ಹಳೇ ಕುಂದುವಾಡ ಮುಖ್ಯ ರಸ್ತೆ ವಿವಾದ ಸುಖಾಂತ್ಯ

KannadaprabhaNewsNetwork |  
Published : Aug 08, 2025, 01:00 AM IST
7ಕೆಡಿವಿಜಿ1-ದಾವಣಗೆರೆ ಹೊರ ವಲಯದ ಹಳೆ ಕುಂದುವಾಡ ಗ್ರಾಮಸ್ಥರು ಸಿಸಿ ರಸ್ತೆ ನಿರ್ಮಿಸುವಂತೆ ದಿಢೀರನೇ ರಸ್ತೆ ತಡೆ ಮಾಡಿ, ಪಾಲಿಕೆ ಆಯುಕ್ತೆ ರೇಣುಕಾ ಇತರೆ ಅಧಿಕಾರಿಗಳ ಸಮ್ಮುಖದಲ್ಲೇ ಪ್ರತಿಭಟಿಸುತ್ತಿರುವುದು. ................7ಕೆಡಿವಿಜಿ2-ದಾವಣಗೆರೆ ಹೊರ ವಲಯದ ಹಳೆ ಕುಂದುವಾಡ ಗ್ರಾಮಸ್ಥರು ರಸ್ತೆ ನಿರ್ಮಿಸುವಂತೆ, ರಸ್ತೆಗೆಂದು ಹೇಳುತ್ತಿರುವ ಜಾಗ ತಮ್ಮದೆಂದು ಹೇಳಿದ ಶಿವಕುಮಾರ ಎರಡೂ ಕಡೆಯವರ ಅಹವಾಲು ಆಲಿಸುತ್ತಿರುವ ಪಾಲಿಕೆ ಆಯುಕ್ತೆ ರೇಣುಕಾ ಇತರೆ ಅಧಿಕಾರಿಗಳು. | Kannada Prabha

ಸಾರಾಂಶ

ಹಳೇ ಕುಂದುವಾಡ ಗ್ರಾಮದ ಮುಖ್ಯ ರಸ್ತೆ ಜಾಗದ ವಿವಾದ ಇದೀಗ ತೀವ್ರ ಸ್ವರೂಪ ಪಡೆದಿದೆ. ಪಾಲಿಕೆ ಆಯುಕ್ತರು ಸೇರಿದಂತೆ ಅಧಿಕಾರಿಗಳ ತಂಡ ಗುರುವಾರ ಸ್ಥಳ ಪರಿಶೀಲನೆಗೆ ಬಂದ ವೇಳೆ ಸಂಚಾರ ಬಂದ್ ಮಾಡಿದ ವ್ಯಕ್ತಿ, ಗ್ರಾಮಸ್ಥರ ಮಧ್ಯೆ ಮಾತಿನ ಚಕಮಕಿ ನಡೆಯಿತು. ಕೊನೆಗೂ ಪಾಲಿಕೆ ಆಯುಕ್ತರು ವಿವಾದ ಸುಖಾಂತ್ಯಗೊಳಿಸುವಲ್ಲಿ ಯಶಸ್ವಿಯಾದರು.

- ಗ್ರಾಮಸ್ಥರು- ಜಾಗ ತಮ್ಮದೆಂದ ವ್ಯಕ್ತಿ ಮಧ್ಯೆ ತೀವ್ರ ವಾಕ್ಸಮರ । ಪಾಲಿಕೆ ಆಯುಕ್ತೆ ರೇಣುಕಾ ಸ್ಥಳಕ್ಕೆ ಭೇಟಿ, ಮನವೊಲಿಕೆ- - -

- ಗ್ರಾಮಸ್ಥರು ತಂತಿ ಬೇಲಿ ಕಿತ್ತುಹಾಕಿದ್ದರಿಂದ ನ್ಯಾಯಾಲಯ ಮೊರೆ ಹೋಗಿದ್ದ ಶಿವಕುಮಾರ

- ವಿವಾದಿತ ಜಾಗ ಕೈಬಿಟ್ಟು ಮಧ್ಯ 30 ಅಡಿ ರಸ್ತೆ ನಿರ್ಮಿಸುವುದಾಗಿ ಹೇಳಿದರೂ ಕೇಳದ ಶಿವಕುಮಾರ

- ಬದಲಿ ರಸ್ತೆ ಮಾಡಿಕೊಳ್ಳಿ, ನಮ್ಮ ಜಾಗವೇ ಯಾಕೆ ಎಂಬ ಆಕ್ಷೇಪಕ್ಕೆ ಕೆರಳಿದ ಗ್ರಾಮಸ್ಥರು

- ಯಾರೋ ಜಾಗ ತಮ್ಮದೆಂದರೆ ಅವರ ಜತೆ ಮಾತೇಕೇ, ನಿಯಮಾನುಸಾರ ರಸ್ತೆ ನಿರ್ಮಿಸಿ ಎಂದ ಗ್ರಾಮಸ್ಥರು

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಹಳೇ ಕುಂದುವಾಡ ಗ್ರಾಮದ ಮುಖ್ಯ ರಸ್ತೆ ಜಾಗದ ವಿವಾದ ಇದೀಗ ತೀವ್ರ ಸ್ವರೂಪ ಪಡೆದಿದೆ. ಪಾಲಿಕೆ ಆಯುಕ್ತರು ಸೇರಿದಂತೆ ಅಧಿಕಾರಿಗಳ ತಂಡ ಗುರುವಾರ ಸ್ಥಳ ಪರಿಶೀಲನೆಗೆ ಬಂದ ವೇಳೆ ಸಂಚಾರ ಬಂದ್ ಮಾಡಿದ ವ್ಯಕ್ತಿ, ಗ್ರಾಮಸ್ಥರ ಮಧ್ಯೆ ಮಾತಿನ ಚಕಮಕಿ ನಡೆಯಿತು. ಕೊನೆಗೂ ಪಾಲಿಕೆ ಆಯುಕ್ತರು ವಿವಾದ ಸುಖಾಂತ್ಯಗೊಳಿಸುವಲ್ಲಿ ಯಶಸ್ವಿಯಾದರು.

ನಗರದ ಹಳೇ ಕುಂದುವಾಡ ಗ್ರಾಮದ ಮುಖ್ಯ ರಸ್ತೆಯ ಕೆರೆ ಸಮೀಪದ ಜಾಗ ತಮ್ಮದೆಂದು ಶಿವಕುಮಾರ ಎಂಬವರು ರಸ್ತೆಗೆ ಬೇಲಿ ಹಾಕಿ ಬಂದ್ ಮಾಡಿದ್ದರು. ಇದರಿಂದ ಆಕ್ರೋಶಗೊಂಡ ಗ್ರಾಮಸ್ಥರು ತಂತಿ ಬೇಲಿ ಕಿತ್ತುಹಾಕಿದ್ದರಿಂದ ಶಿವಕುಮಾರ ನ್ಯಾಯಾಲಯದ ಮೊರೆ ಹೋಗಿದ್ದ ಪರಿಣಾಮ ರಸ್ತೆ ನಿರ್ಮಾಣ ಕಾಮಗಾರಿ ಅರ್ಧಕ್ಕೇ ನಿಂತು, ಸಂಚಾರ ಮಾರ್ಗದಲ್ಲಿ ಗುಂಡಿಬಿದ್ದಿತ್ತು.

ಒಂದಿಷ್ಟು ಜೋರು ಮಳೆಯಾದರೂ ಈ ರಸ್ತೆ ಕೆರೆಯಂತಾಗುತ್ತಿತ್ತು. ಮಕ್ಕಳು, ಮಹಿಳೆಯರು, ವೃದ್ಧರು ಜೀವ ಕೈಯಲ್ಲಿಡಿದು ಸಂಚರಿಸುವ ಪರಿಸ್ಥಿತಿ ಇತ್ತು. ಹಾಗಾಗಿ, ಗ್ರಾಮಸ್ಥರು ಒತ್ತುವರಿ ತೆರವು ಮಾಡಿ, ರಸ್ತೆಯಲ್ಲಿ ಸಂಚಾರಕ್ಕೆ ಅನುವು ಮಾಡಿಕೊಡುವಂತೆ ಪಾಲಿಕೆ ಆಯಕ್ತರಿಗೆ ಮನವಿ ಮಾಡಿದ್ದರು. ಗ್ರಾಮಸ್ಥರ ಮನವಿ ಮೇರೆಗೆ ಆಯುಕ್ತೆ ರೇಣುಕಾ ಮತ್ತು ಅಧಿಕಾರಿಗಳ ತಂಡ ಗುರುವಾರ ಸ್ಥಳಕ್ಕೆ ಭೇಟಿ ನೀಡಿತ್ತು.

ವಿವಾದಿತ ಸ್ಥಳ ವೀಕ್ಷಿಸಿದ ಗ್ರಾಮಸ್ಥರು ಹಾಗೂ ರಸ್ತೆಗೆ ಬೇಲಿ ಹಾಕಿದ್ದ ವ್ಯಕ್ತಿ ಕಡೆಯವರ ಮಾತುಗಳನ್ನು ಆಲಿಸಿದ ಪಾಲಿಕೆ ಆಯುಕ್ತರಾದ ರೇಣುಕಾ, ಸಾರ್ವಜನಿಕರ ಸಂಚಾರಕ್ಕೆ ತುಂಬಾ ತೊಂದರೆಯಾಗುತ್ತಿದೆ. ಈ ಹಿನ್ನೆಲೆ ವಿವಾದಿತ ಜಾಗವನ್ನು ಬಿಟ್ಟು, ಮಧ್ಯ 30 ಅಡಿ ರಸ್ತೆ ನಿರ್ಮಿಸುವುದಾಗಿ ಹೇಳಿದರು. ಅದಕ್ಕೆ ಕಿವಿಗೊಡದ ಶಿವಕುಮಾರ, ಬದಲಿ ರಸ್ತೆ ಮಾಡಿಕೊಳ್ಳಿ. ನಮ್ಮ ಜಾಗವೇ ಯಾಕೆ ಎಂದು ಆಕ್ಷೇಪಿಸಿದರು. ಆಗ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.

ಕಳೆದ 2 ವರ್ಷದಿಂದಲೂ ಇದೇ ಕಥೆ ಹೇಳುತ್ತಿದ್ದೀರಿ. ಯಾರೋ ಜಾಗ ತಮ್ಮದೆಂದು ಹೇಳಿಕೊಂಡವರ ಬಳಿ ಮಾತನಾಡುವುದು ಯಾಕೆ? ನಿಯಮಾನುಸಾರವೇ ರಸ್ತೆ ಕಾಮಗಾರಿ ಕೈಗೊಳ್ಳಿ. ಯಾರು ಬರುತ್ತಾರೆ, ಅಡ್ಡಿಪಡಿಸುತ್ತಾರೋ ನಾವು ನೋಡುತ್ತೇವೆ ಎಂದು ಗ್ರಾಮಸ್ಥರೆಲ್ಲರೂ ಸಂಚಾರ ಬಂದ್ ಮಾಡಿ, ರಸ್ತೆಯಲ್ಲೇ ಧರಣಿ ಕುಳಿತರು. ಇದರಿಂದ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುವಂತಾಯಿತು.

ಪರಿಸ್ಥಿತಿ ಸೂಕ್ಷ್ಮತೆ ಅರಿತ ಪಾಲಿಕೆ ಆಯುಕ್ತೆ ರೇಣುಕಾ, ಪಕ್ಕದ ಜಾಗದ ಮಾಲೀಕ ಶಿವಕುಮಾರ್‌ ಅವರಿಗೆ ಮನವರಿಕೆ ಮಾಡಿಕೊಟ್ಟಿದ್ದೇವೆ. ವಿವಾದ ಮುಂದುವರಿದು ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. 30 ಅಡಿ ರಸ್ತೆ ನಿರ್ಮಿಸುತ್ತೇವೆ ಎಂದು ಹೇಳಿದ್ದಕ್ಕೆ ಶಿವಕುಮಾರ ಸಹ ಒಪ್ಪಿಕೊಂಡಿದ್ದಾರೆ. ಅಲ್ಲದೇ. ಕೆರೆ ರಸ್ತೆಯ ಗುಂಡಿಗಳನ್ನು ಸಹ ಮುಚ್ಚುತ್ತೇವೆ. ಆದಷ್ಟು ಬೇಗನೇ ಅಲ್ಲಿಯೂ ಸಿಮೆಂಟ್ ರಸ್ತೆ ನಿರ್ಮಿಸುವ ಭರವಸೆಯನ್ನು ಆಯುಕ್ತರು ನೀಡಿದರು.

ಸಾರ್ವಜನಿಕರಿಗೆ ಅನುಕೂಲ ಆಗುವಂತೆ ರಸ್ತೆ ನಿರ್ಮಿಸಲು ಪಾಲಿಕೆ ಬದ್ಧವಾಗಿದೆ. ಶಿವಕುಮಾರ ಅವರೂ ಸಮ್ಮತಿಸಿದ್ದಾರೆ. ನೀವೂ ಸಹ ರಸ್ತೆ ತಡೆ ಮಾಡುವುದು, ಹೋರಾಟ ಮಾಡುವುದನ್ನು ಬಿಟ್ಟು ಅಭಿವೃದ್ಧಿಗೆ ಸಹಕರಿಸಿ. ಆದಷ್ಟು ಬೇಗನೆ ಇಲ್ಲಿ ಸಿ.ಸಿ. ರಸ್ತೆ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗುವುದು. ಸದ್ಯಕ್ಕೆ ರಸ್ತೆಯಲ್ಲಿರುವ ಗುಂಡಿಗಳನ್ನು ಮುಚ್ಚಿಸುತ್ತೇವೆ ಎಂದು ಹೇಳಿದರು. ಬಳಿಕ ಗ್ರಾಮಸ್ಥರು ಹೋರಾಟವನ್ನು ಹಿಂಪಡೆದರು.

ಕಾಂಗ್ರೆಸ್ ಮುಖಂಡ ಹುಲ್ಮನಿ ಗಣೇಶ, ಹಳೇ ಕುಂದುವಾಡ ಗ್ರಾಮದ ಮುಖಂಡರಾದ ಮುರುಗೆವ್ವರ ಅಣ್ಣಪ್ಪ, ಮಿಟ್ಲಕಟ್ಟೆ ಚಂದ್ರಪ್ಪ, ಡಿ.ಜಿ.ಪ್ರಕಾಶ, ಎಚ್.ಜಿ.ಮಂಜಪ್ಪ, ಯುವ ಮುಖಂಡರಾದ ಮಧು ನಾಗರಾಜ, ಪ್ರಭಾಕರ, ಲಿಂಗರಾಜ, ಕಿಟ್ಟಪ್ಪ, ಹಾಲಪ್ಪ ನಿಂಗಪ್ಪ, ಅಜಯ್, ಚಂದ್ರು, ಸಿದ್ದೇಶ, ಗದಿಗೆಪ್ಪ, ಪಾಲಿಕೆ ಅಧಿಕಾರಿಗಳು ಇದ್ದರು.

- - -

-7ಕೆಡಿವಿಜಿ1.ಜೆಪಿಜಿ:

ದಾವಣಗೆರೆ ಹೊರವಲಯದ ಹಳೇ ಕುಂದುವಾಡ ಗ್ರಾಮಸ್ಥರು ಸಿ.ಸಿ. ರಸ್ತೆ ನಿರ್ಮಿಸುವಂತೆ ಆಗ್ರಹಿಸಿ ದಿಢೀರ್‌ ರಸ್ತೆ ತಡೆ ನಡೆಸಿ, ಪಾಲಿಕೆ ಆಯುಕ್ತೆ ರೇಣುಕಾ ಇತರೆ ಅಧಿಕಾರಿಗಳ ಸಮ್ಮುಖ ಪ್ರತಿಭಟಿಸಿದರು. -7ಕೆಡಿವಿಜಿ2.ಜೆಪಿಜಿ:

ದಾವಣಗೆರೆ ಹೊರವಲಯದ ಹಳೇ ಕುಂದುವಾಡ ಗ್ರಾಮಸ್ಥರು- ಜಾಗ ತಮ್ಮದೆಂದು ಹೇಳಿದ ಶಿವಕುಮಾರ ಅವರ ಅಹವಾಲುಗಳನ್ನು ಪಾಲಿಕೆ ಆಯುಕ್ತೆ ರೇಣುಕಾ ಮತ್ತಿತರ ಇಲಾಖೆಗಳ ಅಧಿಕಾರಿಗಳು ಆಲಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಹಕಾರದಿಂದ ಸಮೃದ್ಧಿ - ಸಹಕಾರ ಭಾರತಿಯಿಂದ ಸಹಕಾರ ಕ್ಷೇತ್ರದ ಬಲವರ್ಧನೆ
ದ್ವೇಷಭಾಷಣ ಬಿಲ್‌ಗೆ ಸಹಿ ಬೇಡ : ಗೌರ್ನರ್‌ಗೆ ಬಿಜೆಪಿ