ಅಭ್ಯಾಸಿ ಟ್ರಸ್ಟ್ ಅಧ್ಯಕ್ಷ ಕಿರಣ್ ಗಿರ್ಗಿ ಮಾಹಿತಿ । ಅಭ್ಯಾಸಿ ಕನ್ನಡ ಹಬ್ಬ ಸಮಾರಂಭ । ಜೆ.ಜಾಯ್‌ಫುಲ್ ಜಯಶೇಖರ್ ಪ್ರಶಸ್ತಿಗೆ ಆಯ್ಕೆ
ಕನ್ನಡಪ್ರಭ ವಾರ್ತೆ ಚಾಮರಾಜನಗರಅಭ್ಯಾಸಿ ಟ್ರಸ್ಟ್ ಸಂಸ್ಥೆಯು ಅಭ್ಯಾಸಿ ಕನ್ನಡ ಹಬ್ಬ ಮತ್ತು ಅಭ್ಯಾಸಿ ಶ್ರೇಷ್ಠ ಕನ್ನಡಿಗ ಪ್ರಶಸ್ತಿ ಪ್ರದಾನ ಸಮಾರಂಭವನ್ನು ನ. 23ರಂದು ಶನಿವಾರ ಸಂಜೆ 4 ಗಂಟೆಗೆ ವರನಟ ಡಾ. ರಾಜ್‌ಕುಮಾರ್ ಜಿಲ್ಲಾ ರಂಗಮಂದಿರದಲ್ಲಿ ಆಯೋಜಿಸಲಾಗಿದೆ ಎಂದು ಅಭ್ಯಾಸಿ ಟ್ರಸ್ಟ್ ಅಧ್ಯಕ್ಷ ಕಿರಣ್ ಗಿರ್ಗಿ ತಿಳಿಸಿದರು.
ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಭ್ಯಾಸಿ ಟ್ರಸ್ಟ್ ವತಿಯಿಂದ ಅಭ್ಯಾಸಿ ಕನ್ನಡ ಹಬ್ಬ ಎಂಬ ಹೆಸರಿನ ಕಾರ್ಯಕ್ರಮವನ್ನು ರೂಪಿಸಿ, ವಿವಿಧ ಕ್ಷೇತ್ರದಲ್ಲಿ ಕನ್ನಡ ನಾಡಿಗೆ ಸೇವೆ ಸಲ್ಲಿಸಿರುವ 60 ವರ್ಷ ಮೇಲ್ಪಟ್ಟ ಹಿರಿಯ ಸಾಧಕರನ್ನು ಸಂಸ್ಥೆಯು ಗುರುತಿಸಿ ಅಭ್ಯಾಸಿ ಶ್ರೇಷ್ಠ ಕನ್ನಡಿಗ ಪ್ರಶಸ್ತಿಯನ್ನು ನೀಡಲಾಗುತ್ತಿದೆ ಎಂದು ತಿಳಿಸಿದರು.ಅಭ್ಯಾಸಿ ಶ್ರೇಷ್ಠ ಕನ್ನಡಿಗ ಪ್ರಶಸ್ತಿಯು 5 ಸಾವಿರ ರು. ನಗದು ಹಾಗೂ ಪ್ರಶಸ್ತಿ ಫಲಕವನ್ನು ಒಳಗೊಂಡಿರುತ್ತದೆ. ಪ್ರಥಮವಾಗಿ ಚಾಮರಾಜನಗರ ಜಿಲ್ಲೆಯ ಸಂಗೀತ ವಿದ್ವಾಂಸರು ಹಾಗೂ ಗ್ರಾಮೀಣ ರಂಗಭೂಮಿ ನಿರ್ದೇಶಕ ಜೆ.ಜಾಯ್‌ಫುಲ್ ಜಯಶೇಖರ್ ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಅಭ್ಯಾಸಿ ಕನ್ನಡ ಹಬ್ಬವನ್ನು ಮೈಸೂರು ರಂಗಾಯಣದ ಹಿರಿಯ ರಂಗನಟರು ಹಾಗೂ ರಂಗ ನಿರ್ದೇಶಕ ಹುಲುಗಪ್ಪ ಕಟೀಮನಿಯವರು ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಾಹಿತಿ ಹಾಗೂ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಸಿ.ಮಂಜುನಾಥ ಪ್ರಸನ್ನ ವಹಿಸಲಿದ್ದಾರೆ ಎಂದು ಹೇಳಿದರು.
ಮೈಸೂರಿನ ನಿನಾದ್ ಮ್ಯೂಸಿಕಲ್ ಟ್ರಸ್ಟ್ ಸಂಸ್ಥಾಪಕ ಹಾಗೂ ಸಂಗೀತ ನಿರ್ದೇಶಕ ಎ.ಎಸ್.ಪ್ರಸನ್ನಕುಮಾರ್ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಬಿ.ಎಸ್.ವಿ.ಪ್ರತಿಷ್ಠಾನದ ಬಿ.ವಿ.ವೆಂಕಟನಾಗಪ್ಪಶೆಟ್ಟಿ, ವಕೀಲರಾದ ಪುಟ್ಟಸ್ವಾಮಿ ರಾಮಸಮುದ್ರ, ಸಾಹಿತಿ ಕೆ.ಶ್ರೀಧರ್ ಆಗಮಿಸಲಿದ್ದಾರೆ ಎಂದರು.ಕಾರ್ಯಕ್ರಮದಲ್ಲಿ ಅಭ್ಯಾಸಿ ಟ್ರಸ್ಟ್ ಕಲಾವಿದರು ಹಾಗೂ ವಿದ್ಯಾರ್ಥಿಗಳಿಂದ ಕನ್ನಡ ಗೀತ ಗಾಯನ, ಕೀಬೋರ್ಡ್ ವಾದ್ಯಸಂಗೀತ, ಡಾ.ಎಂ.ಎಸ್.ಮೂರ್ತಿ ಅವರ ‘ಯಶೋಧರೆ ಮಲಗಿರಲಿಲ್ಲ’ ನಾಟಕ ಮತ್ತು ಮಂಜು ಕೋಡಿಉಗನೆಯವರ ‘ಕಂಡಾಯದ ಕೋಳಿ’ ನಾಟಕ ಪ್ರದರ್ಶನಗಳು ನಡೆಯಲಿದೆ ಎಂದರು.
ನಾಟಕದಲ್ಲಿ ನಿರೂಪಣೆಯನ್ನು ಕಲೆ ನಟರಾಜ್, ಗಾಯನ ಎಸ್.ಜಿ.ಮಹಾಲಿಂಗ್ ಗಿರ್ಗಿ, ಕೊಂಬು ಕಹಳೆ ರವಿಚಂದ್ರಪ್ರಸಾದ್, ಸಂಗೀತ ಸಾಂಗತ್ಯ ಕೃಷ್ಣ ಚೈತನ್ಯ, ಪ್ರಸಾಧನ ಬೆಳಕು ರಂಗನಾಥ ವಿ, ರಂಗಪರಿಕರ ಮಧುಸೂದನ್ ಹೊಸೂರು, ಸಂಗೀತ ಮತ್ತು ನಿರ್ದೇಶನ ಕಿರಣ್ ಗಿರ್ಗಿ ಮಾಡಲಿದ್ದಾರೆ ಎಂದು ಮಾಹಿತಿ ನೀಡಿದರು.ಪ್ರವೇಶ ಉಚಿತವಿದ್ದು ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಸಹಕಾರ ನೀಡಬೇಕಾಗಿ ಮನವಿ ಮಾಡಿದರು.
ಈ ವೇಳೆ ರಂಗಕಲಾವಿದರಾದ ನಂದಿನಿ ರವಿಕುಮಾರ್, ರವಿಚಂದ್ರಪ್ರಸಾದ್ ಕಹಳೆ, ಮಿಮಿಕ್ರಿ ಮಲ್ಲಣ್ಣ ಇದ್ದರು.