ಕನ್ನಡಪ್ರಭ ವಾರ್ತೆ ಮೇಲುಕೋಟೆ
ಬ್ರಹ್ಮೋತ್ಸವದ 4ನೇ ತಿರುನಾಳ್ ಅಂಗವಾಗಿ ಮಾ.21ರ ಶ್ರೀ ಚೆಲುವನಾರಾಯಣಯ ವೈರಮುಡಿ ಉತ್ಸವ ನಡೆಯಲಿದೆ.ಗುರುವಾರ ರಾತ್ರಿ 8 ಗಂಟೆಗೆ ಶ್ರೀದೇವಿಭೂದೇವಿ ಸಮೇತ ಗರುಢಾರೂಢನಾದ ಚೆಲುವನಾರಾಯಣನಿಗೆ ಅಪೂರ್ವ ನಾಗಮಣಿ ಇರುವ ವೈರಮುಡಿ ಕಿರೀಟಧಾರಣೆ ಮಹೋತ್ಸವ ನಡೆಯಲಿದೆ.
ಮಹಾ ಮಂಗಳಾರತಿ ನೆರವೇರಿಸಿ ದೇವಾಲಯದಿಂದ ರಾತ್ರಿ 8.30ಕ್ಕೆ ಆರಂಭವಾಗುವ ವೈರಮುಡಿ ಉತ್ಸವ ಬೆಳಗಿನ 3-30ರ ಸುಮಾರಿಗೆ ವಾಹನೋತ್ಸವ ಮಂಟಪದಲ್ಲಿ ಮಕ್ತಾಯವಾಗಲಿದೆ. ನಂತರ ವಜ್ರಖಚಿತ ರಾಜಮುಡಿ ಧರಿಸಲಾಗುತ್ತದೆ.ಇದಕ್ಕೂ ಮುನ್ನ ವೈರಮುಡಿ ಉತ್ಸವದ ಅಂಗವಾಗಿ ಸಂಜೆ 5ಕ್ಕೆ ಮಂಡ್ಯದಿಂದ ಬರುವ ವೈರಮುಡಿ- ರಾಜಮುಡಿ ತಿರುವಾಭರಣ ಪೆಟ್ಟಿಗೆಗಳನ್ನು ಬಂಗಾರದ ಪಲ್ಲಕ್ಕಿಯಲ್ಲಿರಿಸಿ ಮೆರವಣಿಗೆ ಮಾಡಲಾಗುವುದು. ಸಂಜೆ 6.30ಕ್ಕೆ ರಾಜಮುಡಿ ಕಿರೀಟದ ಪಾರ್ಕಾವಣೆ, 7.45ರ ಸುಮಾರಿಗೆ ಗರುಡದೇವನ ಮೆರವಣಿಗೆ ನಂತರ 8 ಮಹಾಮಂಗಳಾರತಿ ಯೊಂದಿಗೆ ವೈರಮುಡಿ ಉತ್ಸವ ಮೆರವಣಿಗೆ ಆರಂಭವಾಗಲಿದೆ. ತಡರಾತ್ರಿ 3-30ಕ್ಕೆ ರಾಜಮುಡಿ ಉತ್ಸವ ಜರುಗಲಿದೆ.
ಇದಕ್ಕೂ ಮುನ್ನ ಮಂಡ್ಯಜಿಲ್ಲಾ ಖಜಾನೆಯಲ್ಲಿರುವ ವೈರಮುಡಿ ರಾಜಮುಡಿ ತಿರುವಾಭರಣ ಪೆಟ್ಟಿಗೆಗಳನ್ನು ಜಿಲ್ಲಾ ಮಟ್ಟದ ಅಧಿಕಾರಿಗಳ ಸಮ್ಮುಖದಲ್ಲಿ ಪೂಜೆ ಸಲ್ಲಿಸಿ ಹಸ್ತಾಂತರ ಮಾಡಲಾಗುತ್ತದೆ. ನಂತರ ದಾರಿಯುದ್ಧಕ್ಕೂ ಗ್ರಾಮಸ್ಥರು ಆಭರಣಗಳಿಗೆ ವಿಶೇಷ ಪೂಜೆ ಸಲ್ಲಿಸಲಿದ್ದಾರೆ.ಮೇಲುಕೋಟೆಗೆ ತಂದ ನಂತರ ಇಲ್ಲಿನ ವೀರಾಂಜನೇಯಸ್ವಾಮಿ ಸನ್ನಿಧಿಯಲ್ಲಿ ಪೂಜೆಮಾಡಿ ಚಿನ್ನದಪಲ್ಲಕ್ಕಿಯಲ್ಲಿ ಮೆರವಣಿಗೆಯ ಮೂಲಕ ದೇಗುಲಕ್ಕೆ ತರಲಾಗುತ್ತದೆ. ವೈರಮುಡಿ ಪೆಟ್ಟಿಗೆಗೆ ಮಂಡ್ಯದ ಲಕ್ಷ್ಮೀಜನಾರ್ಧನಸ್ವಾಮಿ ಸನ್ನಿಧಿಯಲ್ಲಿ ಪ್ರಥಮ ಪೂಜೆ ನಡೆದರೆ, ದೇವಾಲಯದ ಮುಂಭಾಗ ಯತಿರಾಜದಾಸರ್ ಗುರುಪೀಠದಿಂದ ಕೊನೆ ಪೂಜೆ ನಡೆಯಲಿದೆ. ನಂತರ ಸ್ಥಾನೀಕರು, ಅರ್ಚಕ, ಪರಿಚಾರಕರಿಗೆ ಪಾರ್ಕಾವಣೆ ಮಾಡಿ ಹಸ್ತಾಂತರ ಮಾಡಲಾಗುತ್ತದೆ.
ಭಕ್ತರನ್ನು ಆಕರ್ಷಿಸುತ್ತಿರುವ ದೀಪಾಲಂಕಾರ:ವೈರಮುಡಿ ಉತ್ಸವದ ಅಂಗವಾಗಿ ಹಾಕಲಾಗಿರುವ ಸುಮಾರು 2 ಕಿ.ಮೀ ಮುಖ್ಯರಸ್ತೆಗೆ ಜಕ್ಕನಹಳ್ಳಿಯಿಂದ ಮೇಲುಕೋಟೆವರೆಗೆ ದೀಪಾಲಂಕಾರದಿಂದ ಬೆಟ್ಟ, ಕಲ್ಯಾಣಿ, ದೇವಾಲಯ ಹಾಗೂ ಉತ್ಸವ ಬೀದಿಗಳು ಕಂಗೊಳಿಸುತ್ತಿವೆ. ಭಕ್ತರನ್ನು ಆಕರ್ಷಿಸುತ್ತಿವೆ. 8 ಕಡೆ ಉತ್ಸವ ಬೀದಿಗಳಲ್ಲಿ ಎಇಡಿ ಪರದೆ ಅಳವಡಿಸಲಾಗಿದೆ. ಮೇಲುಕೋಟೆಗೆ ಬರಲು ಭಕ್ತರಿಗೆ ಮಂಡ್ಯ, ಮೈಸೂರು, ಹಾಸನ, ಬೆಂಗಳೂರು, ನಾಗಮಂಗಲ, ಪಾಂಡವಪುರ ಜಕ್ಕನಹಳ್ಳಿಯಿಂದ ವಿಶೇಷ ಬಸ್ ಸೌಕರ್ಯ ಕಲ್ಪಿಸಲಾಗಿದೆ.