತಿದ್ದ ದಾಸೋಹ, ಊಟದ ವ್ಯವಸ್ಥೆ ಸಹ ಮೊದಲಿದ್ದ ಸ್ಥಳದಲ್ಲಿ ಇಲ್ಲ.

ಕನ್ನಡಪ್ರಭ ವಾರ್ತೆ ಮೈಸೂರು

ಆಷಾಢ ಶುಕ್ರವಾರದಂದು ಚಾಮುಂಡಿಬೆಟ್ಟಕ್ಕೆ ಆಗಮಿಸುವ ಭಕ್ತರಿಗೆ ಕುಡಿಯುವ ನೀರು, ಶೌಚಾಲಯ ಮತ್ತಿತರ ಮೂಲ ಸೌಕರ್ಯ ಒದಗಿಸಲು ಆಗ್ರಹಿಸಿ ಕರ್ನಾಟಕ ಸೇನಾ ಪಡೆಯವರು ನಗರದ ಹಳೆಯ ಜಿಲ್ಲಾಧಿಕಾರಿ ಕಚೇರಿ ಬಳಿ ಮಂಗಳವಾರ ಪ್ರತಿಭಟಿಸಿದರು.

ಮೆಟ್ಟಿಲು ಹತ್ತಿ ಬರುವ ಭಕ್ತಾದಿಗಳಿಗೆ ನೇರ ದರ್ಶನ ಮಾಡಿಸುತ್ತೇವೆ ಎಂದು ಜಿಲ್ಲಾಡಳಿತ ಹೇಳಿತ್ತು. ಆದರೆ, ಮೆಟ್ಟಿಲು ಹತ್ತಿ ಬಂದವರನ್ನು ಕುರಿ ದೊಂಬಿಗೆ ತುಂಬುವ ಹಾಗೆ ತುಂಬುತ್ತಿದ್ದು ಅತ್ಯಂತ ಖಂಡನಿಯ. ಯಾವ ವ್ಯವಸ್ಥೆಯನ್ನೂ ಸರಿಯಾಗಿ ಮಾಡಿಲ್ಲ. 5- 6 ಗಂಟೆಗಳ ಕಾಲ ಸಾಲಿನಲ್ಲಿ ನಿಂತಿದ್ದರೂ ಕುಡಿಯಲು ನೀರಿಲ್ಲ. ಮೆಟ್ಟಿಲು ಹತ್ತಿ ಬರುವರಿಗೆ ಶೌಚಾಲಯಗಳಂತೂ ಇಲ್ಲವೇ ಇಲ್ಲ ಎಂದು ಅವರು ಟೀಕಿಸಿದರು.

ಪ್ರತಿವರ್ಷ ಇರುತ್ತಿದ್ದ ದಾಸೋಹ, ಊಟದ ವ್ಯವಸ್ಥೆ ಸಹ ಮೊದಲಿದ್ದ ಸ್ಥಳದಲ್ಲಿ ಇಲ್ಲ. ಹಿಂದಿನ ವರ್ಷಗಳಲ್ಲಿ ಭಕ್ತಾದಿಗಳು ಬಹಳ ಅಚ್ಚುಕಟ್ಟಾಗಿ ಬೆಳಗ್ಗೆಯಿಂದ ರಾತ್ರಿಯವರೆಗೆ ಊಟದ ವ್ಯವಸ್ಥೆ ಮಾಡುತ್ತಿದ್ದರು. ಈ ಬಾರಿ ಬೆಟ್ಟದ ಪ್ರಾಧಿಕಾರ ದುಡ್ಡು ಹೊಡೆಯಲು ತಾನೇ ಮಾಡಿದೆ. ಜೊತೆಗೆ ಡ್ರೈ ಫ್ರೂಟ್ಸ್ ಹೆಸರಿನಲ್ಲೂ ಹಣ ಲೂಟಿ ಮಾಡುತ್ತಿದೆ. ಭಕ್ತಾದಿಗಳೇ 2 ಸಾವಿರ ಟಿಕೆಟ್ ಇದ್ದರೆ ಬೆಟ್ಟಕ್ಕೆ ಬನ್ನಿ. ಇಲ್ಲವಾದರೆ ಮನೆಯಿಂದಲೇ ತಾಯಿಗೆ ಕೈ ಮುಗಿದು ಬಿಡಿ ಎನ್ನುವಂತಿತ್ತು ಜಿಲ್ಲಾಡಳಿತದ ವ್ಯವಸ್ಥೆ ಎಂದು ಅವರು ಆರೋಪಿಸಿದರು.

ಭಕ್ತ ಪರಾಕಾಷ್ಠೆಯ ಹೆಸರಲ್ಲಿ ವಿಶೇಷ ದರ್ಶನದಿಂದ ಸರ್ಕಾರ 2 ಸಾವಿರ ಲೂಟಿ ಮಾಡುತ್ತಿದೆ. ಈ ವಿಶೇಷ ದರ್ಶನದಿಂದಾಗಿ ಸರ್ಕಾರ ಉಳಿದ ಭಕ್ತಾದಿಗಳನ್ನು ಕಡೆಗಣಿಸುತ್ತಿದೆ. ಕೇವಲ ಆಷಾಢ ಶುಕ್ರವಾರಕ್ಕೆ ಮಾತ್ರ ಸೀಮಿತವಾಗಿದ್ದ, ಖಾಸಗಿ ವಾಹನಗಳ ನಿರ್ಬಂಧ 2 ಸಾವಿರ ವಿಶೇಷ ದರ್ಶನದಿಂದಾಗಿ ಶನಿವಾರ, ಭಾನುವಾರಗಳಿಗೂ ವಿಸ್ತರಿಸಿದೆ. ಸ್ಥಳೀಯ ಅಂಗಡಿ ವ್ಯಾಪಾರಿಗಳನ್ನು ತನ್ನ ಸ್ವಾರ್ಥಕ್ಕಾಗಿ 3 ದಿನ ಮುಚ್ಚಿಸಿ, ಅವರ ಹೊಟ್ಟೆಯ ಮೇಲೆ ಹೊಡೆಯುತ್ತಿರುವುದು ಸರಿಯಲ್ಲ ಎಂದು ಅವರು ಖಂಡಿಸಿದರು.

ಮೆಟ್ಟಿಲು ಹತ್ತಿ ಬರುವ ಭಕ್ತಾದಿಗಳಿಗೆ ಸಮರ್ಪಕ ಕುಡಿಯುವ ನೀರಿನ ವ್ಯವಸ್ಥೆ, ಶೌಚಾಲಯದ ವ್ಯವಸ್ಥೆ ಹಾಗೂ ಬೇಗ ದರ್ಶನ ಮಾಡಿಸುವ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಮಾಡಬೇಕು ಎಂದು ಅವರು ಒತ್ತಾಯಿಸಿದರು.

ಸೇನಾ ಪಡೆಯ ಜಿಲ್ಲಾಧ್ಯಕ್ಷ ತೇಜೇಶ್ ಲೋಕೇಶ್ ಗೌಡ, ಮುಖಂಡರಾದ ಸುರೇಶ್, ಪ್ರಭುಶಂಕರ್, ಪ್ರಜೀಶ್, ಶಿವಕುಮಾರ್, ಮಧುವನ ಚಂದ್ರು, ಬೋಗಾದಿ ಸಿದ್ದೇಗೌಡ, ಶಿವಲಿಂಗಯ್ಯ, ನೇಹಾ, ಭಾಗ್ಯಮ್ಮ, ಪದ್ಮಾ, ಕೃಷ್ಣೇಗೌಡ, ಗಿರೀಶ್, ನಾಗರಾಜು, ಹನುಮಂತಯ್ಯ, ಗಣೇಶ್, ಕುಮಾರ್ ಗೌಡ, ನಾರಾಯಣ ಗೌಡ, ಆನಂದ್ ಗೌಡ, ಬಸವರಾಜು, ಗೀತಾ ಗೌಡ, ಪ್ರಭಾಕರ್, ಮೂರ್ತಿ ಲಿಂಗಯ್ಯ, ರಘು ಅರಸ್ ಮೊದಲಾದವರು ಇದ್ದರು.

PREV