ಹಿರಿಯೂರು: ನಗರದ ಹಳೆ ಕಡ್ಲೆಕಾಯಿ ಮಂಡಿಯಲ್ಲಿ ವ್ಯಾಪಾರ ಮಾಡಲು ಕೆಲವರು ತೊಂದರೆ ನೀಡುತ್ತಿದ್ದಾರೆ ಎಂದು ಹಳೆ ಕಡ್ಲೆಕಾಯಿ ಮಂಡಿಯ ಬೀದಿಬದಿ ವ್ಯಾಪಾರಿಗಳು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಬೀದಿಬದಿ ವ್ಯಾಪಾರಿಗಳು, ನಾವು ಈ ಹಿಂದೆ ನಗರದ ಬಿಇಓ ಕಚೇರಿಯಿಂದ ನಗರಸಭೆಯವರೆಗೂ ಸುಮಾರು 30 ಬಡ ಕುಟುಂಬಗಳು ಬೀದಿ ಬದಿಯಲ್ಲಿ ತಳ್ಳುವ ಗಾಡಿಗಳನ್ನು ಇಟ್ಟುಕೊಂಡು ವಿವಿಧ ರೀತಿಯ ವ್ಯಾಪಾರ ಮಾಡುತ್ತಿದ್ದು, ನಗರಸಭೆಯಿಂದ ಬೀದಿಬದಿ ವ್ಯಾಪಾರಿಗಳಿಗೆ ಗುರುತಿನ ಚೀಟಿ ಮಾಡಿಕೊಟ್ಟಿದ್ದಾರೆ. ನಗರಸಭೆಯಿಂದ ನಮಗೆ ಸಾಲ ಸೌಲಭ್ಯವನ್ನೂ ಸಹ ನೀಡಿದ್ದಾರೆ. ಆದರೆ ಜನದಟ್ಟಣೆ ಆಗುತ್ತದೆ ಎಂದು ಈ ಹಿಂದಿದ್ದ ಪೌರಾಯುಕ್ತರಾದ ಮಹಂತೇಶ್‌ರವರು ಹಳೇ ಕಡ್ಲೆಕಾಯಿ ಮಂಡಿಯಲ್ಲಿ ವ್ಯಾಪಾರ ಮಾಡುವಂತೆ ಸ್ಥಳಾವಕಾಶ ಮಾಡಿ ಕೊಟ್ಟಿದ್ದರು. ನೀರು, ದೀಪದ ವ್ಯವಸ್ಥೆಯನ್ನು ಮಾಡಿಕೊಡುವ ಭರವಸೆಯನ್ನು ನೀಡುವುದರ ಜೊತೆಗೆ ಶಾಶ್ವತವಾಗಿ ವ್ಯಾಪಾರ ಮಾಡಿಕೊಂಡು ಹೋಗಲು ಅವಕಾಶ ಕಲ್ಪಿಸಿಕೊಟ್ಟಿದ್ದರು. ಅದರಂತೆ ನಾವುಗಳು ಇದುವರೆವಿಗೂ ಹಳೆ ಕಡ್ಲೆಕಾಯಿ ಮಂಡಿಯಲ್ಲಿ ಯಾರಿಗೂ ಯಾವುದೇ ರೀತಿಯ ತೊಂದರೆಯಾಗದoತೆ ನಮ್ಮ ವ್ಯಾಪಾರವನ್ನು ಮಾಡುತ್ತಿರುತ್ತೇವೆ ಎಂದು ತಿಳಿಸಿದರು.ನಾವುಗಳು ಇದುವರೆವಿಗೂ ಈ ಜಾಗದಲ್ಲಿ ಕ್ರಿಕೆಟ್ ಟೂರ್ನಮೆಂಟ್ ಅಥವಾ ಇನ್ಯಾವುದೇ ಕ್ರೀಡೆಗಳು ನಡೆದಲ್ಲಿ, ಯಾವುದೇ ರೀತಿಯ ಕಾರ್ಯಕ್ರಮಗಳು ಜರುಗಿದಲ್ಲಿ ಆ ದಿನದಂದು ವ್ಯಾಪಾರ ಮಾಡದೆ ಬಂದ್ ಮಾಡಿ ತೊಂದರೆ ಆಗದಂತೆ ನೋಡಿಕೊಂಡು ಸಹಕರಿಸುತ್ತಿದ್ದೇವೆ. ಆದರೆ ಇತ್ತೀಚಿಗೆ ಈ ಸ್ಥಳದಲ್ಲಿ ಕೇವಲ ಒಂದು ಗಂಟೆ ಮಾತ್ರ ಕ್ರಿಕೆಟ್ ಆಡುವವರು 30 ಕುಟುಂಬದ ದುಡಿಮೆಯ ಅನ್ನ ಕಿತ್ತುಕೊಳ್ಳುತ್ತಿದ್ದಾರೆ. ವ್ಯಾಪಾರ ಮಾಡಲು ಅಡ್ಡಿಪಡಿಸಿ ತೊಂದರೆ ಮಾಡಿ ಇಲ್ಲಿ ವ್ಯಾಪಾರ ಮಾಡಕೂಡದು ಇದು ನಮ್ಮ ಸ್ವತ್ತು ಎಂದು ದೌರ್ಜನ್ಯದಿಂದ ವರ್ತಿಸುತ್ತಿದ್ದಾರೆ ಎಂದು ದೂರಿದರು.
ನಾವುಗಳು ಸುಮಾರು 30 ಕುಟುಂಬಗಳು ಈ ವ್ಯಾಪಾರವನ್ನೇ ಅವಲಂಬಿಸಿಕೊoಡು ಜೀವನ ನಡೆಸುತ್ತಿದ್ದು, ಈ ವ್ಯಾಪಾರವನ್ನು ಮಾಡಲು ಸಾಲವನ್ನು ಕೂಡ ಮಾಡಿದ್ದೇವೆ. ಈ ರೀತಿಯ ತೊಂದರೆಯಿoದ ನಮಗೆ ಆರ್ಥಿಕವಾಗಿ ನಷ್ಟವುಂಟಾಗಿ ನಮ್ಮ ಸಂಸಾರಗಳು ಬೀದಿಗೆ ಬರುವಂತಾಗುತ್ತದೆ. ಆದ್ದರಿoದ ಜಿಲ್ಲಾಧಿಕಾರಿಗಳು ನಮ್ಮ ಮನವಿಯನ್ನು ಮಾನವೀಯ ದೃಷ್ಟಿಯಿಂದ ಪರಿಗಣಿಸಿ ಖುದ್ದು ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿ ಹಳೆ ಕಡ್ಲೆಕಾಯಿ ಮಂಡಿಯಲ್ಲಿ ವ್ಯಾಪಾರ ಮಾಡಲು ಸೂಕ್ತ ವ್ಯವಸ್ಥೆ ಕಲ್ಪಿಸಿಕೊಡಬೇಕೆಂದು ಮನವಿ ಮಾಡಿದರು.ಈ ಸಂದರ್ಭದಲ್ಲಿ ಅಂಬೇಡ್ಕರ್ ಸ್ವಾಭಿಮಾನಿ ಸೇನೆ ಜಿಲ್ಲಾ ಸಮಿತಿಯ ರಾಜ್ಯ ಕಾರ್ಯದರ್ಶಿ ರಾಮಚಂದ್ರಪ್ಪ.ಕೆ, ಜಿಲ್ಲಾ ಕಾರ್ಯಾಧ್ಯಕ್ಷ ತಿಪ್ಪೇಸ್ವಾಮಿ ಪಿಟ್ಲಾಲಿ, ಹಿರಿಯೂರು ತಾ.ಅಧ್ಯಕ್ಷ ರಾಘವೇಂದ್ರ.ಆರ್, ತಾ.ಕಾರ್ಯಾಧ್ಯಕ್ಷ ಸಾಧಿಕ್ ಚನ್ನಗಿರಿ, ಮಹಾನಾಯಕ ದಲಿತಸೇನೆ ರಾಜ್ಯಾಧ್ಯಕ್ಷ ಮಂಜುನಾಥ್ ತಾಳಿಕೆರೆ, ರಾಜ್ಯ ಕಾರ್ಯಾಧ್ಯಕ್ಷ ಕೆ.ಪಿ.ಶ್ರೀನಿವಾಸ್, ಕರ್ನಾಟಕ ನವನಿರ್ಮಾಣ ಸೇನೆ ತಾ.ಅಧ್ಯಕ್ಷ ಲಕ್ಷ್ಮೀಕಾಂತ್, ಬೀದಿ ಬದಿ ವ್ಯಾಪಾರ ಸಂಘದ ಅಧ್ಯಕ್ಷ ರವಿಚಂದ್ರ, ಉಪಾಧ್ಯಕ್ಷ ರಫೀವುಲ್ಲಾ, ಚಲುಮೇಶ್, ರಮೇಶ್, ಅಭಿಷೇಕ್ ಮತ್ತಿತರರಿದ್ದರು.