23, 24ರಂದು ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ

KannadaprabhaNewsNetwork | Published : Mar 20, 2024 1:18 AM

ಸಾರಾಂಶ

ಹೆಚ್ಚಿನ ವಿದ್ಯಾರ್ಥಿಗಳನ್ನು ಕನ್ನಡದ ಸಂಭ್ರಮಕ್ಕೆ ಸೇರಿಕೊಳ್ಳಲಾಗಿದೆ. ಹೆಚ್ಚಿನ ಸಾಂಸ್ಕೃತಿಕ ಪ್ರಸ್ತುತಿಯಲ್ಲಿ ವಿದ್ಯಾರ್ಥಿಗಳು ಇರುವಂತೆ ಆಯೋಜನೆ ಮಾಡಲಾಗಿದೆ.

ಕನ್ನಡಪ್ರಭ ವಾರ್ತೆ ಮಂಗಳೂರು

ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಸಮ್ಮೇಳನವು ಮಾರ್ಚ್ 23, 24ರಂದು ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ‘ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ’ ಘೋಷಣೆಯೊಂದಿಗೆ ನಡೆಯಲಿದೆ ಎಂದು ಕನ್ನಡ ಸಾಹಿತ್ಯ ಪರಿಷತ್‌ನ ದ.ಕ. ಜಿಲ್ಲಾಧ್ಯಕ್ಷ ಡಾ.ಎಂ.ಪಿ. ಶ್ರೀನಾಥ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮ್ಮೇಳನದ ಸರ್ವಾಧ್ಯಕ್ಷತೆಯನ್ನು ಹಿರಿಯ ಹಾಸ್ಯ ಸಾಹಿತಿ ಭುವನೇಶ್ವರಿ ಹೆಗಡೆ ವಹಿಸಲಿದ್ದಾರೆ. ಇಡೀ ಸಾಹಿತ್ಯ ಸಂಭ್ರಮವು ಅಮೃತ ಸೋಮೇಶ್ವರ ನಗರದಲ್ಲಿ, ಮಿಜಾರು ಆನಂದ ಆಳ್ವ ವೇದಿಕೆ, ಕೇಶವ ಕುಡ್ಲ ಪುಸ್ತಕ ಮಳಿಗೆ, ಕೆ.ಟಿ. ಗಟ್ಟಿ ಮಹಾದ್ವಾರ ನಿರ್ಮಾಣ ಮಾಡಿ ನಡೆಸಲು ಆಯೋಜನಾ ಸಮಿತಿ ನಿರ್ಣಯಿಸಿದೆ ಎಂದು ಹೇಳಿದರು.60ಕ್ಕೂ ಅಧಿಕ ಮಳಿಗೆಗಳು: ಸಮ್ಮೇಳನವನ್ನು ಕಸಾಪ ಅಧ್ಯಕ್ಷ ಮಹೇಶ್‌ ಜೋಷಿ ಉದ್ಘಾಟಿಸುವರು. ಪ್ರದರ್ಶನ ಮಳಿಗೆಗಳ ಉದ್ಘಾಟನೆಯನ್ನು ದಕ ಜಿಲ್ಲಾಧಿಕಾರಿ ಮಲ್ಲೈ ಮುಗಿಲನ್ ನೆರವೇರಿಸುತ್ತಾರೆ. ಸುಮಾರು ಹತ್ತು ಪುಸ್ತಕ ಮಳಿಗೆಗಳು ಬರುವ ನಿರೀಕ್ಷೆ ಇದ್ದು, ಖಾದಿ ಹಾಗೂ ಗ್ರಾಮೋದ್ಯೋಗ, ಮಹಿಳಾ ಸಭಲೀಕರಣ ಉತ್ಪನ್ನಗಳ ಪ್ರದರ್ಶನ ಸೇರಿದಂತೆ 60 ವಿವಿಧ ‌ಮಳಿಗೆಗಳನ್ನು ನಿರೀಕ್ಷಿಸಲಾಗಿದೆ ಎಂದರು.ಪುಸ್ತಕ ಬಿಡುಗಡೆ: ಈಗಾಗಲೇ ಹತ್ತು ಪುಸ್ತಕ ಬಿಡುಗಡೆಗೆ ಪ್ರಕಾಶಕರು ಹಾಗೂ ಬರಹಗಾರರು ನೋಂದಣಿ ಮಾಡಿದ್ದಾರೆ. ಹೆಚ್ಚಿನ ಪುಸ್ತಕಗಳನ್ನು ನಿರೀಕ್ಷಿಸಲಾಗಿದೆ ಎಂದ ಡಾ. ಶ್ರೀನಾಥ್, ಕಸಾಪ ಮಾಜಿ ಅಧ್ಯಕ್ಷ, ಧರ್ಮದರ್ಶಿ ಹರಿಕೃಷ್ಣ ಪುನರೂರು ಪುಸ್ತಕಗಳನ್ನು ಬಿಡುಗಡೆಗೊಳಿಸಲಿದ್ದಾರೆ. ಈ ಸಂದರ್ಭ ಜಿಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಆನಂದ್ ಕೆ. ಹಾಗೂ ಮಹಾನಗರ ಪಾಲಿಕೆಯ ಆಯುಕ್ತ ಆನಂದ ಎಲ್. ಹಾಜರಿರುತ್ತಾರೆ ಎಂದು ವಿವರಿಸಿದರು.ಹೆಚ್ಚಿನ ವಿದ್ಯಾರ್ಥಿಗಳನ್ನು ಕನ್ನಡದ ಸಂಭ್ರಮಕ್ಕೆ ಸೇರಿಕೊಳ್ಳಲಾಗಿದೆ. ಹೆಚ್ಚಿನ ಸಾಂಸ್ಕೃತಿಕ ಪ್ರಸ್ತುತಿಯಲ್ಲಿ ವಿದ್ಯಾರ್ಥಿಗಳು ಇರುವಂತೆ ಆಯೋಜನೆ ಮಾಡಲಾಗಿದೆ ಎಂದರು.ಕೇಂದ್ರೀಯ ಕಾರ್ಯಕಾರಿ ಸಮಿತಿ ಸದಸ್ಯ ಡಾ.ಮಾಧವ ಎಂ.ಕೆ., ಕೇಂದ್ರೀಯ ಮಾರ್ಗದರ್ಶಕ ಮಂಡಳಿ ಸದಸ್ಯ ಡಾ.ಮುರಲೀ ಮೋಹನ ಚೂಂತಾರು, ದ.ಕ. ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ವಿನಯ ಆಚಾರ್‌, ಕಸಾಪ ಮಂಗಳೂರು ತಾಲೂಕು ಅಧ್ಯಕ್ಷ ಡಾ.ಮಂಜುನಾಥ ರೇವಣ್ಕರ್‌, ಜಿಲ್ಲಾ ಸಮ್ಮೇಳನ ಸಮಿತಿ ಕಾರ್ಯದರ್ಶಿ ಪುಷ್ಪರಾಜ್‌ ಕೆ., ಮಾಧ್ಯಮ ಸಮಿತಿ ಮುಖ್ಯಸ್ಥ ರೇಮಂಡ್‌ ಡಿಕುನ್ಹಾ ಇದ್ದರು.ಸಮ್ಮೇಳನದಲ್ಲಿ ಏನೇನು?ಮಾ.23ರಂದು ಬೆಳಗ್ಗೆ 8.45ಕ್ಕೆ ವಿವಿ ಕಾಲೇಜಿನಿಂದ ಕನ್ನಡ ಭುವನೇಶ್ವರಿ ಮೆರವಣಿಗೆ, ಧ್ವಜಾರೋಹಣ. 9.30ಕ್ಕೆ ಉದ್ಘಾಟನಾ ಸಮಾರಂಭ, 11.45ರಿಂದ ಗೋಷ್ಠಿ- ಕರಾವಳಿಯ ಸಾಹಿತ್ಯ ಪರಂಪರೆ ಅವಲೋಕನ, ಮಧ್ಯಾಹ್ನ 2ಕ್ಕೆ ಬಹುಭಾಷಾ ಕವಿಗೋಷ್ಠಿ. 3ರಿಂದ ಗೋಷ್ಠಿ- ಹಾಸಭಾಸ- ನಗೆಸಮಯ, ಸಂಜೆ 4ರಿಂದ ವಿಶೇಷ ಉಪನ್ಯಾಸ- ಕರ್ನಾಟಕ ಸುವರ್ಣ ಸಂಭ್ರಮ- ದ.ಕ. ಜಿಲ್ಲೆಯಲ್ಲಿ ಕನ್ನಡದ ಅಸ್ಮಿತೆ, 5.30ರಿಂದ ಸಪ್ತಮಾತೃಕೆಯರು ಪ್ರದರ್ಶನ.ಮಾ.24ರಂದು ಬೆಳಗ್ಗೆ 8ರಿಂದ ಉದಯರಾಗ, 9ರಿಂದ ಯುವಕವಿಗೋಷ್ಠಿ, 10ರಿಂದ ವಿಶೇಷ ಉಪನ್ಯಾಸ- ಪಂಜೆ ಮಂಗೇಶರಾವ್, 11.30ರಿಂದ ಗೋಷ್ಠಿ- ಮಾಧ್ಯಮ: ದಿಕ್ಕುದೆಸೆ, 12ರಿಂದ ಗೋಷ್ಠಿ- ವೈದ್ಯಕೀಯ ಸಾಹಿತ್ಯ ಮತ್ತು ಸಾಮಾಜಿಕ ಸ್ವಾಸ್ಥ್ಯ, 2ರಿಂದ ಗೋಷ್ಠಿ- ಕರಾವಳಿಯ ಕನ್ನಡ ಮಾಧ್ಯಮ ಶಾಲೆಗಳು, 2.30ರಿಂದ ಸಮ್ಮೇಳನಾಧ್ಯಕ್ಷರೊಂದಿಗೆ ಸಂವಾದ, 4 ಗಂಟೆಗೆ ಸನ್ಮಾನ ಮತ್ತು ಸಮಾರೋಪ ಸಮಾರಂಭ.

Share this article