ರಮೇಶ್ ಬಿದರಕೆರೆ
ಜಿಲ್ಲೆಯ ಜೀವನಾಡಿ ಜಲಾಶಯವಾದ ವಿವಿ ಸಾಗರ ಜಲಾಶಯ ಕೋಡಿ ಬೀಳಲು ಇನ್ನು 3 ಅಡಿ ಮಾತ್ರ ಬಾಕಿ. ಗುರುವಾರದ ಹೊತ್ತಿಗೆ 127 ಅಡಿ ದಾಟಿರುವ ನೀರಿನ ಮಟ್ಟ ಮತ್ತೊಮ್ಮೆ ಕೋಡಿ ಬೀಳುವ ಸಂಭ್ರಮವನ್ನು ಜಿಲ್ಲೆಯ ಜನರಿಗೆ ಒದಗಿಸುವ ಆಶಾಭಾವನೆ ಮೂಡಿಸಿದೆ.
ಎತ್ತಿನಹೊಳೆ, ಭದ್ರಾ ನೀರು ನಿರಂತರವಾಗಿ ಬಂದರೆ ಇಲ್ಲವೇ ಜಲಾಶಯದ ಮೇಲ್ಬಾಗ ಮಳೆ ಸುರಿದರೆ ವಿವಿ ಸಾಗರ ಜಲಾಶಯದ ಕೋಡಿ ಬೀಳುವ ದಿನ ತುಂಬಾ ದೂರವೇನೂ ಉಳಿದಿಲ್ಲ. ಜುಲೈ ತಿಂಗಳ ಅಂತ್ಯದಲ್ಲಿ 113.08 ರಷ್ಟಿದ್ದ ಜಲಾಶಯದ ನೀರಿನ ಮಟ್ಟ ಅ.30 ರ ಹೊತ್ತಿಗೆ 127 ಅಡಿ ಮುಟ್ಟಿದೆ.ಕೇವಲ ನಾಲ್ಕು ತಿಂಗಳಲ್ಲಿ ಸುಮಾರು 14 ಅಡಿಯಷ್ಟು ನೀರು ಸಂಗ್ರಹವಾಗಿದ್ದು, ಜಿಲ್ಲೆಯ ಜನರ ನೀರಿನ ಬವಣೆ ನೀಗಿಸಲಿದೆ. ಬರಗಾಲದ ಪ್ರದೇಶ ಎಂದೇ ಗುರುತಿಸಿಕೊಂಡಿರುವ ಈ ಭಾಗಕ್ಕೆ ವಿವಿ ಸಾಗರ ಜಲಾಶಯವೇ ಆಧಾರಸ್ಥoಭವಾಗಿದೆ. ಚಿತ್ರದುರ್ಗ, ಚಳ್ಳಕೆರೆ, ಹಿರಿಯೂರು ತಾಲೂಕುಗಳ ಜನರ ಕುಡಿಯುವ ನೀರಿನ ದಾಹ ಹಿಂಗಿಸುವ ಜಲಾಶಯವು 12135 ಹೆಕ್ಟರ್ ಅಚ್ಚುಕಟ್ಟು ಪ್ರದೇಶಕ್ಕೆ ನೀರುಣಿಸುತ್ತದೆ.ಮೈಸೂರು ಮಹಾರಾಜರು ನಿರ್ಮಿಸಿದ ಜಲಾಶಯ: ಜನ, ಜಾನುವಾರುಗಳಿಗೆ ಕುಡಿಯುವ ನೀರಿಗೂ ಹಾಹಾಕಾರ ಬಂದಂತಹ ಸ್ಥಿತಿಯಲ್ಲಿ ಮೈಸೂರು ಮಹಾರಾಜರು ತಾಲೂಕಿನ ಮಾರಿಕಣಿವೆ ಬಳಿ 1907ರಲ್ಲಿ ಜಲಾಶಯ ನಿರ್ಮಿಸಿದರು. ಜಲಾಶಯದ ನಿರ್ಮಾಣದ ಕಾಲದಲ್ಲಿ ಸಂಪನ್ಮೂಲದ ಕೊರತೆ ಉಂಟಾಗಿದ್ದರಿಂದ ಮಹಾರಾಣಿಯವರ ಒಡವೆ ಅಡವಿಟ್ಟು ಹಣ ಹೊಂದಿಸಿ ಜಲಾಶಯ ನಿರ್ಮಾಣ ಕಾರ್ಯ ಪೂರ್ಣಗೊಳಿಸಿದರು ಎನ್ನಲಾಗಿದೆ. ಮೈಸೂರು ಅರಸರ ದೂರದೃಷ್ಟಿಯ ಆಲೋಚನೆಯಿಂದ ನೂರಾರು ವರ್ಷಗಳಿಂದ ಈ ಭಾಗದ ಜನ ಜಾನುವಾರುಗಳ ಕುಡಿಯುವ ನೀರಿನ ದಾಹ ನೀಗಿ ಸಾವಿರಾರು ಎಕರೆ ನೀರಾವರಿ ಸೌಲಭ್ಯ ಪಡೆದಿವೆ.
ಎರಡೇ ವರ್ಷಕ್ಕೆ ಮತ್ತೆ ಕೋಡಿ : ಜಲಾಶಯ ನಿರ್ಮಾಣವಾಗಿ 26 ವರ್ಷಗಳ ನಂತರ ಅಂದರೆ 1933ರಲ್ಲಿ ಮೊದಲ ಬಾರಿಗೆ ಕೋಡಿ ಬಿದ್ದಿತ್ತು. ಆನಂತರ ಸತತವಾಗಿ 89 ವರ್ಷಗಳ ಕಾಲ ಜಲಾಷಯ ಕೋಡಿ ಬೀಳಲೇ ಇಲ್ಲ. 2022 ರ ಸೆಪ್ಟೆಂಬರ್ ತಿಂಗಳಲ್ಲಿ 89 ವರ್ಷದ ನಂತರ ಕೋಡಿ ಬಿದ್ದ ಜಲಾಶಯ ಈ ತಲೆಮಾರಿನ ಜನಕ್ಕೆ ಆಶ್ಚರ್ಯ ಮತ್ತು ಅಪರೂಪದ ಚಿತ್ರಣ ಒದಗಿಸಿತ್ತು. ಇದೀಗ ಎರಡೇ ವರ್ಷಕ್ಕೆ ಮತ್ತೆ ಅಂತಹುದೊಂದು ಸುವರ್ಣ ಘಳಿಗೆಗೆ ತಾಲೂಕು ಮತ್ತು ಜಿಲ್ಲೆ ಸಾಕ್ಷಿಯಾಗುವ ಕ್ಷಣಗಳು ಹತ್ತಿರ ಬರುತ್ತಿವೆ.
30 ಟಿಎಂಸಿ ನೀರಿನ ಸಾಮರ್ಥ್ಯ ಹೊಂದಿರುವ ಜಲಾಶಯಕ್ಕೆ ಇನ್ನು ಒಂದೆರಡು ಟಿಎಂಸಿ ನೀರಿನ ಅವಶ್ಯಕತೆ ಇದ್ದು, ಸೈಕ್ಲೋನ್ ಮತ್ತು ಅಕಾಲಿಕ ಮಳೆಯಿಂದಲೇ ಸಾಕಷ್ಟು ನೀರು ಹರಿದು ಬಂದಿದೆ. ಇದೀಗ ಕೋಡಿ ಬೀಳುವ ಸಂಭ್ರಮವನ್ನು ಕಣ್ತುಂಬಿಕೊಳ್ಳಲು ಜಿಲ್ಲೆಯ ಜನ ತುದಿಗಾಲಲ್ಲಿ ನಿಂತಿದ್ದು ಆದಷ್ಟು ಬೇಗ ರೈತರ ಆ ಕನಸು ಈಡೇರಲಿ.