ಕನ್ನಡಪ್ರಭ ವಾರ್ತೆ ಮಂಗಳೂರು
ಶ್ರೀ ಕಲ್ಲುರ್ಟಿ ದೈವಸ್ಥಾನ ಚೆಂಡೆ ಮತ್ತು ಪುಳಿಂಚ ಸೇವಾ ಪ್ರತಿಷ್ಠಾನ ಆಶ್ರಯದಲ್ಲಿ ಯಕ್ಷಗಾನದ ಹಿರಿಯ ಕಲಾವಿದ ನವರಸ ನಾಯಕ ದಿ.ಪುಳಿಂಚ ರಾಮಯ್ಯ ಶೆಟ್ಟಿ ಅವರ ಸ್ಮರಣಾರ್ಥ ಪಂಚಮ ತ್ರೈವಾರ್ಷಿಕ ಪುಳಿಂಚ ಪ್ರಶಸ್ತಿ ಪ್ರದಾನ ಸಮಾರಂಭ ಮೇ 24ರಂದು ಬಂಟ್ವಾಳ ತಾಲೂಕು ಬಾಳ್ತಿಲದ ಶ್ರೀ ಕಲ್ಲುರ್ಟಿ ದೈವಸ್ಥಾನದಲ್ಲಿ ನಡೆಯಲಿದೆ.ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಪುಳಿಂಚ ಸೇವಾ ಪ್ರತಿಷ್ಠಾನ ಅಧ್ಯಕ್ಷ, ನ್ಯಾಯವಾದಿ ಶ್ರೀಧರ್ ಶೆಟ್ಟಿ ಪುಳಿಂಚ, ಅಂದು ಸಂಜೆ 5.45ಕ್ಕೆ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ. ತೆಂಕುತಿಟ್ಟಿನ ಹಿರಿಯ ಯಕ್ಷಗಾನ ಕಲಾವಿದ ಬೋಳಾರ ಸುಬ್ಬಯ್ಯ ಶೆಟ್ಟಿ, ಸಂಜಯ ಕುಮಾರ್ ಶೆಟ್ಟಿ ಗೋಣಿಬೀಡು ಮತ್ತು ಮಿಜಾರು ತಿಮ್ಮಪ್ಪ ಅವರು 2023-25ನೇ ಸಾಲಿನ ಪುಳಿಂಚ ಪ್ರಶಸ್ತಿ ಸ್ವೀಕರಿಸಲಿದ್ದಾರೆ. ಖ್ಯಾತ ಹಾಸ್ಯಗಾರ ದಿ.ಬಂಟ್ವಾಳ ಜಯರಾಮ ಆಚಾರ್ಯರಿಗೆ ಮರಣೋತ್ತರ ಪ್ರಶಸ್ತಿ ನೀಡಲಾಗುವುದು. ಅವರ ಪತ್ನಿ ಪ್ರಶಸ್ತಿ ಸ್ವೀಕರಿಸಲಿದ್ದಾರೆ ಎಂದು ತಿಳಿಸಿದರು.
ಪ್ರಶಸ್ತಿಯು ತಲಾ 25 ಸಾವಿರ ರು. ನಗದು ಮತ್ತು ಸ್ಮರಣಿಕೆಯನ್ನು ಒಳಗೊಂಡಿದೆ. ಕಾರ್ಯಕ್ರಮವನ್ನು ಪುತ್ತೂರು ವಿವೇಕಾನಂದ ವಿದ್ಯಾ ವರ್ಧಕ ಸಂಘದ ಅಧ್ಯಕ್ಷ ಡಾ.ಕಲ್ಲಡ್ಕ ಪ್ರಭಾಕರ್ ಭಟ್ ಉದ್ಘಾಟಿಸಲಿದ್ದಾರೆ. ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ ಅಧ್ಯಕ್ಷತೆ ವಹಿಸುವರು. ಹೊಸ ದಿಗಂತ ಪತ್ರಿಕೆಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪಿ.ಎಸ್.ಪ್ರಕಾಶ್ ಕೃತಿ ಬಿಡುಗಡೆ ಮಾಡುವರು. ದೈವಜ್ಞ ಶಶಿಕುಮಾರ್ ಪಂಡಿತ್, ಶಾಸಕ ರಾಜೇಶ್ ನಾೖಕ್ ಹಾಗೂ ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಬೊಟ್ಯಾಡಿ ಭಾಗವಹಿಸಲಿದ್ದಾರೆ ಎಂದರು.ಪ್ರಶಸ್ತಿ ಆಯ್ಕೆ ಸಮಿತಿಯ ಸಲಹೆಗಾರ ಭಾಸ್ಕರ್ ರೈ ಕುಕ್ಕುವಳ್ಳಿ, ಪುಳಿಂಚ ಸೇವಾ ಪ್ರತಿಷ್ಠಾನದ ಕೋಶಾಧಿಕಾರಿ ಪ್ರತಿಭಾ ಎಸ್. ಶೆಟ್ಟಿ ಪುಳಿಂಚ, ಯಕ್ಷಗಾನ ಸಂಘಟಕ ಜನಾರ್ದನ ಅಮ್ಮುಂಜೆ, ಸತೀಶ್ ಪೂಜಾರಿ ಚೆಂಡೆ ಇದ್ದರು.