ಕನ್ನಡಪ್ರಭ ವಾರ್ತೆ ಚನ್ನಪಟ್ಟಣ
ಸಿಂ.ಲಿಂ ನಾಗರಾಜು ಪ್ರತಿಷ್ಠಾನ ಹಾಗೂ ಕರ್ನಾಟಕ ರಕ್ಷಣಾ ವೇದಿಕೆ ಸಂಯುಕ್ತಾಶ್ರಯದಲ್ಲಿ ನಗರದ ಶತಮಾನೋತ್ಸವ ಭವನದಲ್ಲಿ ಡಿ.೧೪ರ ಶನಿವಾರ ಬೆಳಗ್ಗೆ ೧೧ ಗಂಟೆಗೆ ದಿವಂಗತ ಸಿಂ.ಲಿಂ ನಾಗರಾಜು ಸಂಸ್ಮರಣೆ, ಪ್ರತಿಭಾ ಪುರಸ್ಕಾರ ಹಾಗೂ ಸಿಂ,ಲಿಂ. ಸೇವಾ ರತ್ನ ಪ್ರಶಸ್ತಿ ಪ್ರದಾನ ಸಮಾರಂಭ ಅಯೋಜಿಸಲಾಗಿದೆ ಎಂದು ಪ್ರತಿಷ್ಠಾನ ಅಧ್ಯಕ್ಷ ನಾಗವಾರ ಶಂಭೂಗೌಡ ತಿಳಿಸಿದರು.ನಗರದ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹೋರಾಟಗಾರ, ಸಹಕಾರಿ ಧುರೀಣ ಹಾಗೂ ಧೀಮಂತ ನಾಯಕರಾದ ಸಿಂ.ಲಿಂ ರವರ ಹೆಸರನ್ನು ಚಿರಸ್ಥಾಯಿಯಾಗಿ ಉಳಿಸಿಲು ಪ್ರತಿಷ್ಠಾನ ನಿರಂತರವಾಗಿ ಶ್ರಮಿಸುತ್ತಿದ್ದು, ಅವರ ಸಂಸ್ಮರಣೆ ಪ್ರಯುಕ್ತ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ತಾಲೂಕಿನ ಕನ್ನಡ ಅಭಿಮಾನಿಗಳು, ಸಿಂಲಿಂ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಈ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.
ಕ.ರ.ವೇ ರಾಜ್ಯ ಸಂಘಟನಾ ಕಾರ್ಯದರ್ಶಿ ಎಂ.ಎನ್.ಸತ್ಯನಾರಾಯಣ ಹಾಗೂ ರಾಮನಗರ ಜಿಲ್ಲಾಧ್ಯಕ್ಷ ಕಬ್ಬಾಳೇಗೌಡ ಸಮಾರಂಭದ ಬಗ್ಗೆ ಮಾಹಿತಿ ನೀಡಿ, ಸಿಂಲಿಂ ಜಿಲ್ಲೆಯ ಕನ್ನಡದ ಅಸ್ಮಿತೆ. ಅವರ ನೆನಪನ್ನು ಉಳಿಸುವುದು ನಮ್ಮ ವೇದಿಕೆಯ ಉದ್ದೇಶವಾಗಿದೆ. ಈ ಹಿನ್ನೆಲೆಯಲ್ಲಿ ಈ ಅರ್ಥಪೂರ್ಣ ಕಾರ್ಯಕ್ರಮಕ್ಕೆ ವೇದಿಕೆ ಸಹಭಾಗಿತ್ವ ವಹಿಸಿದೆ. ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಅನ್ನದಾನೇಶ್ವರ ಮಹಾ ಸ್ವಾಮೀಜಿ ಹಾಗೂ ಗೌಡಗೆರೆ ಶ್ರೀ ಚಾಮುಂಡೇಶ್ವರಿ ಬಸವಪ್ಪನವರ ಪುಣ್ಯಕ್ಷೇತ್ರದ ಧರ್ಮದರ್ಶಿ ಡಾ.ಮಲ್ಲೇಶ್ ಗುರೂಜಿ ಈ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಲಿದ್ದು, ಕ.ರ.ವೇ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಪ್ರತಿಷ್ಠಾನ ಕಾರ್ಯದರ್ಶಿ ಎಸ್.ಎನ್.ಆದರ್ಶ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಲಿದ್ದಾರೆ ಎಂದು ಮಾಹಿತಿ ನೀಡಿದರು.ಈ ವೇಳೆ ಪ್ರತಿಷ್ಠಾನ ಖಜಾಂಚಿ ಅಭಿಲಾಷ್, ಕರವೇ ತಾಲೂಕು ಅಧ್ಯಕ್ಷ ಹೊಪು ಸಾಗರ್, ಯುವಘಟಕದ ಅಧ್ಯಕ್ಷ ನಿತಿನ್, ಟ್ರಸ್ಟ್ ನಿರ್ದೇಶಕ ಸಿ.ಸುರೇಶ್, ಸತೀಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.