ಕನ್ನಡಪ್ರಭ ವಾರ್ತೆ ಮೈಸೂರು
ನಗರದ ತಳುಕಿನ ವೆಂಕಣ್ಣಯ್ಯ ಸ್ಮಾರಕ ಗ್ರಂಥಮಾಲೆ, ಕನ್ನಡ ಸಾಹಿತ್ಯ ಕಲಾಕೂಟ, ಹೊಯ್ಸಳ ಕನ್ನಡ ಸಂಘದ ವತಿಯಿಂದ ಪ್ರಕಾಶಕ ಟಿ.ಎಸ್. ಛಾಯಾಪತಿ ಸಂಸ್ಕೃತಿ ಪುರಸ್ಕಾರ- 2024 ಹಾಗೂ ಪುಸ್ತಕಗಳ ಲೋಕಾರ್ಪಣಾ ಸಮಾರಂಭವು ಮೇ 19 ರಂದು ಬೆಳಗ್ಗೆ 10.30ಕ್ಕೆ ಎಂಜಿನಿಯರ್ ಸಂಸ್ಥೆಯಲ್ಲಿ ನಡೆಯಲಿದೆ.ರಾಜಶೇಖರ್ ಮೆಡಿಕಲ್ ಫೌಂಡೇಷನ್‌ನ ನಿರ್ದೇಶಕ ಡಾ.ಎಚ್.ಬಿ.ರಾಜಶೇಖರ್ ಅಧ್ಯಕ್ಷತೆ ವಹಿಸಿ, ಪ್ರಶಸ್ತಿ ಪ್ರದಾನ ಮಾಡುವರು. ವಾಗ್ಮಿ ಪ್ರೊ.ಎಂ. ಕೃಷ್ಣೇಗೌಡ ಕೃತಿಗಳನ್ನು ಲೋಕಾರ್ಪಣೆಗೊಳಿಸುವರು. ಸಂಸ್ಕೃತ ವಿವಿಯ ವಿಶ್ರಾಂತ ಕುಲಪತಿ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ್ ಪ್ರಶಸ್ತಿ ಸ್ವೀಕರಿಸುವರು. ಜೆಎಸ್ಎಸ್ ಮಹಾವಿದ್ಯಾಪೀಠದ ಪ್ರಕಟಣ ವಿಭಾಗದ ನಿರ್ದೇಶಕ ಪ್ರೊ. ಮೊರಬದ ಮಲ್ಲಿಕಾರ್ಜುನ ಪುಸ್ತಕಗಳ ಕುರಿತು ಮಾತನಾಡುವರು.
ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಮಾನಸ ಮುಖ್ಯ ಅತಿಥಿಯಾಗಿ ಆಗಮಿಸಲಿದ್ದು, ಕನ್ನಡ ಸಾಹಿತ್ಯ ಕಲಾಕೂಟದ ಅಧ್ಯಕ್ಷ ಎಂ. ಚಂದ್ರಶೇಖರ್ ಪ್ರಾಸ್ತಾವಿಕ ನುಡಿಗಳನ್ನಾಡುವರು. ಪ್ರಕಾಶಕಿ ಪ್ರತಿಭಾ ಛಾಯಾಪತಿ, ಹೊಯ್ಸಳ ಕನ್ನಡ ಸಂಘದ ಕಾರ್ಯದರ್ಶಿ ರಂಗನಾಥ್ ಮೈಸೂರು ಪಾಲ್ಗೊಳ್ಳುವರು.ಕಾರ್ಯಕ್ರಮದಲ್ಲಿ ತ.ಸು.ಶಾಮರಾಯರ ಮೂರು ತಲೆಮಾರು, ಡಾ.ನೀಲಗಿರಿ ತಳವಾರರ ನೂರಾರು ನುಡಿಗಟ್ಟುಗಳು, ಟಿ.ಎಸ್. ಲಕ್ಷ್ಮೀದೇವಿ ಅವರ ಸೃಜನಶೀಲರು, ದಿಲೀಪ್ಕುಮಾರ್ಅವರ ಶಬ್ದ ಸೋಪಾನ ಕೃತಿಗಳು ಲೋಕಾರ್ಪಣೆಗೊಳ್ಳಲಿವೆ.ಡಾ.ಪ್ರೀತಿ ಶುಭಚಂದ್ರಗೆ ಚಾವುಂಡರಾಯ ಪ್ರಶಸ್ತಿಮೈಸೂರು:
ನಗರದ ಹಿರಿಯ ಲೇಖಕಿ ಡಾ. ಪ್ರೀತಿ ಶುಭಚಂದ್ರ ಅವರು ಕನ್ನಡ ಸಾಹಿತ್ಯ ಪರಿಷತ್ತು ನೀಡುವ 2023ನೇ ಸಾಲಿನ ಚಾವುಂಡರಾಯ ಪ್ರಶಸ್ತಿಕ್ಕೆ ಭಾಜನರಾಗಿದ್ದಾರೆ.ಪರಿಷತ್ತಿನ ಅಧ್ಯಕ್ಷ ಡಾ. ಮಹೇಶ ಜೋಶಿ ನೇತೃತ್ವದಲ್ಲಿ ಈಚೆಗೆ ಬೆಂಗಳೂರಿನಲ್ಲಿ ನಡೆದ ಸಭೆಯಲ್ಲಿ ಡಾ. ಪ್ರೀತಿ ಶುಭಚಂದ್ರ ಅವರನ್ನು ಆಯ್ಕೆಗೊಳಿಸಲಾಯಿತು.ಶ್ರವಣಬೆಳಗೊಳದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಅವರು ಪರಿಷತ್ತಿನಲ್ಲಿ ಈ ದತ್ತಿ ಸ್ಥಾಪಿಸಿದ್ದು, ಪ್ರಾಚೀನ ಜೈನ ಸಾಹಿತ್ಯ ಆಧರಿಸಿ ಆಧುನಿಕ ಕನ್ನಡ ಭಾಷೆಯಲ್ಲಿ ರಚಿಸಿದ ಪ್ರಬಂಧ, ಸಂಶೋಧನೆ, ವಿಮರ್ಶೆ, ಕಾದಂಬರಿ, ನಾಟಕ, ಕಥಾಸಾಹಿತ್ಯ ಪ್ರಕಾರಗಳ ಲೇಖಕರಿಗೆ, ಗ್ರಂಥ ಸಂಪಾದಕರಿಗೆ ಇಲ್ಲವೆ ಕನ್ನಡ ಸಾಹಿತ್ಯಕ್ಕೆ ವಿಶೇಷವಾಗಿ ಬಹು ಆಯಾಮದ ಕೊಡುಗೆಯನ್ನಿತ್ತ ಹಿರಿಯ ಸಾಹಿತಿಯನ್ನು ಈ ಪ್ರಶಸ್ತಿಗೆ ಪರಿಗಣಿಸಲಾಗುವುದು.
ಡಾ.ಪ್ರೀತಿ ಶುಭಚಂದ್ರ ಅವರು 40ಕ್ಕೂ ಅಧಿಕ ಜೈನ ಸಾಹಿತ್ಯಕ್ಕೆ ಸಂಬಂಧಿಸಿದ ಸಂಶೋಧನಲೇಖನಗಳನ್ನು ಹಾಗೂ ಹಲವಾರು ಕೃತಿಗಳನ್ನು ರಚಿಸಿದ್ದಾರೆ.ಅವರು ಮೈಸೂರು ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ಸಂಸ್ಥೆಯ ಪ್ರಾಧ್ಯಾಪಕರಾಗಿ, ಮೊದಲ ಮಹಿಳಾ ನಿರ್ದೇಶಕಿಯಾಗಿ ಹಾಗೂ ಮಹಿಳಾ ಅಧ್ಯಯನ ಕೇಂದ್ರದ ಗೌರವ ನಿರ್ದೇಶಕಿಯಾಗಿ ಕಾರ್ಯ ನಿರ್ವಹಿಸಿದ್ದಾರೆ.