ಎಲ್ಲೆಡೆ ಮೊಳಗಿದ ಓಂ ನಮಃ ಶಿವಾಯ

KannadaprabhaNewsNetwork |  
Published : Mar 09, 2024, 01:36 AM IST
8ಎಚ್‌ಪಿಟಿ1- ಹಂಪಿಯ ಶ್ರೀವಿರೂಪಾಕ್ಷೇಶ್ವರ ದೇವಾಲಯದಲ್ಲಿ ವಿದ್ಯಾರಣ್ಯ ಭಾರತಿ ಸ್ವಾಮೀಜಿ ಅವರು ಶುಕ್ರವಾರ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು. | Kannada Prabha

ಸಾರಾಂಶ

ಹಂಪಿ ವಿರೂಪಾಕ್ಷೇಶ್ವರ ದೇವಾಲಯದಲ್ಲಿ ಭಕ್ತರು ಸರತಿ ಸಾಲಿನಲ್ಲಿ ಆಗಮಿಸಿ ದೇವರ ದರ್ಶನ ಪಡೆದರು.

ಹೊಸಪೇಟೆ: ದಕ್ಷಿಣ ಕಾಶಿ ಹಂಪಿಯಲ್ಲಿ ಮಹಾಶಿವರಾತ್ರಿ ನಿಮಿತ್ತ ಶುಕ್ರವಾರ ವಿರೂಪಾಕ್ಷೇಶ್ವರ ದೇವರ ದರ್ಶನವನ್ನು ಭಕ್ತರು ಪಡೆದರು. ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ ಭಕ್ತರು ತಮ್ಮ ಹರಕೆ ಅರ್ಪಿಸಿದರು. ಹಂಪಿ ಸೇರಿದಂತೆ ವಿಜಯನಗರ ಜಿಲ್ಲೆಯ ಶಿವನ ದೇಗುಲಗಳಲ್ಲಿ ಶಿವನ ನಾಮಸ್ಮರಣೆ ಜಪಿಸಲಾಯಿತು. ಎಲ್ಲೆಡೆ ಓಂ ನಮಃ ಶಿವಾಯ ಎಂದು ಭಕ್ತರು ನಾಮಸ್ಮರಣೆ ಮಾಡಿದರು.

ವಿರೂಪಾಕ್ಷೇಶ್ವರ ದೇವಾಲಯದಲ್ಲಿ ಭಕ್ತರು ಸರತಿ ಸಾಲಿನಲ್ಲಿ ಆಗಮಿಸಿ ದೇವರ ದರ್ಶನ ಪಡೆದರು. ರಾಜ್ಯ ಸೇರಿದಂತೆ ತೆಲಂಗಾಣ, ಆಂಧ್ರಪ್ರದೇಶ, ಮಹಾರಾಷ್ಟ್ರ, ತಮಿಳುನಾಡು, ಕೇರಳ ಸೇರಿದಂತೆ ದೇಶದ ವಿವಿಧ ಭಾಗಗಳಿಂದಲೂ ಭಕ್ತರು ಆಗಮಿಸಿ ದೇವರ ದರ್ಶನ ಪಡೆದರು. ಇನ್ನು ರಾಜ್ಯದ ದಾವಣಗೆರೆ, ಚಿತ್ರದುರ್ಗ, ಹಾವೇರಿ, ಶಿವಮೊಗ್ಗ, ಗದಗ, ಧಾರವಾಡ, ರಾಯಚೂರು, ಕೊಪ್ಪಳ, ಬಳ್ಳಾರಿ ಸೇರಿದಂತೆ ವಿವಿಧ ಜಿಲ್ಲೆಗಳಿಂದಲೂ ಭಕ್ತರು ಆಗಮಿಸಿ ದೇವರ ದರ್ಶನ ಪಡೆದರು.

ಸ್ವರ್ಣಮುಖ ಕಮಲ ಧಾರಣೆ: ವಿರೂಪಾಕ್ಷೇಶ್ವರ ದೇವರಿಗೆ ವಿಜಯನಗರ ಆಳರಸರ ಕಾಲದ ಸ್ವರ್ಣಮುಖ ಕಮಲವನ್ನು ಧಾರಣೆ ಮಾಡಲಾಯಿತು. ಈ ವೇಳೆ ವಿದ್ಯಾರಣ್ಯ ಭಾರತಿ ಸ್ವಾಮೀಜಿ ಅವರು ವಿಶೇಷ ಪೂಜೆ ಸಲ್ಲಿಸಿದರು. ದೇವರಿಗೆ ಶಿವರಾತ್ರಿ ನಿಮಿತ್ತ ಪಂಚಾಮೃತ ಅಭಿಷೇಕ, ರುದ್ರಾಭಿಷೇಕ, ಸಹಸ್ರನಾಮ, ಬಿಲ್ವಾರ್ಚನೆ ಅಲಂಕಾರ, ಪುಷ್ಪಾಲಂಕಾರ ಮಾಡಲಾಯಿತು. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದ ಪೊಲೀಸರು ಬಂದೋಬಸ್ತ್‌ ಕೈಗೊಂಡಿದ್ದರು.

ಮಹಾಶಿವರಾತ್ರಿ ಹಂಪಿ ವಿರೂಪಾಕ್ಷೇಶ್ವರ ದೇವಾಲಯದಲ್ಲಿ ಜಾತ್ರೆ ವಾತಾವರಣ ನಿರ್ಮಾಣಗೊಂಡಿತ್ತು. ರಥಬೀದಿಯಲ್ಲಿ ಹಣ್ಣು, ಹೂ‍‍ವು, ಕಾಯಿ ಮಾರಾಟವೂ ಭರ್ಜರಿಯಾಗಿ ನಡೆಯಿತು. ದೇವಾಲಯದ ಆನೆ ಲಕ್ಷ್ಮೀಗೂ ಭಕ್ತರು ಬಾಳೆಹಣ್ಣು ತೀರಿಸಿ ಭಕ್ತಿ ಮೆರೆದರು. ಭಕ್ತರು ಬೆಳ್ಳಂಬೆಳಗ್ಗೆ ಆಗಮಿಸಿ ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು.

ದೇವಾಲಯಗಳಲ್ಲೂ ಪೂಜೆ: ವಿಜಯನಗರ ಜಿಲ್ಲೆಯ ಆರು ತಾಲೂಕುಗಳಲ್ಲೂ ಶಿವ ದೇವಾಲಯಗಳಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ನಗರದ ನೀಲಕಂಠೇಶ್ವರ, ಮಾರ್ಕಂಡೇಶ್ವರ, ಸಣ್ಣಕ್ಕಿ ವೀರಭದ್ರೇಶ್ವರ, ಈಶ್ವರ ದೇವಸ್ಥಾನ, ಮೃತ್ಯುಂಜಯಸ್ವಾಮಿ ದೇವಾಲಯ, ಜಂಬುನಾಥೇಶ್ವರ ದೇವಾಲಯ ಸೇರಿದಂತೆ ವಿವಿಧ ಶಿವ ದೇವಾಲಯಗಳಲ್ಲೂ ವಿಶೇಷ ಪೂಜೆ ಸಲ್ಲಿಸಲಾಯಿತು. ಶಿವನ ದೇವಾಲಯಗಳಲ್ಲಿ ಭಕ್ತರು ಸಾಲುಗಟ್ಟಿ ದೇವರ ದರ್ಶನ ಪಡೆದರು. ದೇವಾಲಯಗಳಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ನಗರದಲ್ಲಿ ಶಿವರಾತ್ರಿ ನಿಮಿತ್ತ ದೇವಾಲಯಗಳಲ್ಲಿ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಭಜನೆ ಕೂಡ ನಡೆಯಿತು.

PREV

Recommended Stories

2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...