ಕನ್ನಡಪ್ರಭ ವಾರ್ತೆ ಪುತ್ತೂರು
ಒಡಿಯೂರು ಶ್ರೀ ಗುರುದೇವ ಸೇವಾ ಬಳಗ ಪುತ್ತೂರು ಘಟಕದ ವತಿಯಿಂದ ೧೭ನೇ ವರ್ಷದ ವಾರ್ಷಿಕೋತ್ಸವ ಪ್ರಯುಕ್ತ ಲೋಕ ಕಲ್ಯಾಣಾರ್ಥವಾಗಿ ಚಂದ್ರಶೇಖರ ಉಪಾಧ್ಯಾಯರ ಪೌರೋಹಿತ್ಯದಲ್ಲಿ ಶ್ರೀ ರಾಮನಾಮ ತಾರಕ ಹವನ ಪೂರ್ವಕ ‘ಶ್ರೀ ಹನುಮಯಾಗ’ ಕಾರ್ಯವು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮುಂಭಾಗದಲ್ಲಿರುವ ನಟರಾಜ ವೇದಿಕೆಯಲ್ಲಿ ನಡೆಯಲಿದೆ ಎಂದು ಒಡಿಯೂರು ತುಳುನಾಡ ಜಾತ್ರೆ ಹೊರೆ ಕಾಣಿಕೆ ಸಮಿತಿ ಕಾರ್ಯಾಧ್ಯಕ್ಷ ಜಗದೀಶ್ ಶೆಟ್ಟಿ ನೆಲ್ಲಿಕಟ್ಟೆ ತಿಳಿಸಿದ್ದಾರೆ.ಅವರು ಸೋಮವಾರ ಪುತ್ತೂರು ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಶ್ರೀ ಹನುಮಯಾಗದ ಅಂಗವಾಗಿ ನ.೧೫ರಂದು ಬೆಳಗ್ಗೆ ೬.೩೦ಕ್ಕೆ ಗಣಪತಿ ಹವನ, ೭.೩೦ಕ್ಕೆ ಹನುಮಯಾಗದ ಸಂಕಲ್ಪ, ೮.೩೦ ರಿಂದ ಭಜನಾ ಕಾರ್ಯಕ್ರಮ ಹಾಗೂ ೧೦.೩೦ ಕ್ಕೆ ಯಾಗದ ಪೂರ್ಣಾಹುತಿ ನಡೆಯಲಿದೆ.ಬೆಳಗ್ಗೆ ೧೧.೩೦ರಿಂದ ಸಭಾ ಕಾರ್ಯಕ್ರಮ ನಡೆಯಲಿದ್ದು, ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಅನುಗ್ರಹ ಸಂದೇಶ ನೀಡಲಿದ್ದಾರೆ. ಶ್ರೀ ಮಾತಾನಂದಮಯಿ ದಿವ್ಯ ಉಪಸ್ಥಿತರಿರುತ್ತಾರೆ. ಮುಖ್ಯ ಅತಿಥಿಗಳಾಗಿ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ, ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು, ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತಾಧಿಕಾರಿ ನವೀನ್ ಕುಮಾರ್ ಭಂಡಾರಿ, ಯುವ ಉದ್ಯಮಿ ಉಜ್ವಲ್ ಪ್ರಭು, ಸವಣೂರು ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಸವಣೂರು ಸೀತಾರಾಮ ರೈ, ಒಡಿಯೂರು ತುಳುನಾಡ ಜಾತ್ರೆ ಹೊರೆಕಾಣಿಕೆ ಸಮಿತಿ ಕಾರ್ಯಾಧ್ಯಕ್ಷ ಜಗದೀಶ್ ಶೆಟ್ಟಿ ನೆಲ್ಲಿಕಟ್ಟೆ, ಒಡಿಯೂರು ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಸುರೇಶ್ ರೈ, ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಮಾತೇಶ್ ಭಂಡಾರಿ ಪಾಲ್ಗೊಳ್ಳಲಿದ್ದಾರೆ.ಈ ಸಂದರ್ಭದಲ್ಲಿ ಪುತ್ತೂರು ಪುರಸಭೆ ಮಾಜಿ ಅಧ್ಯಕ್ಷ ರಾಜೇಶ್ ಬನ್ನೂರು, ಸಮನ್ವಿ ರೈ (ಸಂಗೀತ) ಹಾಗೂ ಸಮೃದ್ಧಿ ಜೆ. ಶೆಟ್ಟಿ (ಕ್ರೀಡೆ) ಅವರನ್ನು ಸನ್ಮಾನಿಸಿ ಗೌರವಿಸಲಾಗುವುದು. ಮದ್ಯಾಹ್ನ ಬೊಳುವಾರು ಶ್ರೀ ಆಂಜನೇಯ ಮಹಿಳಾ ಯಕ್ಷಗಾನ ಸಂಘದವರಿಂದ ತಾಳಮದ್ದಳೆ ಜರುಗಲಿದೆ ಎಂದು ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಒಡಿಯೂರು ಶ್ರೀ ಗುರುದೇವ ಸೇವಾ ಬಳಗ ಪುತ್ತೂರು ಘಟಕದ ಅಧ್ಯಕ್ಷ ಸುಧೀರ್ ನೋಂಡ, ಕಾರ್ಯದರ್ಶಿ ಹರೀಣಾಕ್ಷಿ ಜೆ ಶೆಟ್ಟಿ, ಸದಸ್ಯ ವಿಶ್ವನಾಥ ಶೆಟ್ಟಿ, ಶ್ರೀ ವಜ್ರಮಾತಾ ಮಹಿಳಾ ವಿಕಾಸ ಕೇಂದ್ರದ ಅಧ್ಯಕ್ಷೆ ನಯನ ರೈ ಉಪಸ್ಥಿತರಿದ್ದರು.