ಓಎಂಸಿ 68.5 ಹೆಕ್ಟೇರ್ ಅಕ್ರಮ ಗಣಿಗಾರಿಕೆ: ಕ್ರಮ ಕೈಕೊಳ್ಳಲು ರಾಜ್ಯ ಸರ್ಕಾರಕ್ಕೆ ಕೇಂದ್ರ ಸರ್ಕಾರ ನಿರ್ದೇಶನ

KannadaprabhaNewsNetwork |  
Published : Jul 05, 2026, 02:00 AM IST
ಅ | Kannada Prabha

ಸಾರಾಂಶ

68.5 ಹೆಕ್ಟೇರ್‌ ಪ್ರದೇಶವು ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕು ತುಮಟಿ ಗ್ರಾಮದ ಸರ್ವೆ ಸಂಖ್ಯೆ 106ರಲ್ಲಿ ಅತಿಕ್ರಮಿಸಿದೆ

ಬಳ್ಳಾರಿ: ಕರ್ನಾಟಕ-ಆಂಧ್ರ ಗಡಿಯಲ್ಲಿ ಓಬಳಾಪುರಂ ಮೈನಿಂಗ್ ಕಂಪನಿಯು (ಓಎಂಸಿ) ಗಣಿಗಾರಿಕೆ ಲೀಸ್‌ನಲ್ಲಿ ನಡೆಸಿದೆ ಎನ್ನಲಾದ 68.5 ಹೆಕ್ಟೇರ್ ಅತಿಕ್ರಮಣಕ್ಕೆ ಸಂಬಂಧಿಸಿದಂತೆ ಪೂರಕ ಕ್ರಮ ಕೈಗೊಳ್ಳುವಂತೆ ಸೂಚಿಸಿ ಕೇಂದ್ರದ ಪರಿಸರ ಅರಣ್ಯ ಹಾಗೂ ಹವಾಮಾನ ಇಲಾಖೆ ಸಚಿವಾಲಯವು ಕರ್ನಾಟಕದ ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ನಿರ್ದೇಶನ ನೀಡಿದೆ.

ಗಣಿ ಉದ್ಯಮಿಗಳಾದ ಟಪಾಲ್ ಏಕಾಂಬರಂ, ಟಪಾಲ್ ಗಣೇಶ್ ನೀಡಿದ ದೂರಿನನ್ವಯ ಕೇಂದ್ರ ಪರಿಸರ ಇಲಾಖೆ ಸಚಿವಾಲಯ ಈ ನಿರ್ದೇಶನ ನೀಡಿದೆ.

ಆಂಧ್ರಪ್ರದೇಶದ ಸರ್ವೇ ಇಲಾಖೆಯು 2025ರ ಡಿಸೆಂಬರ್‌ 7ರಂದು ತಯಾರಿಸಿದ ಸೂಪರ್‌ ಇಂಪೋಸ್ಡ್ ಸ್ಕೆಚ್ ಪ್ರಕಾರ ಓಎಂಸಿ ಲೀಸ್ ಸಂಖ್ಯೆ 6ರ 68.5 ಹೆಕ್ಟೇರ್‌ ಪ್ರದೇಶವು ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕು ತುಮಟಿ ಗ್ರಾಮದ ಸರ್ವೆ ಸಂಖ್ಯೆ 106ರಲ್ಲಿ ಅತಿಕ್ರಮಿಸಿದೆ. ಈ ಪ್ರದೇಶವು ಕರ್ನಾಟಕ ಅರಣ್ಯ ಕಾಯ್ದೆ 1900 ಮತ್ತು ಅರಣ್ಯ (ಸಂರಕ್ಷಣಾ) ಕಾಯ್ದೆ 1980ರ ಅಡಿಯಲ್ಲಿ ಅಧಿಸೂಚಿತ ಮೀಸಲು ಅರಣ್ಯವಾಗಿದೆ. 2007ರ ಜೂನ್‌ 18ರಂದು ಅಧಿಸೂಚಿಸಲಾದ ಪ್ರದೇಶದ ಹೊರಗೆ ಲೀಸ್ ಮಂಜೂರು ಮಾಡಲಾಗಿದೆ. ಎಚ್. ಸಿದ್ದಾಪುರಂ, ಮಲಪನಗುಡಿಯ ಸ.ನಂ.1ರಲ್ಲಿನ ಭೂಮಿಯನ್ನು ಅಧಿಕಾರವಿಲ್ಲದೇ ಸೇರಿಸಲಾಗಿದೆ. ಇದರಿಂದಾಗಿ ಕರ್ನಾಟಕ-ಆಂಧ್ರ ಅಂತರರಾಜ್ಯ ಗಡಿಯಲ್ಲಿ ವ್ಯತ್ಯಯವಾಗಿದೆ ಎಂದು ತಿಳಿಸಿದೆ.

ಕೇಂದ್ರ ಸರ್ಕಾರದ ಪೂರ್ವ ಅನುಮತಿಯಿಲ್ಲದೇ ಅರಣ್ಯ ಭೂಮಿಯನ್ನು ಬೇರೆ ಉದ್ದೇಶಕ್ಕೆ ಬಳಸಿದ್ದಕ್ಕಾಗಿ ಅರಣ್ಯ (ಸಂರಕ್ಷಣಾ) ಕಾಯ್ದೆ 1980ರ ಸೆಕ್ಷನ್ 2(ಐಐ)(ಬಿ) ಉಲ್ಲಂಘನೆಯಾಗಿದೆ. ಎಂಎಂಡಿಆರ್ ಕಾಯ್ದೆ 1957 ಮತ್ತು ಕರ್ನಾಟಕ ಸರ್ಕಾರದ ಅಧಿಸೂಚನೆ ಎಫ್ಎಫ್‌ಇ 47 ಎಫ್ ಜಿಎಲ್ 2009 ರ ಉಲ್ಲಂಘನೆಯೂ ಆಗಿದೆ ಎಂದು ಟಪಾಲ್ ಸಹೋದರರು ದೂರಿನಲ್ಲಿ ತಿಳಿಸಿದರಲ್ಲದೆ, ಕರ್ನಾಟಕದಲ್ಲಿನ ತುಮಟಿಯ 68.5 ಹೆಕ್ಟೇರ್‌ ಅತಿಕ್ರಮಣ ಪ್ರದೇಶದಿಂದ ಓಎಂಸಿಯನ್ನು ತಕ್ಷಣವೇ ತೆರವುಗೊಳಿಸಬೇಕು. 1896 ರ ಬಳ್ಳಾರಿ ಮೀಸಲು ಅರಣ್ಯ ನಕ್ಷೆ ಮತ್ತು 1990 ರ ಮಾರ್ಗಸೂಚಿಗಳ ಪ್ರಕಾರ ಗ್ರಾಮ ಗಡಿಗಳನ್ನು ಪುನಃಸ್ಥಾಪಿಸಬೇಕು. ಟಿ. ನಾರಾಯಣ ರೆಡ್ಡಿ ಅವರ ಎಂಎಲ್ ಸಂಖ್ಯೆ 2527ನ್ನು ಬಿ ಕೆಟಗರಿಯಿಂದ ಎ ಕೆಟಗರಿಗೆ ಮರು ವರ್ಗೀಕರಿಸಬೇಕು. ಅಕ್ರಮಗಳಿಗಾಗಿ ಓಎಂಸಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಬೇಡಿಕೆ ಇಟ್ಟಿದ್ದರು. ಈ ಪ್ರಕರಣವು ಕರ್ನಾಟಕ, ಆಂಧ್ರಪ್ರದೇಶದ ನಡುವಿನ ಅಂತರರಾಜ್ಯ ಗಡಿ ವಿವಾದಕ್ಕೆ ಸಂಬಂಧಿಸಿದ್ದಾಗಿದ್ದು, ಸದ್ಯ ಸರ್ವೋಚ್ಚ ನ್ಯಾಯಾಲಯದ ಮುಂದೆ ಬಾಕಿ ಇದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗದಗ ಜಿಲ್ಲೆಯ ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ವ್ಯಾಪಕ ಅಕ್ರಮ: ಬಸವರಾಜ ಬೊಮ್ಮಾಯಿ
ಮೂರು ಬೂತ್‌ಗಳಲ್ಲಿ ಎಚ್.ಕೆ. ಪಾಟೀಲ ಹೆಸರು: ಬಸವರಾಜ ಬೊಮ್ಮಾಯಿ ಆರೋಪ