ನ.10 ರಂದು ಚಿತ್ರದುರ್ಗದಲ್ಲಿ ಅದ್ಧೂರಿ ಟಿಪ್ಪು ಜಯಂತಿ

KannadaprabhaNewsNetwork | Published : Oct 29, 2024 1:09 AM

ಸಾರಾಂಶ

ಚಿತ್ರದುರ್ಗ: ಮೈಸೂರು ಹುಲಿ ಟಿಪ್ಪುಸುಲ್ತಾನ್‍ರವರ 275ನೇ ಜಯಂತಿ ಹಾಗೂ ಕನ್ನಡ ರಾಜ್ಯೋತ್ಸವವನ್ನು ನವೆಂಬರ್ ಹತ್ತರಂದು ಚಿತ್ರದುರ್ಗದಲ್ಲಿ ವಿಜೃಂಭಣೆಯಿಂದ ಆಚರಿಸುವ ತೀರ್ಮಾನ ಕೈಗೊಳ್ಳಲಾಗಿದೆ.

ಚಿತ್ರದುರ್ಗ: ಮೈಸೂರು ಹುಲಿ ಟಿಪ್ಪುಸುಲ್ತಾನ್‍ರವರ 275ನೇ ಜಯಂತಿ ಹಾಗೂ ಕನ್ನಡ ರಾಜ್ಯೋತ್ಸವವನ್ನು ನವೆಂಬರ್ ಹತ್ತರಂದು ಚಿತ್ರದುರ್ಗದಲ್ಲಿ ವಿಜೃಂಭಣೆಯಿಂದ ಆಚರಿಸುವ ತೀರ್ಮಾನ ಕೈಗೊಳ್ಳಲಾಗಿದೆ. ನಗರ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ರಾಜ್ಯ ಟಿಪ್ಪುಸುಲ್ತಾನ್ ಅಭಿಮಾನಿಗಳ ಮಹಾವೇದಿಕೆ ರಾಜ್ಯಾಧ್ಯಕ್ಷ ಟಿಪ್ಪುಖಾಸಿಂ ಆಲಿ ಅಧ್ಯಕ್ಷತೆಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು.

ಈ ವೇಳೆ ಮಾತನಾಡಿದ ಟಿಪ್ಪು ಖಾಸಿಂ ಆಲಿ, ವಿಜೃಂಭಣೆಯಿಂದ ಆಚರಿಸಲು ಎಲ್ಲಾ ಜಾತಿ, ಧರ್ಮದವರು ಹಾಗೂ ಮಠಾಧೀಶರುಗಳನ್ನು ಆಹ್ವಾನಿಸೋಣ. ಟಿಪ್ಪು ಕೇವಲ ಒಂದು ಜಾತಿ ಧರ್ಮಕ್ಕೆ ಸೀಮಿತವಲ್ಲ. ವಿಶ್ವಾದ್ಯಂತ ಟಿಪ್ಪು ಇತಿಹಾಸವಿದೆ. ಪಠ್ಯ ಪುಸ್ತಕದಲ್ಲಿ ಟಿಪ್ಪು ಇತಿಹಾಸ ಸೇರ್ಪಡೆ, ಟಿಪ್ಪು ಪ್ರಾಧಿಕಾರ ರಚನೆ ಹಾಗೂ ಸಂಶೋಧನಾ ಕೇಂದ್ರ, ಯಾವುದಾದರೂ ಒಂದು ವಿಶ್ವವಿದ್ಯಾಲಯಕ್ಕೆ ಟಿಪ್ಪು ಹೆಸರಿಡುವಂತೆ ಅನೇಕ ವರ್ಷಗಳಿಂದಲೂ ಸರ್ಕಾರಕ್ಕೆ ಒತ್ತಾಯಿಸುತ್ತ ಬರುತ್ತಿದ್ದೇವೆ ಎಂದರು.

ಮೆರವಣಿಗೆ ನಡೆಸುವುದಕ್ಕೆ ಮೊದಲು ಜಿಲ್ಲಾಡಳಿತದ ಅನುಮತಿ ಕೇಳೋಣ, ಕೊಟ್ಟರೆ ಮೆರವಣಿಗೆ ಇಲ್ಲದಿದ್ದರೆ ನೇರವಾಗಿ ರಂಗಮಂದಿರಕ್ಕೆ ಎಲ್ಲರೂ ತೆರಳಿ ಜಯಂತಿ ಹಾಗೂ ಕನ್ನಡ ರಾಜ್ಯೋತ್ಸವ ಆಚರಿಸೋಣ. ಬುದ್ಧಿ ಜೀವಿಗಳಿಂದ ಟಿಪ್ಪು ಇತಿಹಾಸವನ್ನು ಪರಿಚಯಿಸುವ ಕೆಲಸ ಮಾಡೋಣ. ಇದಕ್ಕೆ ಎಲ್ಲರ ಸಹಕಾರ ಮುಖ್ಯ ಎಂದು ಕೋರಿದರು. ಹಿರಿಯ ನ್ಯಾಯವಾದಿ ಬಿ.ಕೆ.ರಹಮತ್‍ವುಲ್ಲಾ ಮಾತನಾಡಿ, ಪ್ರಜಾಪ್ರಭುತ್ವದಲ್ಲಿ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಅತ್ಯಂತ ಪ್ರಬಲವಾದವು. ಮೆರವಣಿಗೆ ಮಾಡುವುದಾದರೆ ಎಲ್ಲಿಯೂ ಶಾಂತಿಗೆ ಭಂಗವಾಗಬಾರದು. ಕಾನೂನನ್ನು ಗೌರವಿಸಬೇಕಿದೆ. ಪರಿಸ್ಥಿತಿ ಸೂಕ್ಷ್ಮವಾಗಿರುವುದರಿಂದ ಹೊಳಲ್ಕೆರೆ ರಸ್ತೆಯ ಕನಕ ವೃತ್ತದಿಂದ ಮೆರವಣಿಗೆ ಮಾಡುವ ಬದಲು ಪ್ರವಾಸಿ ಮಂದಿರದಿಂದ ಮುಖಂಡರುಗಳೆಲ್ಲಾ ಸೇರಿ ತರಾಸು ರಂಗಮಂದಿರಕ್ಕೆ ಮೆರವಣಿಗೆ ಮೂಲಕ ಹೊರಟು ವೇದಿಕೆ ಕಾರ್ಯಕ್ರಮ ಆಚರಿಸೋಣ ಎಂದು ಹೇಳಿದರು.

ದೇಶಕ್ಕಾಗಿ ತನ್ನ ಮಕ್ಕಳನ್ನು ಒತ್ತೆಯಿಟ್ಟು ಬ್ರಿಟೀಷರ ವಿರುದ್ಧ ಹೋರಾಡಿದ ಟಿಪ್ಪು ಹೆಸರಿಗೆ ಪವಿತ್ರತೆಯಿದೆ. ಅದಕ್ಕೆ ಕಳಂಕ ಬರದಂತೆ ನಡೆದುಕೊಳ್ಳೋಣ ಎಂದರು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ.ತಾಜ್‍ಪೀರ್ ಮಾತನಾಡಿ, ಟಿಪ್ಪುಸುಲ್ತಾನ್‍ರವರನ್ನು ಕೇವಲ ಮುಸ್ಲಿಂ ಜನಾಂಗಕ್ಕೆ ಮಾತ್ರ ಸೀಮಿತಗೊಳಿಸಬಾರದು. ಮೈಸೂರು ಮಹಾರಾಜರ ಕಾಲದಲ್ಲಿ ಆಡಳಿತ ನಡೆಸಿದ ಟಿಪ್ಪು ರಾಜ್ಯವನ್ನು ವಿಸ್ತರಿಸಿ ಉತ್ತಮ ಆಡಳಿತ ಕೊಟ್ಟಿದ್ದಾರೆ. ಅನೇಕ ಹಿಂದೂ ದೇವಾಲಯಗಳ ಜೀರ್ಣೋದ್ಧಾರ ಕೂಡ ಇವರ ಕಾಲದಲ್ಲಿ ಆಗಿದೆ. ಟಿಪ್ಪು ಶೃಂಗೇರಿ ಶಾರದಾಂಭೆಯ ಪರಮ ಭಕ್ತರಾಗಿದ್ದರು ಎಂದು ಸ್ಮರಿಸಿದರು. ಜಯಂತಿಯಲ್ಲಿ ಕುಣಿದು ಕುಪ್ಪಳಿಸುವ ಬದಲು ಟಿಪ್ಪು ವಿಚಾರ ತಿಳಿಸುವವರಿಗೆ ವೇದಿಕೆಯಲ್ಲಿ ಹೆಚ್ಚಿನ ಸಮಯ ನೀಡೋಣ. ಮೆರವಣಿಗೆಗೆ ಬದಲಾಗಿ ಪಾದಯಾತ್ರೆ ನಡೆಸಿ ನಗರದಲ್ಲಿರುವ ಎಲ್ಲಾ ಪ್ರತಿಮೆಗಳಿಗೂ ಹಾರ ಹಾಕಿ ಸೌಹಾರ್ದತೆ ಮೆರೆಯುವುದು ಒಳ್ಳೆಯದು ಎಂದು ಸಲಹೆ ನೀಡಿದರು. ಗ್ಯಾರಂಟಿ ಅನುಷ್ಠಾನಗಳ ಸಮಿತಿ ಅಧ್ಯಕ್ಷ ಶಿವಣ್ಣ ಮಾತನಾಡಿ, ಟಿಪ್ಪುಸುಲ್ತಾನ್ ಕನ್ನಡ ವಿರೋಧಿ ಎಂದು ಕೆಲವರು ಅಪಪ್ರಚಾರ ಮಾಡುತ್ತಿದ್ದಾರೆ. ಹಾಗಾಗಿ ಅತಿ ಜಾಗರೂಕತೆಯಿಂದ ಟಿಪ್ಪು ಜಯಂತಿಯನ್ನು ಆಚರಿಸಬೇಕಿದೆ. ಒಂದು ವೇಳೆ ಮೆರವಣಿಗೆ ಮಾಡಿದ್ದೇ ಆದರೆ ಏನಾದರೂ ಚಿಕ್ಕಪುಟ್ಟ ಅನಾಹುತಗಳು ಸಂಭವಿಸಿದರೆ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರದ ಮೇಲೆ ಕೋಮುವಾದಿ ಬಿಜೆಪಿಯವರು ಅಪವಾದ ಹಾಕುತ್ತಾರೆ ಎಂದರು.ಎಸ್‌ಡಿಪಿಐ ಜಿಲ್ಲಾ ಉಪಾಧ್ಯಕ್ಷ ಪಿ.ಸುಬಾನುಲ್ಲಾ, ಎ.ಜಾಕೀರ್ ಹುಸೇನ್, ನಗರಸಭೆ ಮಾಜಿ ಅಧ್ಯಕ್ಷ ಮಹಮದ್ ಅಹಮದ್ ಪಾಷ, ಎಚ್.ಆರ್.ಮಹಮದಿ, ಜಮೀರ್, ಹನೀಸ್, ದಲಿತ ಮುಖಂಡ ಬಿ.ರಾಜಣ್ಣ, ಬೀದಿ ಬದಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ಸಮೀವುಲ್ಲಾ, ವೀರಶೈವ ಲಿಂಗಾಯತ ಯುವ ವೇದಿಕೆ ಅಧ್ಯಕ್ಷ ಮಂಜುನಾಥ್, ನಿವೃತ್ತ ಡಿವೈಎಸ್ಪಿ ಅಬ್ದುಲ್ ರೆಹಮಾನ್, ಮುದಸಿರ್ ನವಾಜ್, ಫೈಲ್ವಾನ್ ಆಫೀಸ್, ಫೈಲ್ವಾನ್ ಸದ್ದಾಂ ಇದ್ದರು.

Share this article