ಫೆ.೨ರಂದು ಎಂ.ಶ್ರೀನಿವಾಸ್ ಅಭಿನಂದನಾ ಗ್ರಂಥ ಬಿಡುಗಡೆ

KannadaprabhaNewsNetwork |  
Published : Jan 29, 2026, 01:30 AM IST
ಡಾ.ಎಸ್‌.ತುಕಾರಾಮ್‌, ಶಿವು ಬನ್ನಹಳ್ಳಿ | Kannada Prabha

ಸಾರಾಂಶ

ಹನಕೆರೆ ಎಂ.ಶ್ರೀನಿವಾಸ್ ಪ್ರತಿಷ್ಠಾನದಿಂದ ಮಾಜಿ ಶಾಸಕ ಎಂ.ಶ್ರೀನಿವಾಸ್ ೭೫ ನೇ ವರ್ಷದ ಹುಟ್ಟುಹಬ್ಬದ ಅಂಗವಾಗಿ ಶ್ರೀನಿಧಿ ಅಭಿನಂದನಾ ಗ್ರಂಥ ಬಿಡುಗಡೆ, ಅರಸಮ್ಮ ಮೆಣಸೇಗೌಡ ಕೃಷಿ ಪ್ರಶಸ್ತಿ, ಎಂ.ಶ್ರೀನಿವಾಸ್ ಸಮಾಜ ಸೇವಾ ಪ್ರಶಸ್ತಿ ಪ್ರದಾನ ಸಮಾರಂಭ ಫೆ.೨ರಂದು ನಗರದ ಅಂಬೇಡ್ಕರ್ ಭವನದಲ್ಲಿ ಏರ್ಪಡಿಸಲಾಗಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಹನಕೆರೆ ಎಂ.ಶ್ರೀನಿವಾಸ್ ಪ್ರತಿಷ್ಠಾನದಿಂದ ಮಾಜಿ ಶಾಸಕ ಎಂ.ಶ್ರೀನಿವಾಸ್ ೭೫ ನೇ ವರ್ಷದ ಹುಟ್ಟುಹಬ್ಬದ ಅಂಗವಾಗಿ ಶ್ರೀನಿಧಿ ಅಭಿನಂದನಾ ಗ್ರಂಥ ಬಿಡುಗಡೆ, ಅರಸಮ್ಮ ಮೆಣಸೇಗೌಡ ಕೃಷಿ ಪ್ರಶಸ್ತಿ, ಎಂ.ಶ್ರೀನಿವಾಸ್ ಸಮಾಜ ಸೇವಾ ಪ್ರಶಸ್ತಿ ಪ್ರದಾನ ಸಮಾರಂಭ ಫೆ.೨ರಂದು ನಗರದ ಅಂಬೇಡ್ಕರ್ ಭವನದಲ್ಲಿ ಏರ್ಪಡಿಸಲಾಗಿದೆ ಎಂದು ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಬಿ.ಜಯಪ್ರಕಾಶಗೌಡ ಹೇಳಿದರು.

ದಿವ್ಯಸಾನ್ನಿಧ್ಯವನ್ನು ವಿಶ್ವ ಒಕ್ಕಲಿಗರ ಮಠದ ಪೀಠಾಧ್ಯಕ್ಷ ನಿಶ್ಚಲಾನಂದನಾಥ ಸ್ವಾಮೀಜಿ ವಹಿಸುವರು. ಉದ್ಘಾಟನೆಯನ್ನು ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ನೆರವೇರಿಸುವರು. ಅಧ್ಯಕ್ಷತೆಯನ್ನು ಶಾಸಕ ಪಿ.ರವಿಕುಮಾರ್ ವಹಿಸಲಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಆಂಧ್ರಪ್ರದೇಶ ಮತ್ತು ತೆಲಂಗಾಣ ಆದಾಯ ತೆರಿಗೆ ಇಲಾಖೆ ಮುಖ್ಯ ಆಯುಕ್ತ ಜಯರಾಮ್ ರಾಯಪುರ ಶ್ರೀನಿಧಿ ಅಭಿನಂದನಾ ಗ್ರಂಥ ಬಿಡುಗಡೆ ಮಾಡುವರು. ಮಾಜಿ ಶಾಸಕ ಎಂ.ಶ್ರೀನಿವಾಸ್ ಅವರನ್ನು ಮಾಜಿ ಸಚಿವ ಸಿ.ಎಸ್. ಪುಟ್ಟರಾಜು ಅಭಿನಂದಿಸುವರು. ಎಂ.ಶ್ರೀನಿವಾಸ್ ಸಮಾಜ ಸೇವಾ ಪ್ರಶಸ್ತಿಯನ್ನು ಸಾಹಿತಿ ಎಸ್.ತುಕಾರಾಮ್ ಅವರಿಗೆ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಪಿ.ಎಂ.ನರೇಂದ್ರಸ್ವಾಮಿ ಪ್ರದಾನ ಮಾಡಲಿದ್ದು, ಪ್ರಗತಿಪರ ರೈತ ಶಿವು ಬನ್ನಹಳ್ಳಿ ಅವರಿಗೆ ರಾಜ್ಯ ಒಕ್ಕಲಿಗರ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ.ಎಸ್.ಆತ್ಮಾನಂದ ಅವರು ಅರಸಮ್ಮ ಮೆಣಸೇಗೌಡ ಕೃಷಿ ಪ್ರಶಸ್ತಿ ಪ್ರದಾನ ಮಾಡುವರು. ಪ್ರಶಸ್ತಿ ಪುರಸ್ಕೃತರನ್ನು ಕುರಿತು ನಿವೃತ್ತ ಪ್ರಾಂಶುಪಾಲ ಡಾ.ಮ.ರಾಮಕೃಷ್ಣ ಮಾತನಾಡುವರು. ಡಾ.ಎಸ್.ಬಿ.ಶಂಕರೇಗೌಡ ನುಡಿಹಾರೈಕೆ ಮಾಡಲಿದ್ದಾರೆ ಎಂದರು.

ಲೋಕೇಶ್ ಚಂದಗಾಲು ಮಾತನಾಡಿ, ಎಂ.ಶ್ರೀನಿವಾಸ್ ಅವರು ೭೫ನೇ ವಸಂತಕ್ಕೆ ಕಾಲಿಡುತ್ತಿರುವ ಸಮಯದಲ್ಲಿ ೬೫೦ ಪುಟಗ ಗ್ರಂಥವನ್ನು ಹೊರತರಲಾಗುತ್ತಿದೆ. ನಾನು ಮತ್ತು ಡಾ.ಎಸ್.ಶಿವರಾಮು ಸಂಪಾದಕತ್ವದಲ್ಲಿ ಶ್ರೀನಿಧಿ ಅಭಿನಂದನಾ ಗ್ರಂಥವನ್ನು ರಚಿಸಿದ್ದೇವೆ. ಅಭಿನಂದನಾ ಗ್ರಂಥದಲ್ಲಿ ಮೂರು ವಿಭಾಗಗಳಿದ್ದು ಮೊದಲ ಭಾಗದಲ್ಲಿ ಎಂ.ಶ್ರೀನಿವಾಸ್ ವ್ಯಕ್ತಿಚಿತ್ರ, ಎರಡನೇ ಭಾಗದಲ್ಲಿ ಒಡನಾಡಿಗಳ ನುಡಿನಮನ, ಮೂರನೇ ಭಾಗದಲ್ಲಿ ಮಂಡ್ಯ ಜಿಲ್ಲೆ ಕಂಡ ನಾಯಕರನ್ನು ಪರಿಚಯಿಸಲಾಗಿದೆ. ಇದೊಂದು ಸಂಶೋಧನಾ ವಿವರವಾಗಿರದೆ ಪರಿಚಯಾತ್ಮಕ ವಿವರಗಳನ್ನು ನೀಡಲಾಗಿದೆ. ಈ ವಿವರಗಳನ್ನೆಲ್ಲಾ ಅನೇಕ ಮೂಲಗಳು, ಪರಿಣಿತ ಲೇಖಕರಿಂದ ಸಂಗ್ರಹಿಸಿರುವುದಾಗಿ ವಿವರಿಸಿದರು.ಪ್ರಶಸ್ತಿ ವಿಜೇತರ ಪರಿಚಯ

ಡಾ.ತುಕಾರಾಮ್

ಮೈಸೂರಿನ ರಾಜ್ಯ ಸಂಪನ್ಮೂಲ ಕೇಂದ್ರದ ನಿರ್ದೇಶಕರಾಗಿ ಅಕ್ಷರ ಲೋಕ, ಸಕಾಲ ಮಾಸ ಪತ್ರಿಕೆಗಳ ಗೌರವ ಸಂಪಾದಕರಾಗಿ ವರ್ತಮಾನದ ವಿದ್ಯಮಾನಗಳಿಗೆ ಸ್ಪಂದಿಸುತ್ತಾ, ಜನಮುಖಿ ಬರಹಗಳಿಗೆ ವೇದಿಕೆ ಕಲ್ಪಿಸಿದ್ದಾರೆ. ೯೦ರ ದಶಕದಲ್ಲಿ ರಾಜ್ಯಾದ್ಯಂತ ನಡೆದ ಸಾಕ್ಷರತಾ ಆಂದೋಲನದಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಸಾಕ್ಷರತೆಯ ಪಠ್ಯಗಳ ವಿನ್ಯಾಸ, ನವ ಸಾಕ್ಷರರ ಸಾಹಿತ್ಯ ಹಾಗೂ ತರಬೇತಿಯಲ್ಲಿ ಪಾಲ್ಗೊಂಡು ಅನನ್ಯ ಕೊಡುಗೆ ನೀಡಿದ್ದಾರೆ. ಕೆರೆ ನೆರೆಯ ಊರು ಕಥಾಸಂಕಲನ, ಆ ಮರದ ನೆಲೆ ಕಿರು ಕಾದಂಬರಿ ಜೊತೆಗೆ ಸಾಕ್ಷರಧಾರೆ, ಸಮಾನತೆಯ ಕನಸು ಕಾಣುತ್ತಾ. ಜೀವ ಕಾರುಣ್ಯದ ಕಿರಣಗಳು ಮುಂತಾದ ಹತ್ತು ಹಲವು ಕೃತಿಗಳನ್ನು ರಚಿಸಿದ್ದಾರೆ. ಇವರಿಗೆ ನೀಡುತ್ತಿರುವ ಪ್ರಶಸ್ತಿಯು ೨೫ ಸಾವಿರ ರು. ನಗದು, ಪ್ರಶಸ್ತಿ ಫಲಕವನ್ನು ಒಳಗೊಂಡಿದೆ.

ಶಿವು ಬನ್ನಹಳ್ಳಿ

ಮದ್ದೂರಿನ ಬನ್ನಹಳ್ಳಿ ಗ್ರಾಮದ ಶಿವು ಬನ್ನಹಳ್ಳಿ ನೈಸರ್ಗಿಕ ಕೃಷಿಯಲ್ಲಿ ತೊಡಗಿದ್ದಾರೆ. ನಾಟಿ ಹಸುವನ್ನು ಸಾಕುವುದರ ಮೂಲಕ ನೈಸರ್ಗಿಕ ಕೃಷಿ೦ ಮಾಡುತ್ತಾ ಜೀವಾಮೃತ ಬಳಸಿಕೊಂಡು ಕೃಷಿಗೆ ಕಾಯಕಲ್ಪ ನೀಡಿದ್ದಾರೆ. ಬಹು ಬೆಳೆಗಳಿಗೆ ಮಹತ್ವ ನೀಡುತ್ತಾ ಸಮಗ್ರ ಕೃಷಿ ನೀತಿಯನ್ನು ಅಳವಡಿಸಿಕೊಂಡಿದ್ದಾರೆ. ಇವರ ಭೂಮಿಯಲ್ಲಿ ವಿವಿಧ ಹಣ್ಣಿನ ಗಿಡಗಳು, ಚಕ್ಕೆ, ಲವಂಗ, ಡ್ರ್ಯಾಗನ್ ಹಣ್ಣುಗಳು, ಮಾವು, ಉತ್ತರ ಗೆಣಸು ಮೊದಲಾದವನ್ನು ಬೆಳೆದಿದ್ದಾರೆ. ಇವರಿಗೆ ನೀಡುತ್ತಿರುವ ಪ್ರಶಸ್ತಿಯ ೨೫ ಸಾವಿರ ರು. ನಗದು, ಪ್ರಶಸ್ತಿ ಫಲಕವನ್ನು ಒಳಗೊಂಡಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮುಡಾ ಕೇಸಲ್ಲಿ ಸಿಎಂಗೆ ಬಿಗ್‌ ರಿಲೀಫ್‌
ಬಿಲ್ಡರ್‌ ಮನೇಲಿ 18 ಕೋಟಿ ಮೌಲ್ಯದಚಿನ್ನ ಕದ್ದವರ ಪತ್ತೆಗೆ 3 ವಿಶೇಷ ತಂಡ