17ರಂದು ರಾತ್ರಿ ಶ್ರೀ ಕ್ಷೇತ್ರ ತಲಕಾವೇರಿಯಲ್ಲಿ ಪವಿತ್ರ ತೀರ್ಥೋದ್ಭವ

KannadaprabhaNewsNetwork | Published : Oct 17, 2023 12:45 AM

ಸಾರಾಂಶ

ತಲಕಾವೇರಿಯ ಪವಿತ್ರ ಕುಂಡಿಕೆಯಲ್ಲಿ ಅಕ್ಟೋಬರ್, 17 ರಂದು ರಾತ್ರಿ 1 ಗಂಟೆ 27 ನಿಮಿಷಕ್ಕೆ ಸಲ್ಲುವ ಕರ್ಕಾಟಕ ಲಗ್ನದಲ್ಲಿ ಶ್ರೀ ಮೂಲ ಕಾವೇರಿ ತುಲಾ ಸಂಕ್ರಮಣ ಪವಿತ್ರ ತೀರ್ಥೋದ್ಭವದ ಪುಣ್ಯ ಕಾಲ ನೆರವೇರಲಿದೆ.
ಕನ್ನಡಪ್ರಭ ವಾರ್ತೆ ಮಡಿಕೇರಿ ದಕ್ಷಿಣ ಭಾರತದ ಪುಣ್ಯ ಕ್ಷೇತ್ರ, ಕನ್ನಡ ನಾಡಿನ ಜೀವ ನದಿ ಕಾವೇರಿಯ ತವರು ತಲಕಾವೇರಿಯ ಪವಿತ್ರ ಕುಂಡಿಕೆಯಲ್ಲಿ ಅಕ್ಟೋಬರ್, 17 ರಂದು ರಾತ್ರಿ 1 ಗಂಟೆ 27 ನಿಮಿಷಕ್ಕೆ ಸಲ್ಲುವ ಕರ್ಕಾಟಕ ಲಗ್ನದಲ್ಲಿ ಶ್ರೀ ಮೂಲ ಕಾವೇರಿ ತುಲಾ ಸಂಕ್ರಮಣ ಪವಿತ್ರ ತೀರ್ಥೋದ್ಭವದ ಪುಣ್ಯ ಕಾಲ ನೆರವೇರಲಿದೆ. ತೀರ್ಥೋದ್ಭವದ ಹಿನ್ನೆಲೆಯಲ್ಲಿ ಒಂದು ತಿಂಗಳ ಕಾಲ ತಲಕಾವೇರಿಯಲ್ಲಿ ಜಾತ್ರೆ ನಡೆಯಲಿದ್ದು, ಮೈಸೂರು, ಮಂಡ್ಯ ಸೇರಿದಂತೆ ಹೊರ ರಾಜ್ಯ ಕೇರಳ, ತಮಿಳುನಾಡಿನಿಂದ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ನಿರೀಕ್ಷೆಯಿದೆ. ಭಕ್ತರಿಗೆ ಕೊಡಗು ಏಕೀಕರಣ ರಂಗದಿಂದ ಒಂದು ತಿಂಗಳ ಕಾಲ ಅನ್ನ ಸಂತರ್ಪಣೆ ವ್ಯವಸ್ಥೆ ಇರಲಿದೆ. ಭಾಗಮಂಡಲದ ಶ್ರೀ ಭಗಂಡೇಶ್ವರ ದೇವಾಲಯ ಹಾಗೂ ತಲಕಾವೇರಿ ಕ್ಷೇತ್ರದಲ್ಲಿ ವಿಶೇಷ ಪೂಜೆ ನೆರವೇರಲಿದೆ. ಭಾಗಮಂಡಲದ ತ್ರಿವೇಣಿ ಸಂಗಮದಲ್ಲಿ ಹಿರಿಯರಿಗೆ ಪಿಂಡಪ್ರದಾನ ಮಾಡುವುದರೊಂದಿಗೆ ಭಕ್ತಾಧಿಗಳು ಪಣ್ಯ ಸ್ನಾನ ಮಾಡಲಿದ್ದಾರೆ. ತೀರ್ಥೋದ್ಭವದ ಹಿನ್ನೆಲೆಯಲ್ಲಿ ಭಕ್ತರ ಸಂಖ್ಯೆ ಹೆಚ್ಚಾಗಿ ಆಗಮಿಸುವ ಹಿನ್ನೆಲೆಯಲ್ಲಿ ಪೊಲೀಸರಿಂದ ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. ತಲಕಾವೇರಿ ಪವಿತ್ರ ಕುಂಡಿಕೆ ಬಳಿಯ ಕಲ್ಯಾಣಿಗೆ ಭಕ್ತರಿಂದ ನೂಕು ನುಗ್ಗಲು ಉಂಟಾಗದಂತೆ ಬ್ಯಾಡಿಕೇಡ್ ಹಾಕಲಾಗಿದೆ. ತೀರ್ಥೋದ್ಭವದ ವೀಕ್ಷಿಸಲು ಎಲ್‌ಇಡಿ ಪರದೆಯ ವ್ಯವಸ್ಥೆ ಮಾಡಲಾಗಿದೆ. ತೀರ್ಥ ವಿತರಣೆ ಪವಿತ್ರ ತೀರ್ಥೋದ್ಭವದ ನಂತರ ತೀರ್ಥವನ್ನು ಭಕ್ತರಿಗೆ ವಿತರಿಸಲು ವ್ಯವಸ್ಥೆ ಮಾಡಲಾಗಿದೆ. ಇದಕ್ಕೆ ಸ್ವಯಂ ಸೇವಕರನ್ನು ಕೂಡ ನಿಯೋಜಿಸಲಾಗಿದೆ. ಅಲ್ಲದೆ ಜಿಲ್ಲೆ ಸೇರಿದಂತೆ ರಾಜ್ಯದ ವಿವಿಧ ಕಡೆ ತೀರ್ಥವನ್ನು ವಿತರಿಸಲು ವಿವಿಧ ಸಂಘ ಸಂಸ್ಥೆಗಳು ಸಜ್ಜುಗೊಂಡಿದೆ. ತೀರ್ಥೊದ್ಭವ ಹಿನ್ನೆಲೆಯಲ್ಲಿ ಭಾಗಮಂಡಲದಿಂದ-ತಲಕಾವೇರಿ, ತಲಕಾವೇರಿಯಿಂದ ಭಾಗಮಂಡಲಕ್ಕೆ 20 ಬಸ್‌ಗಳು ಸಂಚರಿಸಲಿವೆ. ಹಾಗೆಯೇ ಜನದಟ್ಟಣೆ ಅನುಗುಣವಾಗಿ ಮಡಿಕೇರಿ-ಭಾಗಮಂಡಲ, ಭಾಗಮಂಡಲದಿಂದ-ಮಡಿಕೇರಿ ಮಾರ್ಗ ಬಸ್‌ಗಳು ಸಂಚರಿಸಲಿವೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರ ನೇತೃತ್ವದಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ, 2 ಡಿವೈಎಸ್‌ಪಿ, 9 ಪೊಲೀಸ್ ಇನ್ಸ್ಪೆಕ್ಟರ್, 15 ಸಬ್ ಇನ್ಸ್ಪೆಕ್ಟರ್‌ಗಳು, 30 ಮಂದಿ ಸಹಾಯಕ ಸಬ್ ಇನ್ಸ್ಪೆಕ್ಟರ್‌ಗಳು, 350 ಹೆಡ್‌ಕಾನ್ಸಟೇಬಲ್, ಅಗತ್ಯ ಪೊಲೀಸರು, ಜೊತೆಗೆ ಗೃಹ ರಕ್ಷಕದಳದವರು ಕರ್ತವ್ಯ ನಿರ್ವಹಿಸಲಿದ್ದಾರೆ. ತೀರ್ಥೋದ್ಭವ ಹಿನ್ನೆಲೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಸಾಂಸ್ಕೃತಿಕ ಗೀತಾ ಗಾಯನ ಕಾರ್ಯಕ್ರಮ ನಡೆಯಲಿದೆ. ಕುಡಿಯುವ ನೀರು, ಶೌಚಾಲಯ ವ್ಯವಸ್ಥೆ, ಭಾಗಮಂಡಲದಿಂದ ತಲಕಾವೇರಿ ವರೆಗೆ ವಿದ್ಯುತ್ ದೀಪ ವ್ಯವಸ್ಥೆ ಮಾಡಲಾಗಿದೆ.

Share this article