ಸುಳ್ವಾಡಿ ವಿಷ ಪ್ರಸಾದ ದುರಂತಕ್ಕೆ 6 ವರ್ಷ

KannadaprabhaNewsNetwork | Published : Dec 13, 2024 12:47 AM

ಸಾರಾಂಶ

ಸುಳ್ವಾಡಿ ವಿಷ ಪ್ರಸಾದ ದುರಂತ ಪ್ರಕರಣ ನಡೆದು ಆರು ವರ್ಷ ಕಳೆದರೂ ಚೇತರಿಸಿಕೊಳ್ಳದ ಸಂತ್ರಸ್ತರು ಬವಣೆ ಪಡುವಂತಾಗಿದೆ. ನಂಬಿಕೆಗೆ ಕೊಳ್ಳಿ ಇಟ್ಟ ಘಟನೆಯಿಂದ ಇಂದು ಕೂಡ ಮರುಗುತ್ತಿದ್ದಾರೆ.

ಜಿ.ದೇವರಾಜ ನಾಯ್ಡು

ಕನ್ನಡಪ್ರಭ ವಾರ್ತೆ ಹನೂರು

ಸುಳ್ವಾಡಿ ವಿಷ ಪ್ರಸಾದ ದುರಂತ ಪ್ರಕರಣ ನಡೆದು ಆರು ವರ್ಷ ಕಳೆದರೂ ಚೇತರಿಸಿಕೊಳ್ಳದ ಸಂತ್ರಸ್ತರು ಬವಣೆ ಪಡುವಂತಾಗಿದೆ. ನಂಬಿಕೆಗೆ ಕೊಳ್ಳಿ ಇಟ್ಟ ಘಟನೆಯಿಂದ ಇಂದು ಕೂಡ ಮರುಗುತ್ತಿದ್ದಾರೆ.

ರಾಷ್ಟ್ರಮಟ್ಟದಲ್ಲಿ ಅಷ್ಟೇ ಅಲ್ಲದೇ ಅಂತಾರಾಷ್ಟ್ರೀಯ ಮಟ್ಟದಲ್ಲೂ ಈ ಪೈಶಾಚಿಕ ಕೃತ್ಯ ಸದ್ದು ಮಾಡಿತ್ತು. ಬರೋಬ್ಬರಿ 150ಕ್ಕೂ ಅಧಿಕ ಮಂದಿ ಅಸ್ವಸ್ಥರಾಗಿ 17 ಮಂದಿ ಅಸುನೀಗಿದ್ದರು. ಜೀವ ಉಳಿಸಿಕೊಂಡು ಬಂದವರು ಕಳೆದ ಆರು ವರ್ಷಗಳಿಂದಲೂ ಸಹ ಅಂಗಾಂಗ ವೈಫಲ್ಯದಿಂದ ಇನ್ನೂ ಚೇತರಿಸಿಕೊಳ್ಳದೆ ಆಸ್ಪತ್ರೆಗಳಿಗೆ ಅಲೆಯುವಂತ ಪರಿಸ್ಥಿತಿ ಇದೆ. ವಿಷ ಪ್ರಸಾದ ತಿಂದು ಬದುಕುಳಿದರೂ ನರಳಾಟದ ಜೀವನವಾಗಿದ್ದು ಸಂತ್ರಸ್ತರ ಯಾತನೆ ಮುಂದುವರೆದಿದೆ.

ದೇವರ ನಂಬಿಕೆ ಅಲುಗಾಡಿಸಿದ ಘಟನೆ:

2018ರ ಡಿ‌.14 ರಂದು ಹನೂರು ತಾಲೂಕಿನ ಮಾರ್ಟಳ್ಳಿ ಗ್ರಾಪಂ ವ್ಯಾಪ್ತಿಯ ಸುಳ್ವಾಡಿ ಕಿಚ್ಚುಗುತ್ತಿ ಮಾರಮ್ಮನ ದೇವಾಲಯದಲ್ಲಿ ನಡೆದ ದುರ್ಘಟನೆಯಿಂದ ಬಿದರಹಳ್ಳಿ , ಎಂ.ಜಿ.ದೊಡ್ಡಿ, ಮಾರ್ಟಹಳ್ಳಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ದೇವರ ಪ್ರಸಾದಕ್ಕೆ ವಿಷ ಬೆರೆಸಿದ್ದ ಟೊಮೊಟೊ ಬಾತ್ ತಿಂದು 17 ಜನ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು. 150ಕ್ಕೂ ಹೆಚ್ಚು ಜನ ಈ ವಿಷ ಪ್ರಸಾದ ಘಟನೆಯಲ್ಲಿ ಮಾರಮ್ಮನ ಭಕ್ತರು ವಿವಿಧ ನೂನ್ಯತೆಗಳಿಂದ ಹಾಗೂ ಅಂಗಾಂಗ ವೈಫಲ್ಯಗಳಿಂದ ಕೊನೆಗೂ ಬದುಕುಳಿದು ಬಂದರು. ಅಂದಿನ ಕಹಿ ಘಟನೆಯಿಂದ ಇನ್ನು ಹೊರಬರದೆ ಇಲ್ಲಿನ ಜನತೆ ಒಂದಲ್ಲ ಒಂದು ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ.

ಪರಿಹಾರದ ನಿರೀಕ್ಷೆಯಲ್ಲಿ ಸಂತ್ರಸ್ತರು:

ವಿಷ ಪ್ರಸಾದ ದುರಂತದಲ್ಲಿ ಮೃತಪಟ್ಟವರಿಗೆ 2018 ಡಿ.24ರಂದು ಗ್ರಾಮಕ್ಕೆ ಅಂದಿನ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಭೇಟಿ ನೀಡಿ ಮೃತಪಟ್ಟವರ ಕುಟುಂಬಗಳಿಗೆ 2 ಎಕರೆ ಜಮೀನು ನಿವೇಶನ ಹಾಗೂ ಮನೆ ಕಟ್ಟಿ ಕೊಡುವುದಾಗಿ ಹೇಳಿದ್ದರು. ವಿಷ ಪ್ರಸಾದ ಸೇವಿಸಿ ಅಸ್ವಸ್ತಗೊಂಡಿದ್ದವರಿಗೆ ನೀಡಿದ್ದ ಪರಿಹಾರದ ಹಣ ವಿವಿಧ ಆರೋಗ್ಯದ ಸಮಸ್ಯೆಗಳ ಆಸ್ಪತ್ರೆ ಖರ್ಚಿಗೆ ಹಣ ಮುಗಿದು ಇನ್ನು ಗುಣಮುಖವಾಗದೆ ಪರದಾಡುವ ಸ್ಥಿತಿ ಗ್ರಾಮಗಳಲ್ಲಿ ನಿರ್ಮಾಣವಾಗಿದೆ. ಸರ್ಕಾರ ನಿವೇಶನ ಮತ್ತು ಮನೆ ಕಟ್ಟಿಸಿ ಕೊಡುವ ಭರವಸೆ ನೀಡಿದ್ದರು. ಆದರೆ ಇದುವರೆಗೂ ಭರವಸೆ ಭರವಸೆಯಾಗಿ ಉಳಿದಿರುವುದರಿಂದ ಸಂತ್ರಸ್ತರು ನೆರವಿನ ನಿರೀಕ್ಷೆಯಲ್ಲಿ ಇದ್ದಾರೆ.

6ನೇ ವರ್ಷದ ಶ್ರದ್ಧಾಂಜಲಿ ಸಭೆ:

ಕಿಚ್ಚುಗುತ್ತಿ ಮಾರಮ್ಮ ದೇವಸ್ಥಾನದ ವಿಷ ಪ್ರಸಾದ ಕೃತ್ಯದಲ್ಲಿ ಮೃತಪಟ್ಟವರಿಗೆ ಅವರ ಕುಟುಂಬಸ್ಥರು ಮತ್ತು ವಿವಿಧ ಗ್ರಾಮಸ್ಥರು ಸೇರಿ ಬಿದರಳ್ಳಿ ಗ್ರಾಮದಲ್ಲಿ 6ನೇ ವರ್ಷದ ಶ್ರದ್ಧಾಂಜಲಿ ಸಭೆಯನ್ನು 2024 ಡಿ.14 ರಶನಿವಾರ ಬೆಳಗ್ಗೆ 10.30 ಗಂಟೆಗೆ ಆಯೋಜನೆ ಮಾಡಲಾಗಿದ್ದು, ಇಲ್ಲಿನ ಸಂತ್ರಸ್ತರು ಮಾನಸಿಕವಾಗಿ ಆಘಾತ ಅಭದ್ರತೆ ಅವರ ಕುಟುಂಬ ವರ್ಗಕ್ಕೆ ಇನ್ನೂ ಕಾಡುತ್ತಿದೆ. ಈ ಸಂಕಷ್ಟದಿಂದ ಪಾರು ಮಾಡುವ ಅತ್ಯಂತ ಮಹತ್ವದ ಜವಾಬ್ದಾರಿ ನಾಗರಿಕ ಸಮಾಜ ವಾಗಿರುತ್ತದೆ. ಹೀಗಾಗಿ ಸರ್ಕಾರ ಇನ್ನು ಮುಂದಾದರೂ ಅಲ್ಲಿನ ಸಂತ್ರಸ್ತರಿಗೆ ಹೆಚ್ಚಿನ ಪರಿಹಾರ ನೀಡುವ ಮೂಲಕ ಗಮನ ಹರಿಸಬೇಕಾಗಿದೆ.

ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಮಾರ್ಟಳ್ಳಿ ಗ್ರಾಪಂ ಅಧ್ಯಕ್ಷ ಇಗ್ನಾಸಿ ಮುತ್ತು, ಉಪಾಧ್ಯಕ್ಷೆ ನದಿಯ ರಾಮಲಿಂಗಂ, ಡಿಎಸ್ಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿದ್ದರಾಜು, ವಿಚಾರವಾದಿ ಅಹಿಂದ ಮುಖಂಡರಾದ ಕೆ.ನಾಗರಾಜ್, ತಮಿಳುನಾಡು ವಕೀಲ ಸೇಂದಿಲ್, ಮಾಜಿ ತಾಪಂ ಅಧ್ಯಕ್ಷ ಶಾಂತಿ ಶಿವು, ಮಾಜಿ ಗ್ರಾಪಂ ಉಪಾಧ್ಯಕ್ಷರು ಹಾಗೂ ಹಾಲಿ ಸದಸ್ಯರಾದ ರಾಮಲಿಂಗಂ ಇನ್ನಿತರ ಮುಖಂಡರು ಸೇರಿದಂತೆ ಸಮಾಜ ಸೇವಕ ಪಿ.ಜಿ. ಮಣಿ ಇನ್ನಿತರರು ಕಾರ್ಯಕ್ರಮದಲ್ಲಿ ಭಾಗವಹಿಸುವರು. ಕಿಚ್ಚುಗುತ್ತಿ ಮಾರಮ್ಮನ ದೇವಾಲಯದಲ್ಲಿ ನಡೆದ ವಿಷಪ್ರಸಾದ ಘಟನೆಯಿಂದ ಇಡೀ ದೇಶವೇ ತಿರುಗು ನೋಡುವಂತಾಗಿತ್ತು. ಈ ಘಟನೆಯಿಂದ 17 ಜನ ಮೃತಪಟ್ಟು 150ಕ್ಕೂ ಹೆಚ್ಚು ಜನ ವಿವಿಧ ನೂನ್ಯತೆಗಳಿಂದ ದುರ್ಬಲರಾಗಿದ್ದರು. ಅಸಹಾಯಕರಾಗಿ ಇನ್ನೂ ಆಸ್ಪತ್ರೆಗೆ ಅಲೆಯುತ್ತಿದ್ದು, ಇಲ್ಲಿನ ಸಂತ್ರಸ್ತರಿಗೆ ನೀಡಿರುವ ಹಣ ಆಸ್ಪತ್ರೆಗೂ ಸಾಲದಾಗಿದೆ. ಹೀಗಾಗಿ ಸರ್ಕಾರ ಇತ್ತ ಗಮನ ಹರಿಸಿ ಅವರಿಗೆ ನೀಡಬೇಕಾಗಿರುವ ಜಮೀನು, ನಿವೇಶನ, ಮನೆ ಸೇರಿದಂತೆ ಹೆಚ್ಚಿನ ಪರಿಹಾರ ನೀಡುವ ಮೂಲಕ ಸರ್ಕಾರ ಕ್ರಮ ಕೈಗೊಳ್ಳಬೇಕು. ಪಿ.ಜಿ.ಮಣಿ, ಸಮಾಜ ಸೇವಕ.

Share this article