ಕನ್ನಡಪ್ರಭ ವಾರ್ತೆ ಮಡಿಕೇರಿ
ಕನ್ನಡ ಜ್ಯೋತಿ ರಥಯಾತ್ರೆ ಬರಮಾಡಿಕೊಳ್ಳುವ ಸಂಬಂಧ ನಗರದ ಜಿಲ್ಲಾಧಿಕಾರಿ ಅವರ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕನ್ನಡ ಜ್ಯೋತಿ ಹೊತ್ತ ರಥಯಾತ್ರೆಯು ನ. 10 ರಂದು ಬೆಳಗ್ಗಿನ ವೇಳೆ ಸಂಪಾಜೆಗೆ ಆಗಮಿಸಲಿದ್ದು, ಎಲ್ಲರೂ ಸೇರಿ ಬರಮಾಡಿಕೊಳ್ಳಬೇಕಿದೆ. ನಂತರ ಕೊಡಗು ಜಿಲ್ಲಾ ಕೇಂದ್ರ ಮಡಿಕೇರಿಗೆ ಆಗಮಿಸಲಿದೆ. ನಂತರ ಪೊನ್ನಂಪೇಟೆಗೆ ತೆರಳಲಿದೆ. ಬಳಿಕ ನ. 11 ರಂದು ಪೊನ್ನಂಪೇಟೆಯಿಂದ ಪಾಲಿಬೆಟ್ಟ-ಸಿದ್ದಾಪುರ ಮಾರ್ಗ ಕುಶಾಲನಗರ ತಲುಪಿ, ಕನ್ನಡ ಕಂಠ ಗಾಯನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.ಬಳಿಕ ಸೋಮವಾರಪೇಟೆ ಮಾರ್ಗ ಮೂಲಕ ಹಾಸನಕ್ಕೆ ತೆರಳಲಿದ್ದು, ಈ ಸಂಬಂಧ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ, ಗ್ರಾಮ ಪಂಚಾಯಿತಿ ಸೇರಿದಂತೆ ಸ್ಥಳೀಯ ಸಂಸ್ಥೆಗಳು, ಕನ್ನಡ ಸಾಹಿತ್ಯ ಪರಿಷತ್ತು ಪದಾಧಿಕಾರಿಗಳು, ಸ್ತ್ರೀಶಕ್ತಿ ಗುಂಪುಗಳು, ಶಾಲಾ-ಕಾಲೇಜು ವಿದ್ಯಾರ್ಥಿಗಳು ಹೀಗೆ ಹಲವರು ಪಾಲ್ಗೊಂಡು ‘ಕನ್ನಡ ಜ್ಯೋತಿ ಹೊತ್ತ ರಥಯಾತ್ರೆ’ಯನ್ನು ಸ್ವಾಗತಿಸಬೇಕಿದೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಕೋರಿದರು.
ಇದೇ ನವೆಂಬರ್, 7 ಅಥವಾ 8 ರಂದು ಮತ್ತೊಂದು ವಿಡಿಯೋ ಸಂವಾದ ಮೂಲಕ ಪೂರ್ವ ಸಿದ್ಧತೆ ಬಗ್ಗೆ ಸಭೆ ನಡೆಸಲಾಗುವುದು. ತಮ್ಮ ತಮ್ಮ ಹಂತದಲ್ಲಿಯೂ ಸಹ ಅಗತ್ಯ ತಯಾರಿ ಬಗ್ಗೆ ಪೂರ್ವಭಾವಿ ಸಭೆ ನಡೆಸುವಂತೆ ಹೆಚ್ಚುವರಿ ಜಿಲ್ಲಾಧಿಕಾರಿ ಅವರು ಸಲಹೆ ಮಾಡಿದರು.
ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕದ ಅಧ್ಯಕ್ಷರಾದ ಎಂ.ಪಿ.ಕೇಶವ ಕಾಮತ್ ಅವರು ಮಾತನಾಡಿ ನವೆಂಬರ್, 10 ರಂದು ಬೆಳಗ್ಗಿನ ವೇಳೆ ಕನ್ನಡ ರಥವು ಸಂಪಾಜೆಗೆ ಆಗಮಿಸಲಿದೆ. ಅಲ್ಲಿ ಶಾಲಾ-ಕಾಲೇಜು ವಿದ್ಯಾರ್ಥಿಗಳು, ಸ್ಥಳೀಯ ಮಟ್ಟದ ಅಧಿಕಾರಿಗಳು ಬರಮಾಡಿಕೊಳ್ಳಬೇಕಿದೆ. ಅಂದು ಬೆಳಗ್ಗೆ 10.30 ಗಂಟೆಗೆ ಮಡಿಕೇರಿಗೆ ಆಗಮಿಸಲಿದ್ದು, ಪ್ರತಿಯೊಬ್ಬರೂ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸಲು ಸಹಕರಿಸುವಂತೆ ಕೋರಿದರು.
ನ. 11 ರಂದು ಕುಶಾಲನಗರದಲ್ಲಿ 5 ಸಹಸ್ರ ಜನರು ಕನ್ನಡ ಕಂಠ ಗಾಯನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ನಾಡಗೀತೆ ಸೇರಿದಂತೆ ವಿವಿಧ ಕನ್ನಡ ಗೀತೆಗಳನ್ನು ಹಾಡಲಾಗುತ್ತದೆ ಎಂದು ತಿಳಿಸಿದರು. ಆ ನಿಟ್ಟಿನಲ್ಲಿ ಎಲ್ಲಾ ಹಂತದ ಅಧಿಕಾರಿಗಳು, ಸಿಬ್ಬಂದಿ, ಶಾಲಾ-ಕಾಲೇಜು ವಿದ್ಯಾರ್ಥಿಗಳು, ಮಹಿಳಾ ಸಂಘಟನೆಗಳು ಪಾಲ್ಗೊಳ್ಳುವಂತೆ ಕಸಾಪ ಅಧ್ಯಕ್ಷರು ಮನವಿ ಮಾಡಿದರು.
‘ರಾಜ್ಯದ ಗಡಿಭಾಗದ ಜಿಲ್ಲೆಯಾದ ಕೊಡಗಿನಲ್ಲಿ ಕನ್ನಡಮಯ ವಾತಾವರಣ ನಿರ್ಮಾಣ ಮಾಡಬೇಕು. ಒಳ್ಳೆಯ ಹೆಸರು ತರುವಂತಾಗಬೇಕು ಎಂದು ಟಿ.ಪಿ.ರಮೇಶ್ ಅವರು ಕೋರಿದರು.’
ವಿವಿಧ ಅಕಾಡೆಮಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜನೆಗೆ ಅಗತ್ಯ ಸಹಕಾರಕ್ಕೆ ಇದೇ ಸಂದರ್ಭದಲ್ಲಿ ಮನವಿ ಮಾಡಿದರು.
ಕಸಾಪ ಪದಾಧಿಕಾರಿಗಳಾದ ಕೆ.ಟಿ.ಬೇಬಿ ಮ್ಯಾಥ್ಯೂ, ಪರಮೇಶ, ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಘಟಕದ ಅಧ್ಯಕ್ಷರಾದ ಕಡ್ಲೇರ ತುಳಸಿ ಮೋಹನ್(ಮಡಿಕೇರಿ), ರಾಜೇಶ್ ಪದ್ಮನಾಭ(ವಿರಾಜಪೇಟೆ), ಕೆ.ಎಸ್.ನಾಗೇಶ್(ಕುಶಾಲನಗರ), ವಿವಿಧ ಹೋಬಳಿ ಘಟಕದ ಅಧ್ಯಕ್ಷರಾದ ಹರಿಣಿ ವಿಜಯ(ಮೂರ್ನಾಡು), ಸುನಿಲ್ ಪತ್ರಾವೋ(ಭಾಗಮಂಡಲ), ಡಿವೈಎಸ್‌ಪಿ ಮಹೇಶ್ ಕುಮಾರ್, ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕರಾದ ಸಿ.ರಂಗಧಾಮಪ್ಪ, ತಹಸೀಲ್ದಾರರಾದ ಪ್ರವೀಣ್ ಕುಮಾರ್, ರಾಮಚಂದ್ರ, ಮೋಹನ್ ಕುಮಾರ್, ಶ್ರೀಧರ, ತಾ.ಪಂ.ಇಒಗಳಾದ ಶೇಖರ್, ಅಪ್ಪಣ್ಣ, ಕೃಷಿ ಇಲಾಖೆ ಜಂಟಿ ನಿರ್ದೇಶಕರಾದ ಚಂದ್ರಶೇಖರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕರಾದ ನಟರಾಜ, ಕ್ಷೇತ್ರ ಶಿಕ್ಷಣಾಧಿಕಾರಿ ದೊಡ್ಡೇಗೌಡ, ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ವಿಜಯ್ ಅವರು ಹಲವು ಮಾಹಿತಿ ನೀಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರಾದ ಕುಮಾರ, ಮಣಜೂರು ಮಂಜುನಾಥ್ ಇದ್ದರು.