ಸ್ಪೀಕರ್‌ ಓಂ ಬಿರ್ಲಾ ಆಡಳಿತ ಪಕ್ಷದ ಕೈಗೊಂಬೆ: ಸಲೀಂ ಅಹ್ಮದ್

KannadaprabhaNewsNetwork |  
Published : Feb 12, 2026, 02:30 AM IST
ಹಾವೇರಿ ನಗರದಲ್ಲಿ ಫೆ. 14ರಂದು ನಡೆಯಲಿರುವ ಭೂ ಗ್ಯಾರಂಟಿ ಸಾಧನಾ ಸಮರ್ಪಣಾ ಸಮಾವೇಶದ ಸ್ಥಳಕ್ಕೆ ವಿಧಾನ ಪರಿಷತ್ ಮುಖ್ಯ ಸಚೇತಕ ಸಲೀಂ ಅಹ್ಮದ್ ಭೇಟಿ ನೀಡಿ ಪರಿಶೀಲಿಸಿದರು. | Kannada Prabha

ಸಾರಾಂಶ

ಗ್ಯಾರಂಟಿ ಯೋಜನೆ ಹೊರತುಪಡಿಸಿ ಭೂ ಗ್ಯಾರಂಟಿ ಸಮರ್ಪಣಾ ಸಮಾವೇಶ ಮಾಡುತ್ತಿದ್ದೇವೆ ಎಂದು ವಿಧಾನ ಪರಿಷತ್ ಮುಖ್ಯ ಸಚೇತಕ ಸಲೀಂ ಅಹ್ಮದ್ ಹೇಳಿದರು.

ಹಾವೇರಿ: ಲೋಕಸಭೆಯಲ್ಲಿ ನಿವೃತ್ತ ಸೇನಾ ಮುಖ್ಯಸ್ಥ ನರವಣೆ ಆತ್ಮಚರಿತ್ರೆ ಪುಸ್ತಕ ಬಗ್ಗೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಸದನದಲ್ಲಿ ಚರ್ಚಿಸಲು ಮುಂದಾದರೆ ಕೇಂದ್ರ ಸರ್ಕಾರ ಚರ್ಚೆಗೆ ಅವಕಾಶ ಕಲ್ಪಿಸದಿರುವುದು ದುರ್ದೈವದ ಸಂಗತಿ. ಪಕ್ಷಾತೀತವಾಗಿ ಇರಬೇಕಾದ ಸ್ಪೀಕರ್ ಓಂ ಬಿರ್ಲಾ ಅವರು ಆಡಳಿತ ಪಕ್ಷದ ಕೈಗೊಂಬೆಯಾಗಿದ್ದಾರೆ ಎಂದು ವಿಧಾನಪರಿಷತ್ ಮುಖ್ಯ ಸಚೇತಕ ಸಲೀಂ ಅಹ್ಮದ್ ಕಿಡಿಕಾಡಿದರು.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲೋಕಸಭೆಯ ಅಧಿವೇಶನದಲ್ಲಿ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರಿಗೆ ನಿವೃತ್ತ ಸೇನಾಮುಖ್ಯಸ್ಥರ ಕುರಿತು ಪುಸ್ತಕ ವಿಚಾರ ಮಂಡನೆ ಮಾಡಲು ಕೇಂದ್ರ ಸರ್ಕಾರ ಅವಕಾಶ ಕೊಟ್ಟಿಲ್ಲ. ಇದರ ಹಿಂದೆ ಕೇಂದ್ರ ಸರ್ಕಾರ ದೊಡ್ಡ ಷಡ್ಯಂತ್ರ ನಡೆಸಿದೆ. ಪುಸ್ತಕವನ್ನು ಸದನಕ್ಕೆ ತಂದು ಅದರ ಬಗ್ಗೆ ಚರ್ಚೆ ಮಾಡಲು ಬಿಟ್ಟಿಲ್ಲ. ಅಶಿಸ್ತಿನ ನೆಪದ ಹಿನ್ನೆಲೆ ಕಾಂಗ್ರೆಸ್‌ನ ಏಳೆಂಟು ಸಂಸದರನ್ನು ಅಮಾನತು ಮಾಡಿದ್ದಾರೆ. ಪಾರ್ಲಿಮೆಂಟ್‌ನಲ್ಲಿ ಚರ್ಚೆ ಮಾಡುವುದನ್ನು ಬಿಟ್ಟು ಬೀದಿಯಲ್ಲಿ ಚರ್ಚೆ ಮಾಡೋಕೆ ಆಗುತ್ತಾ ಎಂದು ಪ್ರಶ್ನಿಸಿದ ಅವರು, ಲೋಕಸಭೆ ಸ್ಪೀಕರ್ ಯಾವತ್ತೂ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್‌ ಶಾ ಅವರ ಕೈಗೊಂಬೆಯಂತೆ ವರ್ತಿಸುತ್ತಿದ್ದಾರೆ ಎಂದರು.

ಕೇಂದ್ರ ಸರ್ಕಾರ ಇಡಿ, ಐಟಿ, ಸಿಬಿಐ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಂಡಂತೆ ಸ್ಪೀಕರ್ ಅವರನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ. ಈಗಾಗಲೇ ಸ್ಪೀಕರ್ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ ಮಾಡಲಾಗಿದೆ. ರಾಹುಲ್ ಗಾಂಧಿ ಅವರಿಗೆ ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ಮಾತನಾಡಲು ಅವಕಾಶ ಕೊಡುತ್ತಿಲ್ಲ, ರಾಹುಲ್ ಗಾಂಧಿ ಮೇಲೆ ದೌರ್ಜನ್ಯ ಮಾಡಲಾಗುತ್ತಿದೆ. ಜನಪರ ಹೋರಾಟ ಮಾಡಲು ಅವಕಾಶ ಕೊಡುತ್ತಿಲ್ಲ ಎಂದು ಆರೋಪಿಸಿದರು.

1.10 ಲಕ್ಷ ಫಲಾನುಭವಿಗಳು: ರಾಜ್ಯ ಸರ್ಕಾರಕ್ಕೆ 1 ಸಾವಿರ ದಿನಗಳು ಪೂರೈಸಿದ ಹಿನ್ನೆಲೆ ಫೆ. 14ಕ್ಕೆ ಹಾವೇರಿಯಲ್ಲಿ ಭೂ ಗ್ಯಾರಂಟಿ ಸಾಧನಾ ಸಮರ್ಪಣಾ ಸಮಾವೇಶ ಮಾಡುತ್ತಿದ್ದೇವೆ. ನಮ್ಮ ಸರ್ಕಾರ ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ಆಡಳಿತ ಕೊಟ್ಟಿದೆ. 1.10 ಲಕ್ಷ ಫಲಾನುಭವಿಗಳಿಗೆ ಹಕ್ಕುಪತ್ರ ಕೊಡುತ್ತೇವೆ. ಇದೊಂದು ಐತಿಹಾಸಿಕ ಕಾರ್ಯಕ್ರಮವಾಗಿದೆ. ಸುತ್ತಮುತ್ತ ಏಳೆಂಟು ಜಿಲ್ಲೆಗಳ ಫಲಾನುಭವಿಗಳು ಭಾಗವಹಿಸಲಿದ್ದು, ಸುಮಾರು 2 ಲಕ್ಷ ಜನ ಸೇರುವ ನಿರೀಕ್ಷೆ ಇದೆ. ರಾಜ್ಯದ ಜನತೆಗೆ ಕೊಟ್ಟ ಮಾತಿನಂತೆ ನಡೆದುಕೊಂಡಿದ್ದೇವೆ. ಗ್ಯಾರಂಟಿ ಯೋಜನೆ ಹೊರತುಪಡಿಸಿ ಭೂ ಗ್ಯಾರಂಟಿ ಸಮರ್ಪಣಾ ಸಮಾವೇಶ ಮಾಡುತ್ತಿದ್ದೇವೆ ಎಂದರು.

ಜೀ ರಾಮ್ ಜಿ ವಾಪಸ್ ಪಡೆಯಲಿ: ರಾಜ್ಯ ಸರ್ಕಾರ ಕೇಂದ್ರದ ವಿಬಿ ಜೀ ರಾಮ್‌ ಜೀ ಯೋಜನೆ ವಿರೋಧಿಸಿ ಅಧಿವೇಶನದಲ್ಲಿ ಬಿಲ್ ಪಾಸ್ ಮಾಡಿದೆ. ಮನರೇಗಾ ಯೋಜನೆಯನ್ನೇ ಪುನರ್ ಸ್ಥಾಪಿಸುವಂತೆ ಕೇಂದ್ರಕ್ಕೆ ವರದಿ ಕೊಟ್ಟಿದ್ದೇವೆ. ಈ ಬಗ್ಗೆ ದೇಶಾದ್ಯಂತ ಹೋರಾಟ ಮಾಡಿದ್ದೇವೆ. ರೈತರಿಗೆ ಮಾರಕವಾಗಿದ್ದ ಮೂರು ಕೃಷಿ ಕಾಯಿದೆ ವಾಪಸ್ ಪಡೆದಂತೆ ಜಿ ರಾಮ್ ಜಿ ಯೋಜನೆ ವಾಪಸ್ ಪಡೆಯಬೇಕೆಂದು ಆಗ್ರಹಿಸಿದರು.

ಬಜೆಟ್ ಬಳಿಕ ಸಂಪುಟ ಪುನಾರಚನೆ: ರಾಜ್ಯ ನಾಯಕತ್ವ ಬದಲಾವಣೆ ಕುರಿತು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಈಗಾಗಲೇ ಡಿಸಿಎಂ ಡಿ.ಕೆ. ಶಿವಕುಮಾರ ಅವರನ್ನು ಅಸ್ಸಾಂ ಚುನಾವಣೆ ಉಸ್ತುವಾರಿ ಮಾಡಿದ್ದಾರೆ. ಹೀಗಾಗಿ ದೆಹಲಿಗೆ ತೆರಳಿದ್ದಾರೆ. ದಿಲ್ಲಿಯಲ್ಲಿ ಹೈಕಮಾಂಡ್ ಇರುವಾಗ ಯಾರು ಹೋದರು ಹೈಕಮಾಂಡ್ ಭೇಟಿ ಮಾಡಿ ಚರ್ಚೆ ಮಾಡುತ್ತಾರೆ. ನಾಯಕತ್ವ ಬದಲಾವಣೆ ಬಗ್ಗೆ ಮಾಹಿತಿ ಇಲ್ಲ, ಬಜೆಟ್ ಬಳಿಕ ಸಚಿವ ಸಂಪುಟ ಪುನಾರಚನೆಯಾಗುವ ನಿರೀಕ್ಷೆ ಇದೆ. ಸಂಪುಟದ ಶೇ. 50ರಷ್ಟು ನಾಯಕರಿಗೆ ಪಕ್ಷ ಸಂಘಟನೆಗೆ ಅವಕಾಶ ಕೊಡುತ್ತಾರೆ. ಹೊಸಬರಿಗೆ ಅವಕಾಶ ನೀಡುತ್ತಾರೆ. ಈಗ ಬಜೆಟ್ ಬಗ್ಗೆ ಚರ್ಚೆ ನಡೆಸಲಾಗುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಒಳ್ಳೆಯ ಬಜೆಟ್ ಕೊಡುವ ವಿಶ್ವಾಸ ಇದೆ ಎಂದರು.

ಸುದ್ದಿಗೋಷ್ಠಿಯಲ್ಲಿ ವಿಧಾನಸಭೆ ಉಪಸಭಾಧ್ಯಕ್ಷ, ಶಾಸಕ ರುದ್ರಪ್ಪ ಲಮಾಣಿ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಂಜೀವಕುಮಾರ ನೀರಲಗಿ, ಪ್ರಾಧಿಕಾರ ಅಧ್ಯಕ್ಷ ಎಸ್.ಎಫ್.ಎನ್. ಗಾಜಿಗೌಡ್ರ, ಡಾ. ಸಂಜಯ ಡಾಂಗೆ, ಬಸವರಾಜ ಹೆಡಿಗ್ಗೊಂಡ, ಜಮೀರ್ ಜಿಗರಿ, ದಾಸಪ್ಪ ಕರ್ಜಗಿ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಾನಗಲ್ಲದಲ್ಲಿ ಕುಡಿವ ನೀರಿನ ಸಮಸ್ಯೆಯಾಗದಂತೆ ಮುಂಜಾಗ್ರತೆ
ಚಿರತೆ ದಾಳಿಗೆ ಎರಡು ಕರುಗಳ ಬಲಿ