ಕನ್ನಡಪ್ರಭ ವಾರ್ತೆ ಹಾನಗಲ್ಲ
ಇಲ್ಲಿನ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗಿರಿಜನ ಸುರಕ್ಷಾ ವೇದಿಕೆ ರಾಜ್ಯದಲ್ಲಿ ಗಿರಿಜನರ ಸಂರಕ್ಷಣೆ, ಶಿಕ್ಷಣ, ಸಂಸ್ಕೃತಿಯ ಉಳಿವಿಗಾಗಿ ಕೆಲಸ ಮಾಡುತ್ತಿದೆ. ರಾಜ್ಯದಲ್ಲಿ ೭೦ ಲಕ್ಷ ಜನ ಗಿರಿಜನರಿದ್ದಾರೆ. ದೇಶದಲ್ಲಿ ೧೨ ಕೋಟಿ ನಮ್ಮ ಜನಸಂಖ್ಯೆ ಇದೆ. ನಮ್ಮ ಸಮುದಾಯದಲ್ಲಿ ೭೦೦ ಜಾತಿಗಳಿವೆ. ಕಾಡಿನ ಸಂಸ್ಕೃತಿ, ಪರಂಪರೆಯನ್ನು ಉಳಿಸುವಲ್ಲಿ, ಗ್ರಾಮವಾಸಿ ನಗರವಾಸಿಗಳಾಗಿರುವವರನ್ನು ಗುರುತಿಸಿ ಸಂಘಟಿಸಲಾಗುತ್ತಿದೆ. ನಮ್ಮ ಜನಾಂಗ ಸದೃಢವಾಗಿ ಉಳಿಯಬೇಕು ಎಂಬುದು ನಮ್ಮ ಆಶಯ ಎಂದರು.
ಇಂದಿರಾಗಾಂಧಿ ಅವರು ಪ್ರಧಾನಿಯಾಗಿರುವಾಗಲೇ ವಿದೇಶಿ ಅನ್ಯ ಧರ್ಮಕ್ಕೆ ಮತಾಂತರಗೊಂಡವರು. ಗಿರಿಜನರ ಸರ್ಕಾರಿ ಸೌಲಭ್ಯ ಪಡೆಯಕೂಡದು ಎಂಬ ಹೋರಾಟ ನಡೆದು, ೨೩೦ಕ್ಕೂ ಅಧಿಕ ಸಂಸದರು ಸಹಿ ಹಾಕಿ ಈ ಸೌಲಭ್ಯ ಮತಾಂತರಗೊಂಡವರಿಗೆ ಸಲ್ಲಕೂಡದು ಎಂದಿದ್ದರು. ಇದು ನಿರ್ಣಯಾತ್ಮಕ ಹಂತಕ್ಕೆ ತಲುಪಿತ್ತು. ಬಳಿಕ ಅನ್ಯ ಕಾರಣಕ್ಕೆ ನನೆಗುದಿಗೆ ಬಿದ್ದ ನಂತರ ಜನಜಾತಿ ಸುರಕ್ಷಾ ಮಂಚ ಸಂಘಟನೆಯಿಂದ ೨೦೧೦ರಲ್ಲಿ ೨೫ ಲಕ್ಷ ಸಹಿ ಸಂಗ್ರಹ ಮಾಡಿ ಅಂದಿನ ರಾಷ್ಟ್ರಪತಿಗೆ ಮನವಿ ಸಲ್ಲಿಸಲಾಗಿದೆ ಎಂದರು.ಮತಾಂತರಗೊಂಡ ಬುಡಕಟ್ಟು ಜನಾಂಗವನ್ನು ಕೂಡಲೇ ಪರಿಶಿಷ್ಟ ಪಂಗಡ ಸೌಲಭ್ಯದಿಂದ ಕೈಬಿಡಬೇಕು. ಅದಕ್ಕಾಗಿಯೇ ಡಿಲಿಸ್ಟಿಂಗ್ ಸಮಾವೇಶ ನಡೆಸುತ್ತಿದ್ದೇವೆ. ಡುಪ್ಲಿಕೇಟ್ ಸರ್ಟಿಫಿಕೆಟ್ ಪಡೆದುಕೊಂಡು ಹಲವರು ನಮಗೆ ವಂಚನೆ ಮಾಡಿದ್ದಾರೆ. ಮತಾಂತರಗೊಂಡವರು ಬುಡಕಟ್ಟು ಹಾಗೂ ಅಲ್ಪಸಂಖ್ಯಾತ ಹೀಗೆ ಎರಡೂ ಸೌಲಭ್ಯ ಪಡೆದಿದ್ದಾರೆ. ಮತಾಂತರಗೊಂಡವರಿಗೆ ಇಲ್ಲಿ ಬದುಕುವ ಹಕ್ಕಿದೆ. ಆದರೆ ಅಲ್ಲಿನ ಮೀಸಲಾತಿ ಸೌಲಭ್ಯ ಪಡೆಯಲಿ. ನಮ್ಮ ಜನಾಂಗದ ಸೌಲಭ್ಯಗಳಿಂದ ನಾವು ವಂಚಿತವಾಗಬಾರದು ಎಂದರು.
ಗಿರಿಜನ ಸುರಕ್ಷಾ ವೇದಿಕೆಯ ಜಿಲ್ಲಾಧ್ಯಕ್ಷ ಫಕ್ಕೀರಪ್ಪ ಸವೂರ, ಮುಖಂಡರಾದ ನಿಂಗಪ್ಪ ಶಿಡೇನೂರ, ಮಂಜುನಾಥ ಶೇಟ್, ಫಕ್ಕೀರಪ್ಪ ಟಾಕಣ್ಣನವರ ಮೊದಲಾದವರು ಸುದ್ದಿಗೋಷ್ಠಿಯಲ್ಲಿದ್ದರು.