25ರಂದು ಕುದೂರಿನಲ್ಲಿ ಅಮೃತ ವರ್ಷದ ರೇವಣ್ಣ ಕಾರ್ಯಕ್ರಮ

KannadaprabhaNewsNetwork |  
Published : Jan 21, 2025, 12:31 AM IST
20ಮಾಗಡಿ4 : ಮಾಗಡಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸೋಮವಾರ ಅಮೃತ ವರ್ಷದ ರೇವಣ್ಣ ಕಾರ್ಯಕ್ರಮದ ಆಹ್ವಾನ ಪತ್ರಿಕೆಯನ್ನು ಗಣ್ಯರು ಬಿಡುಗಡೆ ಮಾಡಿದರು. | Kannada Prabha

ಸಾರಾಂಶ

ಪಕ್ಷಾತೀತವಾಗಿ, ಜಾತ್ಯಾತೀತವಾಗಿ ಗೌರವ ಸಲ್ಲಿಸುವ ಕಾರ್ಯಕ್ರಮವನ್ನು ನಿರಂತರ ಕುದೂರು ತಂಡದಿಂದ ಆಯೋಜಿಸಿರುವುದು ಬಹಳ ಸಂತೋಷದ ಸಂಗತಿಯಾಗಿದೆ. ರೇವಣ್ಣನವರು ಕೇವಲ ಹಿಂದುಳಿದ ವರ್ಗಗಳ ನಾಯಕರಲ್ಲ, ಜಾತ್ಯಾತೀತ ನಾಯಕರು,

ಕನ್ನಡಪ್ರಭ ವಾರ್ತೆ ಮಾಗಡಿ

ಮಾಜಿ ಸಚಿವ ಹಾಗೂ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್.ಎಂ.ರೇವಣ್ಣರವರು 75ನೇ ವಸಂತಕ್ಕೆ ಕಾಲಿಟ್ಟಿರುವ ಹಿನ್ನೆಲೆಯಲ್ಲಿ ನಿರಂತರ ಕುದೂರು ಸಂಸ್ಥೆ ಹಾಗೂ ಅಭಿಮಾನಿಗಳಿಂದ ‘ಬೆಂಕಿಯಲ್ಲಿ ಅರಳಿದ ಹೂವು’, ‘ಅಮೃತ ವರ್ಷದ ರೇವಣ್ಣ’ ಎಂಬ ವಿನೂತನ ಕಾರ್ಯಕ್ರಮವನ್ನು ಜ.25ರಂದು ಬೆಳಗ್ಗೆ 10 ಗಂಟೆಗೆ ಕುದೂರಿನಲ್ಲಿ ಆಯೋಜಿಸಲಾಗಿದೆ ಎಂದು ನಿರಂತರ ಕುದೂರು ಸಂಸ್ಥೆಯ ಗಂ.ದಯಾನಂದ ಹೇಳಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸೋಮವಾರ ಅಮೃತ ವರ್ಷದ ರೇವಣ್ಣ ಕಾರ್ಯಕ್ರಮದ ಆಹ್ವಾನ ಪತ್ರಿಕೆಯನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು, ನಮ್ಮ ಕುದೂರಿನ ಸ್ನೇಹಿತರಾದ ಯತೀಶ್, ಮಂಜೇಶ್, ಚಂದ್ರಶೇಖರ್ ಅವರ ಹೆಚ್ಚಿನ ಸಹಕಾರದಿಂದ ಮಾಜಿ ಸಚಿವ ಎಚ್.ಎಂ.ರೇವಣ್ಣನವರಿಗೆ ಗೌರವ ಸಲ್ಲಿಸಲು ಜಾತ್ಯಾತೀತವಾಗಿ, ಪಕ್ಷಾತೀತವಾಗಿ ‘ಬೆಂಕಿಯಲ್ಲಿ ಅರಳಿದ ಹೂವು’, ‘ಅಮೃತ ವರ್ಷದ ರೇವಣ್ಣ’ ಎಂಬ ಹೆಸರಿನಲ್ಲಿ ಅರ್ಥಗರ್ಭಿತ ಕಾರ್ಯಕ್ರಮವನ್ನು ಜ.25ರಂದು ಆಯೋಜಿಸಲಾಗಿದೆ. ಕುದೂರಿನ ಶ್ರೀ ಲಕ್ಷ್ಮೀದೇವಿ ದೇವಸ್ಥಾನದಿಂದ ಎಚ್.ಎಂ.ರೇವಣ್ಣರನ್ನು ಬೆಳ್ಳಿ ರಥದಲ್ಲಿ ಕೂರಿಸಿ, ವಿವಿಧ ಜಾನಪದ ಕಲಾ ತಂಡಗಳೊಂದಿಗೆ ಅಪಾರ ಅಭಿಮಾನಿಗಳ ಉಪಸ್ಥಿತಿಯಲ್ಲಿ ಕೆಪಿಎಸ್ ಶಾಲಾ ಸಭಾಂಗಣದವರೆಗೆ ಮೆರವಣಿಗೆಯ ಮೂಲಕ ಕರೆತರಲಾಗುವುದು. ವೇದಿಕೆಯಲ್ಲಿ ಶಾಸಕ ಎಚ್.ಸಿ.ಬಾಲಕೃಷ್ಣ, ಮಾಜಿ ಶಾಸಕ ಎ.ಮಂಜುನಾಥ್, ಮಾಗಡಿ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ರಂಗಧಾಮಯ್ಯರ ಹಾಗೂ ಹಲವು ಸಾಧಕರು ಉಪಸ್ಥಿತರಿರುವರು. ಎಚ್.ಎಂ.ರೇವಣ್ಣನವರ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿಕೊಂಡರು.

ಕೆಪಿಸಿಸಿ ರಾಜ್ಯ ಸಂಚಾಲಕ ಮಂಜೇಶ್ ಕುಮಾರ್ ಮಾತನಾಡಿ, ಎಚ್.ಎಂ.ರೇವಣ್ಣನವರು ಜಾತ್ಯಾತೀತ, ಪಕ್ಷಾತೀತ ಮತ್ತು ಪ್ರಶ್ನಾತೀತ ನಾಯಕರಾಗಿದ್ದು, ಅತ್ಯಂತ ಸ್ನೇಹಮಯಿ ವ್ಯಕ್ತಿತ್ವದವರಾಗಿದ್ದಾರೆ. ರೇವಣ್ಣನವರ ತ್ಯಾಗ ಮನೋಭಾವದಿಂದ ರಾಜಕೀಯವಾಗಿ ಸಿಗಬೇಕಾದ ಸ್ಥಾನ ಮಾನ ಲಭಿಸಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ತಾಪಂ ಮಾಜಿ ಸದಸ್ಯ ಸಿ. ಜಯರಾಂ ಮಾತನಾಡಿ, ರಾಜ್ಯ, ರಾಷ್ಟ್ರ ರಾಜಕಾರಣದಲ್ಲಿ ತನ್ನದೇ ಆದ ವ್ಯಕ್ತಿತ್ವವನ್ನು ಹೊಂದಿರುವ ರೇವಣ್ಣನವರು ಮಾಗಡಿಗೆ ಒಂದು ವಿಶಿಷ್ಟವಾದ ರಾಜಕೀಯ ಶಕ್ತಿಯಾಗಿದ್ದಾರೆ. ರೇವಣ್ಣನವರಿಂದ ನಮ್ಮಂತಹ ಎಷ್ಟೋ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಮುಖಂಡರು ರಾಜಕೀಯವಾಗಿ ಮುಂಚೂಣಿಗೆ ಬಂದಿದ್ದೇವೆ ಎಂದು ರೇವಣ್ಣನವರ ಮೇಲಿದ್ದ ಅಭಿಮಾನ ವ್ಯಕ್ತಪಡಿಸಿದರು.

ಪುರಸಭಾ ಸದಸ್ಯ ಎಂ.ಎನ್.ಮಂಜುನಾಥ್ ಮಾತನಾಡಿ, ಪಕ್ಷಾತೀತವಾಗಿ, ಜಾತ್ಯಾತೀತವಾಗಿ ಗೌರವ ಸಲ್ಲಿಸುವ ಕಾರ್ಯಕ್ರಮವನ್ನು ನಿರಂತರ ಕುದೂರು ತಂಡದಿಂದ ಆಯೋಜಿಸಿರುವುದು ಬಹಳ ಸಂತೋಷದ ಸಂಗತಿಯಾಗಿದೆ. ರೇವಣ್ಣನವರು ಕೇವಲ ಹಿಂದುಳಿದ ವರ್ಗಗಳ ನಾಯಕರಲ್ಲ, ಜಾತ್ಯಾತೀತ ನಾಯಕರು, ಅವರ ಸಕ್ರಿಯ ರಾಜಕಾರಣದಲ್ಲಿ ಮಾಗಡಿ ಕ್ಷೇತ್ರವನ್ನು ತ್ಯಾಗ ಮಾಡದಿದ್ದರೆ ಇಂದು ಮುಖ್ಯಮಂತ್ರಿ ಅಥವಾ ಉಪ ಮುಖ್ಯಮಂತ್ರಿ ಸ್ಥಾನದಲ್ಲಿ ನಾವು ಅವರನ್ನು ನೋಡಬಹುದಿತ್ತು ಎಂದು ಬೇಸರ ತೋಡಿಕೊಂಡರು.

ಮುಖಂಡರಾದ ಕುದೂರು ಯತೀಶ್, ಚಂದ್ರಶೇಖರ್, ತೇಜಸ್ ಕುಮಾರ್, ಶಿವಕುಮಾರ್, ಕಲ್ಲೇಶ್, ವೆಂಕಟೇಶ್ ಸೇರಿದಂತೆ ಇತರರು ಭಾಗವಹಿಸಿದ್ದರು.

PREV

Recommended Stories

ಅನನ್ಯಾ ಭಟ್‌ ಅರವಿಂದ್‌-ವಿಮಲಾ ಪುತ್ರಿ, ಕೊ* ಆಗಿದ್ದು ನಿಜ: ಸುಜಾತಾ
ಬುಕರ್‌ ವಿಜೇತ ಬಾನುರಿಂದ ದಸರಾ ಉದ್ಘಾಟನೆ: ಸಿಎಂ