ಕನ್ನಡಪ್ರಭ ವಾರ್ತೆ ವಿಜಯಪುರ
ವಕ್ಫ್ ಕಾಯ್ದೆ ರದ್ದು ಮಾಡುವಂತೆ ಆಗ್ರಹಿಸಿ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ನೇತೃತ್ವದಲ್ಲಿ ಡಿಸಿ ಕಚೇರಿ ಬಳಿ ನಡೆಯುತ್ತಿರುವ ಧರಣಿ ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ. ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ, ಸಂಸದ ಪಿ.ಸಿ.ಗದ್ದಿಗೌಡರ, ಮಾಜಿ ಶಾಸಕ ವೀರಣ್ಣ ಚರಂತಿಮಠ ಸೇರಿದಂತೆ ಅನೇಕ ನಾಯಕರು ಧರಣಿಯಲ್ಲಿ ಪಾಲ್ಗೊಂಡಿದ್ದರು.ರಾತ್ರಿ ಪೂರ್ತಿ ಧರಣಿ ಸ್ಥಳದಲ್ಲೇ ಶೋಭಾ ಕರಂದ್ಲಾಜೆ ಹಾಗೂ ಶಾಸಕ ಯತ್ನಾಳ ಇದ್ದರು. ಮೂರನೇ ದಿನ ಬೆಳಗ್ಗೆಯೇ ನಗರದ ಸೈಕ್ಲಿಸ್ಟ್‌ಗಳು ಧರಣಿ ಸ್ಥಳಕ್ಕೆ ಭೇಟಿ ನೀಡಿ ಬೆಂಬಲ ವ್ಯಕ್ತಪಡಿಸಿದರು. ಬಳಿಕ, ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ ಸೇರಿ ಮುಖಂಡರು ಹಾಗೂ ಕಾರ್ಯಕರ್ತರು ಯೋಗಾಸನ ಮಾಡಿದರು.ಪಂಚಮಸಾಲಿ ಜಗದ್ಗುರು ಸಾಥ್:
ಹೋರಾಟದಲ್ಲಿ ಪಂಚಮಸಾಲಿ ಜಗದ್ಗುರು ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ ಹಾಗೂ ರಾಜ್ಯಸಭಾ ಸದಸ್ಯ ನಾರಾಯಣಸಾ ಬಾಂಡಗೆ ಸಾಥ್ ನೀಡಿದರು. ಅಹೋರಾತ್ರಿ ಹೋರಾಟಕ್ಕೆ ಯತ್ನಾಳ ಜೊತೆಗೆ ಭಾಗಿಯಾಗಿ ಧರಣಿಗೆ ಕುಳಿತ ಪಂಚಮಸಾಲಿ ಸ್ವಾಮೀಜಿಗಳು ಸಂಪೂರ್ಣ ಬೆಂಬಲ ನೀಡಿದರು. ನ.4ರಿಂದಲೂ ಭಾಗಿಯಾಗಿರುವ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಎಲ್ಲಿಯೂ ಕದಲದೆ ಕಳೆದ ಮೂರು ದಿನಗಳಿಂದ ಅಹೋರಾತ್ರಿ ಹೋರಾಟದಲ್ಲಿದ್ದಾರೆ. ಶಾಸಕ ಯತ್ನಾಳಗೆ ಬೆಂಬಲವಾಗಿರುವ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ರಾತ್ರಿ ಇಡೀ ಪ್ರತಿಭಟನಾ ಸ್ಥಳದಲ್ಲೆ ಕಾಲ ಕಳೆಯುತ್ತಿದ್ದಾರೆ. ನ.7ರಂದು ಕೇಂದ್ರದಿಂದ ಜೆಪಿಸಿ ತಂಡದ ಅಧ್ಯಕ್ಷ ಜಗದಂಬಿಕಾ ಪಾಲ ಆಗಮನ ಹಿನ್ನೆಲೆ ಶಾಸಕ ಯತ್ನಾಳ ಹಾಗೂ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರ ಹೋರಾಟ ಮತ್ತಷ್ಟು ತೀವ್ರಗೊಂಡಿದೆ.ನಿತ್ಯ ಸಾವಿರಾರು ಜನರ ಬೆಂಬಲ:
ಹೋರಾಟ ದಿನಗಳೆದಂತೆ ತೀವ್ರಗೊಳ್ಳುತ್ತಿದ್ದು, ಸ್ಥಳಕ್ಕೆ ರೈತರು, ಸ್ವಾಮೀಜಿಗಳು, ವಿವಿಧ ಪಕ್ಷಗಳ ಮುಖಂಡರು, ವ್ಯಾಪಾರಸ್ಥರ ಸಂಘ, ನೌಕರರ ಸಂಘ, ರೈತ ಸಂಘ, ಮರಾಠಾ ಸಮಾಜ, ಗೋಂಧಳಿ ಸಮಾಜ, ಹಿಂದೂ ಸಂಘಟನೆಗಳು ಸೇರಿ ಅನೇಕ ಸಂಘ-ಸಂಸ್ಥೆಗಳಿಂದ ಹೋರಾಟಕ್ಕೆ ಬೆಂಬಲ ಸಿಗುತ್ತಿದೆ. ನಿತ್ಯ ಸಾವಿರಾರು ಜನರು ಅಹೋರಾತ್ರಿ ಧರಣಿಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ.