ಆ.೩೦ರಂದು ಮಂಡ್ಯ ಜಿಲ್ಲಾ ಮಟ್ಟದ ವಿಜ್ಞಾನ ತರಂಗ ಸ್ಪರ್ಧೆ: ಎಂ.ಜಿ.ದಿವ್ಯಶ್ರೀ

KannadaprabhaNewsNetwork | Published : Aug 28, 2024 12:48 AM

ಸಾರಾಂಶ

೫ ರಿಂದ ೧೦ನೇ ತರಗತಿಯ ೩೧೦೦ ಮಂದಿ ಮಕ್ಕಳು ನೋಂದಾಯಿಸಿಕೊಂಡಿದ್ದು, ೩೫೦ ಸ್ವಯಂ ಸೇವಕರು ಸೇರಿ ಒಟ್ಟಾರೆ ೪ ಸಾವಿರ ಮಂದಿ ಭಾಗವಹಿಸಲಿದ್ದಾರೆ. ಪ್ರತಿ ತಾಲೂಕಿನಿಂದ ೨೫೦ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿಕೊಂಡಿದ್ದು, ಆಯ್ಕೆಯಾಗಿ ಬಹುಮಾನ ಪಡೆದ ವಿದ್ಯಾರ್ಥಿಗಳು ಇಸ್ತ್ರೋದಲ್ಲಿ ನಡೆಯಲಿರುವ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಅಧ್ಯಾಪನ ಪಬ್ಲಿಕ್ ಚಾರಿಟಬಲ್ ಟ್ರಸ್ಟ್, ಶಾಲಾ ಶಿಕ್ಷಣ ಇಲಾಖೆ, ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ಮತ್ತು ಇಂಡಿಯನ್ ಸೈನ್ಸ್ ರಿಸರ್ಚ್ ಆರ್ಗನೈಸೇಷನ್ ಸಂಸ್ಥೆಗಳ ವತಿಯಿಂದ ಆ.೩೦ರಂದು ನಗರದ ಎ ಅಂಡ್ ಎ ಕನ್ವೆನ್‌ಷನ್ ಹಾಲ್‌ನಲ್ಲಿ ಜಿಲ್ಲಾ ಮಟ್ಟದ ವಿಜ್ಞಾನ ತರಂಗ ಸ್ಪರ್ಧೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಟ್ರಸ್ಟ್ ಅಧ್ಯಕ್ಷೆ ಎಂ.ಜಿ.ದಿವ್ಯಶ್ರೀ ತಿಳಿಸಿದರು.

ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಸಮಾರಂಭ ಉದ್ಘಾಟಿಸುವರು. ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ಹಾಗೂ ಸೆಸ್ಕ್ ಅಧ್ಯಕ್ಷ ಎ.ಬಿ. ರಮೇಶ್ ಬಂಡಿಸಿದ್ದೇಗೌಡ ಉಪಸ್ಥಿತರಿರುವರು ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಶಾಸಕ ಪಿ.ರವಿಕುಮಾರ್ ಅಧ್ಯಕ್ಷತೆ ವಹಿಸಲಿದ್ದು, ಶಾಸಕರಾದ ದರ್ಶನ್ ಪುಟ್ಟಣ್ಣಯ್ಯ, ಪಿ.ಎಂ. ನರೇಂದ್ರಸ್ವಾಮಿ, ಎಚ್.ಟಿ.ಮಂಜು, ಕೆ.ಎಂ.ಉದಯ್, ದಿನೇಶ್ ಗೂಳೀಗೌಡ, ಮಧು ಜಿ. ಮಾದೇಗೌಡ, ಜಿಲ್ಲಾಧಿಕಾರಿ ಡಾ. ಕುಮಾರ, ಜಿಲ್ಲಾ ಪೊಲೀಸ್ ಅಧೀಕ್ಷಕ ಮಲ್ಲಿಕಾರ್ಜುನ ಬಾಲದಂಡಿ, ಜಿ.ಪಂ. ಸಿಇಓ ಶೇಖ್ ತನ್ವೀರ್ ಆಸೀಫ್, ಅಪರ ಜಿಲ್ಲಾಧಿಕಾರಿ ಡಾ. ಎಚ್.ಎಲ್. ನಾಗರಾಜು, ಗ್ಯಾರಂಟಿ ಯೋಜನೆ ಅಭಿವೃದ್ಧಿ ಪ್ರಾಧಿಕಾರದ ಉಪಾಧ್ಯಕ್ಷ ವೆಂಕಟರಮಣೇಗೌಡ (ಸ್ಟಾರ್ ಚಂದ್ರು) ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಶಿವರಾಮೇಗೌಡ, ಇಸ್ತ್ರೋ ಹಿರಿಯ ವಿಜ್ಞಾನಿ ಪಿ.ವಿ.ಎನ್.ಮೂರ್ತಿ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು ಎಂದರು.

೫ ರಿಂದ ೧೦ನೇ ತರಗತಿಯ ೩೧೦೦ ಮಂದಿ ಮಕ್ಕಳು ನೋಂದಾಯಿಸಿಕೊಂಡಿದ್ದು, ೩೫೦ ಸ್ವಯಂ ಸೇವಕರು ಸೇರಿ ಒಟ್ಟಾರೆ ೪ ಸಾವಿರ ಮಂದಿ ಭಾಗವಹಿಸಲಿದ್ದಾರೆ. ಪ್ರತಿ ತಾಲೂಕಿನಿಂದ ೨೫೦ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿಕೊಂಡಿದ್ದು, ಆಯ್ಕೆಯಾಗಿ ಬಹುಮಾನ ಪಡೆದ ವಿದ್ಯಾರ್ಥಿಗಳು ಇಸ್ತ್ರೋದಲ್ಲಿ ನಡೆಯಲಿರುವ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ. ಬೆಳಗ್ಗೆ ೯ ಗಂಟೆಗೆ ಸ್ಪರ್ಧಾ ಕಾರ್ಯಕ್ರಮ ಪ್ರಾರಂಭವಾಗಲಿದ್ದು, ಮಧ್ಯಾಹ್ನ ೨ ಗಂಟೆಗೆ ವೇದಿಕೆ ಕಾರ್ಯಕ್ರಮ ನಡೆಯಲಿದೆ ಎಂದು ವಿವರಿಸಿದರು.

ಪಿಇಎಸ್ ಪ್ರೌಢಶಾಲೆ, ಗೀತಾ, ಸಿಐಎಂಟಿ ಶಾಲೆಗಳ ೫೦ ಮಂದಿ ಶಿಕ್ಷಕರು ತೀರ್ಪುಗಾರರಾಗಿ ಭಾಗವಹಿಸಲಿದ್ದು, ನಂತರ ನಡೆಯುವ ಅಂತಿಮ ಸ್ಪರ್ಧೆಯ ತೀರ್ಪುಗಾರರಾಗಿ ಮೈಸೂರು ವಿವಿಯಿಂದ ಪ್ರಾಧ್ಯಾಪಕರು ತೀರ್ಪುಗಾರರಾಗಿ ಭಾಗವಹಿಸಲಿದ್ದಾರೆ ಎಂದರು.

ಇದೇ ಸಂದರ್ಭದಲ್ಲಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ಹ್ಯಾಕಥಾನ್ ಸ್ಪರ್ಧೆ ಕೂಡ ಇರಲಿದ್ದು, ವಿಷಯಗಳನ್ನೂ ಅವರೇ ಮಕ್ಕಳಿಗೆ ತಿಳಿಸಿ ಪ್ರದರ್ಶನ ಮಾಡಬೇಕಿರುತ್ತದೆ. ಇದಕ್ಕಾಗಿ ನಾವು ಯಾವುದೇ ಪರಿಕರಗಳನ್ನೂ ನೀಡುವುದಿಲ್ಲ. ಎಲ್ಲವನ್ನೂ ವಿದ್ಯಾರ್ಥಿಗಳೇ ತರಬೇಕಿದೆ ಎಂದರು.

೫ ತಂಡಗಳಿಗೆ ಬೆಸ್ಟ್ ಹ್ಯಾಕಥಾನ್ ಆಯ್ಕೆ ಮಾಡಿ ಬಹುಮಾನ ನೀಡಲಾಗುತ್ತದೆ. ಕಾರ್ಯಕ್ರಮಕ್ಕಾಗಿ ಸುಮಾರು ೧೦ ಲಕ್ಷ ರು. ವೆಚ್ಚವಾಗಲಿದ್ದು, ಸಂಘ ಸಂಸ್ಥೆಗಳು, ಸಿಎಸ್‌ಆರ್ ಅನುದಾನವನ್ನು ಬಳಕೆ ಮಾಡಿಕೊಂಡು ಕಾರ್ಯಕ್ರಮ ನಿರ್ವಹಣೆ ಮಾಡಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಟ್ರಸ್ಟ್‌ನ ಕಾರ್ಯದರ್ಶಿ ಜಿ.ಟಿ.ಪ್ರವೀಣ್‌ಕುಮಾರ್, ಟ್ರಸ್ಟ್‌ನ ಫೃಥ್ವಿ, ಪ್ರಿಯಾಂಕ ಗೋಷ್ಠಿಯಲ್ಲಿದ್ದರು.

Share this article