ಹರಪನಹಳ್ಳಿ: ನ್ಯಾ. ಎಚ್. ಕಾಂತರಾಜ್ ಆಯೋಗದ ಜಾತಿಗಣತಿ ವರದಿ ಜಾರಿಗೊಳಿಸಲು ಆಗ್ರಹಿಸಿ ಕರ್ನಾಟಕ ಶೋಷಿತ ಸಮುದಾಯಗಳ ಮಹಾ ಒಕ್ಕೂಟ ಹಾಗೂ ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟದಿಂದ ಜ. 28ರಂದು ಚಿತ್ರದುರ್ಗದ ಮಾದಾರ ಚನ್ನಯ್ಯ ಪೀಠದ ಪಕ್ಕದ ಮೈದಾನದಲ್ಲಿ ಸಮಾವೇಶ ಆಯೋಜಿಸಿದೆ ಎಂದು ರೇಷ್ಮೆ ನಿಗಮದ ಮಾಜಿ ಅಧ್ಯಕ್ಷ ದಾವಣಗೆರೆ ಡಿ. ಬಸವರಾಜ ತಿಳಿಸಿದರು.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅತ್ಯಂತ ಹಿಂದುಳಿದ ಜಾತಿಗಳ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಹಾಗೂ ರಾಜಕೀಯ ಅಭಿವೃದ್ಧಿಗಾಗಿ ನ್ಯಾ. ಎಚ್. ಕಾಂತರಾಜ ಆಯೋಗದ ವರದಿ ಜಾರಿಗೊಳಿಸುವುದು ಅಗತ್ಯವಾಗಿದೆ ಎಂದರು.ಈ ಹಿಂದೆ ಸಿದ್ದರಾಮಯ್ಯನವರು ಮುಖ್ಯಮಂತ್ರಿಳಾಗಿದ್ದ ಸಂದರ್ಭದಲ್ಲಿ ₹158 ಕೋಟಿ ಹಣ ಖರ್ಚು ಮಾಡಿ ಸುಮಾರು 1.50 ಲಕ್ಷಕ್ಕೂ ಅಧಿಕ ಅಧಿಕಾರಿಗಳನ್ನು ನೇಮಕ ಮಾಡಿ ಮನೆ ಮನೆಗೂ ತೆರಳಿ ಸಮೀಕ್ಷೆ ಮಾಡಿಸಿದ್ದಾರೆ. ಆದರೆ ಇದನ್ನು ಕೆಲವೇ ಕೆಲವು ವ್ಯಕ್ತಿಗಳು ಕಾಂತರಾಜ್ ವರದಿ ಅವೈಜ್ಞಾನಿಕವಾಗಿದೆ ಎಂದು ಅಪಸ್ವರ ಎತ್ತಿರುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಪ್ರಗತಿಪರ ಚಿಂತಕ ಕೋಡಿಹಳ್ಳಿ ಭೀಮಪ್ಪ ಮಾತನಾಡಿ, ಶೈಕ್ಷಣಿಕ, ಸಾಮಾಜಿಕ ಹಾಗೂ ಆರ್ಥಿಕವಾಗಿ ಹಿಂದುಳಿದ ಸಮುದಾಯಗಳ ಮೇಲೆ ಪಟ್ಟಭದ್ರ ಹಿತಾಸಕ್ತಿಗಳಿಂದ ಶೋಷಣೆಯಾಗುತ್ತಿದೆ. ಹಾಗಾಗಿ ಒಗ್ಗಟ್ಟಿನಿಂದ ಶಕ್ತಿ ಪ್ರದರ್ಶಿಸಬೇಕಿದೆ ಎಂದರು.
ಪುರಸಭೆ ಹಿರಿಯ ಸದಸ್ಯ ಎಂ.ವಿ. ಅಂಜಿನಪ್ಪ ಮಾತನಾಡಿ, ಕಾಂತರಾಜ್ ಅಯೋಗದ ವರದಿ ಬಿಡುಗಡೆಗೊಳಿಸುವ ಮುನ್ನವೆ ಅದಕ್ಕೆ ವಿರೋಧ ವ್ಯಕ್ತಪಡಿಸುತ್ತಿರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಹಾಗಾಗಿ ಕಾಂತರಾಜ್ ವರದಿಯನ್ನು ಸದನದಲ್ಲಿ ಮಂಡಿಸಿ ಚರ್ಚಿಸಿ ಮಾಹಿತಿ ಸಂಗ್ರಹಿಸಬೇಕು ಅಗ್ರಹಿಸಿದರು.ಕುರುಬ ಸಮಾಜದ ತಾಲೂಕು ಅಧ್ಯಕ್ಷ ಬಂಡ್ರಿ ಗೋಣಿಬಸಪ್ಪ ಮಾತನಾಡಿ, ಕಾಂತರಾಜ್ ವರದಿ ಜಾರಿಗೂ ವಿರೋಧ ವ್ಯಕ್ತಪಡಿಸುವುದು ಸಮಂಜಸವಲ್ಲ. ಸದನದಲ್ಲಿ ಇಟ್ಟು ವರದಿಯ ಸಾಧಕ- ಬಾಧಕಗಳನ್ನು ಚರ್ಚಿಸಿ ತೀರ್ಮಾನ ಕೈಗೊಳ್ಳಬೇಕು ಎಂದರು.
ಅಂಜುಮನ್ ಕಮಿಟಿ ಮಾಜಿ ಅಧ್ಯಕ್ಷ ಜಾವೀದ್ ಮಾತನಾಡಿದರು. ಸುದ್ದಿಗೋಷ್ಠಿಯಲ್ಲಿ ವಕೀಲ ಟಿ. ವೆಂಕಟೇಶ, ಮೈದೂರು ರಾಮಣ್ಣ, ವಕೀಲ ಹಲಗೇರಿ ಮಂಜಣ್ಣ, ಹುಲಿಕಟ್ಟಿ ಚಂದ್ರಪ್ಪ, ಪುರಸಭೆ ಸದಸ್ಯ ಲಾಟಿ ದಾದಾಪೀರ್, ವಸಂತಪ್ಪ, ಕೋರಿಶೆಟ್ಟಿ ಉಚ್ಚೆಂಗೆಪ್ಪ, ಮೋತಿನಾಯ್ಕ್, ಪಾಲಾಕ್ಷಪ್ಪ, ಮಾರೇಪ್ಪ, ಗುಡಿ ನಾಗರಾಜ, ಓ. ಮಹಾಂತೇಶ್, ಸ್ವಾಮಿನಾಯ್ಕ್, ಡಿಶ್ ವೆಂಕಟೇಶ, ಅಗ್ರಹಾರ ಅಶೋಕ, ಸಿ. ಪ್ರತಾಪ್, ಉಪ್ಪಾರ್ ಹನುಮಂತಪ್ಪ, ಎಲ್. ಮಂಜ್ಯಾನಾಯ್ಕ್, ಶಂಕರ, ಈಡಿಗರ ವೆಂಕಟೇಶ, ಎಚ್.ಕೆ. ವೆಂಕಟೇಶ, ಶಿವಾಜಿನಾಯ್ಕ್, ಶಿವಪುತ್ರ, ಸಾಸ್ವಿಹಳ್ಳಿ ನಾಗರಾಜ, ವೀರೇಶನಾಯ್ಕ್, ಪೈಲ್ವಾನ್ ಬಸಪ್ಪ, ಲಿಂಗೇಶ ಪೂಜಾರ ಸೇರಿದಂತೆ ಇತರರು ಇದ್ದರು.