ಕನ್ನಡಪ್ರಭ ವಾರ್ತೆ ಮಡಿಕೇರಿ
ಜಿಲ್ಲಾ ಕೇಂದ್ರ ಮಡಿಕೇರಿ ನಗರದ ಸುದರ್ಶನ ವೃತ್ತದ ಬಳಿಯ ಡಾ.ಬಿ.ಆರ್.ಅಂಬೇಡ್ಕರ್ ಭವನವನ್ನು ಪಟ್ಟಭದ್ರ ಹಿತಾಸಕ್ತಿಗಳಿಂದ ಮುಕ್ತಗೊಳಿಸಿ, ದಲಿತ ಸಮುದಾಯದ ಬಳಕೆಗೆ ಅನುವು ಮಾಡಿಕೊಡಬೇಕೆಂದು ಆಗ್ರಹಿಸಿ ‘ಅಂಬೇಡ್ಕರ್ ಭವನ ಉಳಿಸಿ ಹೋರಾಟ ಸಮಿತಿ’ಯಿಂದ ಫೆ.10 ರಂದು ಅಂಬೇಡ್ಕರ್ ಭವನದ ಎದುರು ಧರಣಿ ನಡೆಸುವುದಾಗಿ ಸಮಿತಿ ಅಧ್ಯಕ್ಷ ಎಚ್. ಎಲ್. ದಿವಾಕರ್ ತಿಳಿಸಿದ್ದಾರೆ.ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಜಿಲ್ಲಾ ವ್ಯಾಪ್ತಿಯ ದಲಿತ ಸಂಘಟನೆ, ಸಾರ್ವಜನಿಕರ ಸಹಕಾರ ಮತ್ತು ಸರ್ಕಾರದ ನೆರವಿನಿಂದ ನಿರ್ಮಿಸಲ್ಪಟ್ಟ ಡಾ.ಬಿ.ಆರ್.ಅಂಬೇಡ್ಕರ್ ಭವನ ಇತ್ತೀಚಿನ ದಿನಗಳಲ್ಲಿ ಕೆಲವೇ ಕೆಲವು ವ್ಯಕ್ತಿಗಳ ಹಿಡಿತದಲ್ಲಿದೆ.
ಇದರಿಂದ ದಲಿತ ಪರವಾದ ಕಾರ್ಯಕ್ರಮಗಳನ್ನು ಭವನದಲ್ಲಿ ಮುಕ್ತವಾಗಿ ನಡೆಸಲು ಅವಕಾಶಗಳು ದೊರಕುತ್ತಿಲ್ಲವೆಂದು ಬೇಸರ ವ್ಯಕ್ತಪಡಿಸಿದರು.ಡಾ.ಬಿ.ಆರ್.ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಜಿಲ್ಲೆಯ ವಿವಿಧೆಡೆಗಳಲ್ಲಿನ ದಲಿತ ಸಂಘಟನೆಗಳು, ಸಾರ್ವಜನಿಕರು ಅಂದಿನ ದಿನಗಳಲ್ಲಿ ತಮ್ಮ ನೆರವನ್ನು ನೀಡಿದ್ದಾರೆ. ಇಂತಹ ವಿಚಾರವನ್ನು ಪ್ರಸ್ತಾಪಿಸಿದ ನನ್ನ ಮೇಲೆ ಅಂಬೇಡ್ಕರ್ ಭವನ ಸಮಿತಿಯ ಕೆಲವರು ವೈಯಕ್ತಿಕ ಆರೋಪಗಳನ್ನು ಮಾಡಿದ್ದಾರೆ. ಇದು ಸತ್ಯಕ್ಕೆ ದೂರವಾದ ಹೇಳಿಕೆಗಳಾಗಿವೆ ಎಂದು ಸ್ಪಷ್ಟಪಡಿಸಿದರು.
ತಾನೊಬ್ಬ ಬ್ಯಾಂಕ್ ಉದ್ಯೋಗಿಯಾಗಿ ಸೇವೆ ಸಲ್ಲಿಸಿದ್ದೇನೆ ಹಾಗೂ ದಲಿತ ಸಂಘರ್ಷ ಸಮಿತಿಯಲ್ಲಿ ಸಾಮಾನ್ಯ ಕಾರ್ಯಕರ್ತನಾಗಿ ಕಾರ್ಯನಿರ್ವಹಿಸಿಕೊಂಡು ಬಂದಿದ್ದೇನೆ.ಈ ಹಿಂದೆ ತಾನು ಆರ್ಥಿಕವಾಗಿ ಹೇಗಿದ್ದೆ ಅದೇ ರೀತಿಯಲ್ಲಿ ಇಂದು ಕೂಡ ಇದ್ದೇನೆ. ನನ್ನ ವಿರುದ್ಧ ದುರುಪಯೋಗ
ಮೊದಲಾದ ಆರೋಪಗಳನ್ನು ಮಾಡಿರುವುದು ಖಂಡನೀಯ. ಪರಿಶಿಷ್ಟ ವಿದ್ಯಾರ್ಥಿಗಳ ಉತ್ತೇಜನಕ್ಕಾಗಿ ಮತ್ತು ಶಿಕ್ಷಕರಿಗೆ ಗೌರವಾರ್ಪಣೆ ಸಲ್ಲಿಸುವುದಕ್ಕಾಗಿ ನನ್ನ ನೇತೃತ್ವದಲ್ಲಿ ದಲಿತ ಸಂಘರ್ಷ ಸಮಿತಿ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದೆ. ಇದರಿಂದ ಕೊಡಗು ಶಿಕ್ಷಣ ಕ್ಷೇತ್ರದಲ್ಲಿ ಉನ್ನತ ಸ್ಥಾನಕ್ಕೇರಲು ಸಹಕಾರಿಯಾಗಿರುವುದನ್ನು ನನ್ನ ವಿರುದ್ಧ ಆರೋಪ ಮಾಡುವವರು ಅರಿತುಕೊಳ್ಳಲಿ ಎಂದರು.ಸಮಿತಿಯ ಪ್ರಧಾನ ಕಾರ್ಯದರ್ಶಿ ಟಿ.ಎನ್.ಗೋವಿಂದಪ್ಪ ಮಾತನಾಡಿ, ಡಾ.ಬಿ.ಆರ್.ಅಂಬೇಡ್ಕರ್ ಭವನ ನಮ್ಮ ಸಮುದಾಯದ ಅನುಕೂಲತೆಗಾಗಿ ಬಳಕೆ ಮಾಡಲು ಮುಕ್ತ ಅವಕಾಶ ದೊರಕಬೇಕು ಎನ್ನುವುದಷ್ಟೆ ನಮ್ಮ ಪ್ರಮುಖ ಉದ್ದೇಶ. ಈಗ ಭವನದ ಉಸ್ತುವಾರಿ ಹೊತ್ತವರು ಇದಕ್ಕೆ ಅನುಮತಿ ನೀಡಲಿ ಮತ್ತು ಭವನವನ್ನು ಮತ್ತಷ್ಟು ಅಭಿವೃದ್ಧಿ ಪಡಿಸಲಿ. ಇದಕ್ಕೆ ನಮ್ಮ ಅಭ್ಯಂತರವೇನೂ ಇಲ್ಲವೆಂದು ತಿಳಿಸಿದರು.
ಅಂಬೇಡ್ಕರ್ ಭವನ ಉಳಿಸಿ ಹೋರಾಟ ಸಮಿತಿಯಲ್ಲಿ ಜಿಲ್ಲಾ ವ್ಯಾಪ್ತಿಯ ದಲಿತ ಪರ, ಪ್ರಗತಿಪರವಾದ ಸುಮಾರು 37 ಸಂಘಟನೆಗಳು ಇರುವುದಾಗಿ ತಿಳಿಸಿದ ಗೋವಿಂದಪ್ಪ, ಫೆ.10 ರಂದು ಬೆಳಗ್ಗೆ 10.30 ಗಂಟೆಗೆ ಭವನದ ಎದುರು ಧರಣಿ ನಡೆಸಲಿದ್ದೇವೆ ಎಂದ ಅವರು, ಜಿಲ್ಲಾಧಿಕಾರಿಗಳು ಮಧ್ಯಸ್ಥಿಕೆ ವಹಿಸಿ ಸಮಸ್ಯೆಯನ್ನು ಬಗೆಹರಿಸಬೇಕೆಂದು ಮನವಿ ಮಾಡಿದರು.ಉಪಾಧ್ಯಕ್ಷ ಡಿ.ಜೆ.ಈರಪ್ಪ, ಖಜಾಂಚಿ ಎಚ್.ಈ.ದೇವರಾಜು, ನಿರ್ದೇಶಕರಾದ ಎಚ್.ಎಲ್.ಕುಮಾರ್ ಹಾಗೂ ಎ.ಪಿ.ದೀಪಕ್ ಸುದ್ದಿಗೋಷ್ಠಿಯಲ್ಲಿದ್ದರು.