೪ರಂದು ಚಾರ ಮೇಲ್ಬೆಟ್ಟು ಗರಡಿ ಬ್ರಹಕಲಶೋತ್ಸವ

KannadaprabhaNewsNetwork | Published : Apr 2, 2025 1:01 AM

ಸಾರಾಂಶ

ಏಪ್ರಿಲ್‌ ೧ರಂದು ದೈವಗಳ ಬಿಂಬ ಮೆರವಣಿಗೆಯಲ್ಲಿ ಗರಡಿಗೆ ಆಗಮಿಸಿದೆ. ೨ರಂದು ಮುಂಜಾನೆ ಚಾರ ಮಹಿಷಾಮರ್ಧಿನಿ ದೇವಸ್ಥಾನ ಮತ್ತು ಕೆರೆಬೆಟ್ಟು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಏಕಕಾಲದಲ್ಲಿ ಜ್ಯೋತಿಯ ಆಗಮನವಾಗಿ ಬಳಿಕ ವಿವಿಧ ಗರಡಿಯಲ್ಲಿ ಗಣಹೋಮ, ಉಗ್ರಾಣ ಮುಹೂರ್ತ ಸಹಿತ ವಿವಿಧ ಧಾರ್ಮಿಕ ವಿಧಿವಿಧಾನಗಳು ಹೆರ್ಗ ರಾಘವೇಂದ್ರ ತಂತ್ರಿಗಳ ಮಾರ್ಗದರ್ಶನದಲ್ಲಿ ನಡೆಯಲಿದೆ. ೩ರಂದು ವಿವಿಧ ಧಾರ್ಮಿಕ ಕಾರ್ಯದೊಂದಿಗೆ ದೈವಗಳ ಬಿಂಬಪ್ರತಿಷ್ಠಾ ಕಾರ್ಯಗಳು ನಡೆಯಲಿದೆ.

ಏ.೧ರಿಂದ ೯ರ ವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು

ಕನ್ನಡಪ್ರಭ ವಾರ್ತೆ ಕಾರ್ಕಳ

ತುಳುನಾಡಿನ ೪೦ ಮೂಲ ಗರಡಿಗಳಲ್ಲಿ ಒಂದಾಗಿರುವ ೩ ಗ್ರಾಮಕ್ಕೆ ಸೇರಿದ ಚಾರ ಮೇಲ್ಬೆಟ್ಟು ಶ್ರೀ ಬ್ರಹ್ಮಬೈದರ್ಕಳ ಮತ್ತು ಶಿವರಾಯ ಗರಡಿಯನ್ನು ೩ ಕೋಟಿ ರುಪಾಯಿ ವೆಚ್ಚದಲ್ಲಿ ಸಂಪೂರ್ಣವಾಗಿ ಶಿಲಾಮಯದೊಂದಿಗೆ ಜೀರ್ಣೋದ್ಧಾರಗೊಂಡು ಭವ್ಯ ಗರಡಿ ಇದೀಗ ಲೋಕಾರ್ಪಣೆಗೆ ಸಿದ್ಧವಾಗಿದೆ. ಏ.೧ರಿಂದ ೯ರ ವರೆಗೆ ಬ್ರಹಕಲಶೋತ್ಸವ ನಡೆಯಲಿದೆ.ಏಪ್ರಿಲ್‌ ೧ರಂದು ದೈವಗಳ ಬಿಂಬ ಮೆರವಣಿಗೆಯಲ್ಲಿ ಗರಡಿಗೆ ಆಗಮಿಸಿದೆ. ೨ರಂದು ಮುಂಜಾನೆ ಚಾರ ಮಹಿಷಾಮರ್ಧಿನಿ ದೇವಸ್ಥಾನ ಮತ್ತು ಕೆರೆಬೆಟ್ಟು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಏಕಕಾಲದಲ್ಲಿ ಜ್ಯೋತಿಯ ಆಗಮನವಾಗಿ ಬಳಿಕ ವಿವಿಧ ಗರಡಿಯಲ್ಲಿ ಗಣಹೋಮ, ಉಗ್ರಾಣ ಮುಹೂರ್ತ ಸಹಿತ ವಿವಿಧ ಧಾರ್ಮಿಕ ವಿಧಿವಿಧಾನಗಳು ಹೆರ್ಗ ರಾಘವೇಂದ್ರ ತಂತ್ರಿಗಳ ಮಾರ್ಗದರ್ಶನದಲ್ಲಿ ನಡೆಯಲಿದೆ. ೩ರಂದು ವಿವಿಧ ಧಾರ್ಮಿಕ ಕಾರ್ಯದೊಂದಿಗೆ ದೈವಗಳ ಬಿಂಬಪ್ರತಿಷ್ಠಾ ಕಾರ್ಯಗಳು ನಡೆಯಲಿದೆ.

೪ರಂದು ವಿವಿಧ ಪೂಜಾಯೊಂದಿಗೆ ಬ್ರಹ್ಮಕಲಶೋತ್ಸವ, ಮಹಾ ಕುಂಭಾಭಿಷೇಕ, ಸಾರ್ವಜನಿಕ ಮಹಾ ಅನ್ನ ಸಂತರ್ಪಣೆ ನಡೆಯಲಿದೆ. ೫ರಂದು ಗರಡಿಯ ಪರಿಸರದ ಸ್ವಚ್ಛತಾ ಕಾರ್ಯ ನಡೆದು ವಾರ್ಷಿಕ ಜಾತ್ರಾ ಮಹೋತ್ಸವಕ್ಕೆ ಕ್ಷೇತ್ರ ಸಿದ್ಧಗೊಳ್ಳಲಿದೆ.

೬ರಿಂದ ೯: ನೇಮೋತ್ಸವ:

೬ರಂದು ಕಂಬದ ಮುಹೂರ್ತ, ೭ರಂದು ಅಗೆಲು ಸೇವೆ, ೮ರಂದು ಮಧ್ಯಾಹ್ನ ಅನ್ನಸಂತರ್ಪಣೆ, ಸಂಜೆ ಬೈದರ್ಕಳ ಸರ್ಸಲೆ ಹೊರಡುವುದು, ರಾತ್ರಿ ಶಿವರಾಯ ಕೋಲ, ಬೈದರ್ಕಳ ದರ್ಶನ, ಬೈದರ್ಕಳ ಮತ್ತು ಧೂಮಾವತಿಯ ಮುಖಾಮುಖಿ ಭೇಟಿ ನಡೆಯಲಿದೆ. ೯ರಂದು ಸಂಜೆ ಮಯಾಂದಲಮ್ಮ ಕೋಲ, ಜುಮಾದಿ ಕೋಲ ನಡೆಯಲಿದೆ.

ಏ.೩ರಂದು ಧಾರ್ಮಿಕ ಸಭೆ:

ಏ.೩ರಂದು ಧಾರ್ಮಿಕ ಸಭೆ ನಡೆಯಲಿದ್ದು, ಶ್ರೀ ಕ್ಷೇತ್ರ ಕೇಮಾರಿನ ಶ್ರೀ ಈಶ ವಿಠಲದಾಸ ಸ್ವಾಮೀಜಿ ಆಶೀರ್ವಚನ ನೀಡುವರು. ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ಬಿ. ಹರ್ಷ ಶೆಟ್ಟಿ ಅಧ್ಯಕ್ಷತೆ ವಹಿಸುವರು. ಶಾಸಕ ಸುನಿಲ್‌ ಕುಮಾರ್‌ ಸಮಾರಂಭ ಉದ್ಘಾಟಿಸುವರು. ಶಾಸಕ ಗುರ್ಮೆ ಸುರೇಶ ಶೆಟ್ಟಿ ಸಹಿತ ಜನಪ್ರತಿನಿಧಿಗಳು, ಗಣ್ಯರು, ಧಾರ್ಮಿಕ ಮುಖಂಡರು, ದಾನಿಗಳು ಭಾಗವಹಿಸುವರು.

೪ರ ಧಾರ್ಮಿಕ ಸಭೆಯನ್ನು ಮಾಜಿ ಮುಖ್ಯಮಂತ್ರಿ ಡಾ.ಎಂ.ವೀರಪ್ಪ ಮೊಯ್ಲಿ ಉದ್ಘಾಟಿಸುವರು. ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ನೀರೆ ಕೃಷ್ಣ ಶೆಟ್ಟಿ ಅಧ್ಯಕ್ಷತೆ ವಹಿಸುವರು. ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ಮಂಜುನಾಥ ಭಂಡಾರಿ, ಯಶ್ಪಾಲ್‌ ಸುವರ್ಣ ಸಹಿತ ಜನಪ್ರತಿನಿಧಿಗಳು, ಗಣ್ಯರು, ಧಾರ್ಮಿಕ ಮುಖಂಡರು, ದಾನಿಗಳು ಭಾಗವಹಿಸುವರು.

ಹೊರೆಕಾಣಿಕೆ ಮೆರವಣಿಗೆ:

ಮೇಲ್ಬೆಟ್ಟು ಬ್ರಹ್ಮಕಲಶೋತ್ಸವಕ್ಕೆ ಹಸಿರು ಹೊರೆಕಾಣಿಕೆಯ ಭವ್ಯ ಮೆರವಣಿಗೆ ಹೆಬ್ರಿಯಿಂದ ಸಾಗಿ ಬಂತು. ಚೆಂಡೆ, ವಾದ್ಯ, ಕೀಲು ಕುದುರೆ, ತಟ್ಟಿರಾಯ, ಎತ್ತಿನ ಗಾಡಿ, ಮರ ಕಾಲು, ಆನೆ, ಭಜನೆ ತಂಡ ಮೆರವಣಿಗೆಗೆ ಶೋಭೆ ನೀಡಿದವು.

ಗರಡಿಯ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ನೀರೆ ಕೃಷ್ಣ ಶೆಟ್ಟಿ, ಗೌರವಾಧ್ಯಕ್ಷ ಬಿ.ಹರ್ಷ ಶೆಟ್ಟಿ ಹುತ್ತುರ್ಕೆ, ಗರಡಿಯ ಅನುವಂಶಿಕ ಆಡಳಿತ ಮೋಕ್ತೇಸರ ಸುರೇಶ ಹೆಗ್ಡೆ ತಾರಾಳಿ, ಜೀರ್ಣೋದ್ಧಾರ ಸಮಿತಿಯ ಪ್ರಧಾನ ಕಾರ್ಯದರ್ಶಿ ಸಿ.ಎಂ.ಪ್ರಸನ್ನ ಕುಮಾರ್‌ ಶೆಟ್ಟಿ, ಸಮಾಜ ಸೇವಕ ಸುಗ್ಗಿ ಸುಧಾಕರ ಶೆಟ್ಟಿ, ಪುರೋಹಿತ ಸುಬ್ರಹ್ಮಣ್ಯ ಹೇರಳೆ, ಗರಡಿ ಪೂಜಾರಿ ವರ್ಗದವರಾದ ಲಕ್ಷ್ಮಣ ಪೂಜಾರಿ, ಸುಧಾಕರ ಪೂಜಾರಿ, ಪ್ರಚಾರ ಸಮಿತಿಯ ಅಧ್ಯಕ್ಷ ಮಿಥುನ್‌ ಶೆಟ್ಟಿ ಚಾರ, ಜೀರ್ಣೋದ್ಧಾರ ಸಮಿತಿ, ಆಡಳಿತ ಮಂಡಳಿ, ಅನುವಂಶಿಕ ೯ ಮನೆಯವರು, ವಾರ್ಡ್‌ ಸಮಿತಿಯ ಮುಖ್ಯಸ್ಥರು, ಸದಸ್ಯರು ಉಪಸ್ಥಿತರಿದ್ದರು.

Share this article