ನಮೋ ಜನ್ಮದಿನದ ನಿಮಿತ್ತ ಅ.2ರವರೆಗೆ ಸೇವಾ ಸಪ್ತಾಹ

KannadaprabhaNewsNetwork | Published : Sep 18, 2024 1:47 AM

ಪ್ರಧಾನಿ ನರೇಂದ್ರ ಮೋದಿ ಜನ್ಮದಿನದ ಅಂಗವಾಗಿ ಸಂಸದ ಗೋವಿಂದ ಕಾರಜೋಳ ಹಾಗೂ ಮಾಜಿ ಶಾಸಕ ಜಿ.ಎಚ್. ತಿಪ್ಪಾರೆಡ್ಡಿ ಮಂಗಳವಾರ ಚಿತ್ರದುರ್ಗ ಜೆಸಿಆರ್ ಬಡಾವಣೆಯಲ್ಲಿರುವ ಪಾರ್ಕ್ ನಲ್ಲಿ ಕಸ ಗುಡಿಸುವುದರ ಮೂಲಕ ವಿಶಿಷ್ಟ ಆಚರಣೆ ಮಾಡಿದರು.

ಕನ್ನಡಪ್ರಭವಾರ್ತೆ ಚಿತ್ರದುರ್ಗಪ್ರಧಾನಿ ನರೇಂದ್ರ ಮೋದಿ ಜನ್ಮದಿನದ ಅಂಗವಾಗಿ ಸಂಸದ ಗೋವಿಂದ ಕಾರಜೋಳ ಹಾಗೂ ಮಾಜಿ ಶಾಸಕ ಜಿ.ಎಚ್. ತಿಪ್ಪಾರೆಡ್ಡಿ ಮಂಗಳವಾರ ಚಿತ್ರದುರ್ಗ ಜೆಸಿಆರ್ ಬಡಾವಣೆಯಲ್ಲಿರುವ ಪಾರ್ಕ್ ನಲ್ಲಿ ಕಸ ಗುಡಿಸುವುದರ ಮೂಲಕ ವಿಶಿಷ್ಟ ಆಚರಣೆ ಮಾಡಿದರು.ನಂತರ ಮಾತನಾಡಿದ ಕಾರಜೋಳ, ಪ್ರಥಮ ಬಾರಿಗೆ ನರೇಂದ್ರ ಮೋದಿ ದೇಶದ ಪ್ರಧಾನಿಯಾದಾಗ ಕೆಂಪುಕೋಟೆ ಮೇಲೆ ನಿಂತು ಭಾಷಣ ಮಾಡುತ್ತ ದೇವಾಲಯಗಳಿಗಿಂತ ಶೌಚಾಲಯಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕೆಂದು ಭಾಷಣ ಮಾಡಿದ್ದರು. ಸ್ವಚ್ಛ ಭಾರತ್ ಅಡಿ ದೇಶದಲ್ಲಿ ಹತ್ತು ಕೋಟಿಗೂ ಹೆಚ್ಚು ಶೌಚಾಲಯಗಳನ್ನು ಕಟ್ಟಿಸಲಾಗಿದೆ. ಮೋದಿ ಅವರ ಜನ್ಮ ದಿನದ ಅಂಗವಾಗ ಅಕ್ಟೋಬರ್ 2 ರವರೆಗೆ ನಿರಂತರವಾಗಿ ಸೇವಾ ಸಪ್ತಾಹ ಕಾರ್ಯಕ್ರಮಗಳು ನಡೆಯುತ್ತವೆ. ಯುವಕರು ಸ್ವಯಂ ಪ್ರೇರಣೆಯಿಂದ ರಕ್ತದಾನ ಮಾಡಿ ಸಾವು-ಬದುಕಿನ ನಡುವೆ ಹೋರಾಡುತ್ತಿರುವವರ ಅಮೂಲ್ಯವಾದ ಜೀವ ಉಳಿಸಬೇಕು ಎಂದು ಮನವಿದರು.

ಈ ವೇಳೆ ಪ್ಯಾಲೈಸ್ಟೇನ್ ಬಾವುಟ ಪ್ರದರ್ಶಿಸಿದ್ದರ ಬಗ್ಗೆ ಪ್ರತಿಕ್ರಿಯಿಸಿದ ಸಂಸದ ಗೋವಿಂದ ಕಾರಜೋಳ, ದೇಶದಲ್ಲಿರುವ 140 ಕೋಟಿ ಜನರು ದೇಶಭಕ್ತರಾಗಬೇಕು. ದೇಶದ್ರೋಹಿಗಳಾಗಬಾರದು. ಯಾವುದೇ ಜಾತಿ ಧರ್ಮದವರಾಗಲಿ, ಭಾರತದ ವಿರುದ್ಧ ಘೋಷಣೆಗಳನ್ನು ಕೂಗುವುದು, ಧ್ವಜ ಪ್ರದರ್ಶಿಸುವುದಾಗಲಿ ಮಾಡಿದರೆ ಅಂತಹವರ ವಿರುದ್ಧ ಕ್ರಮ ಕೈಗೊಳ್ಳಲು ಕಾನೂನಿದೆ ಎಂದು ಎಚ್ಚರಿಸಿದರು.

ಮಾಜಿ ಶಾಸಕ ಜಿ.ಎಚ್. ತಿಪ್ಪಾರೆಡ್ಡಿ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿಯವರ ಹುಟ್ಟುಹಬ್ಬದ ಪ್ರಯುಕ್ತ ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಸೇವಾ ಸಪ್ತಾಹ ನಡೆಯಲಿದೆ. ಬಸವೇಶ್ವರ ಆಸ್ಪತ್ರೆಯಲ್ಲಿ ಶುಕ್ರವಾರ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿದೆ. ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ರಕ್ತದಾನಕ್ಕೆ ಮುಂದಾಗುವಂತೆ ಮನವಿ ಮಾಡಿದರು.ಬಿಜೆಪಿ ಜಿಲ್ಲಾಧ್ಯಕ್ಷ ಎ. ಮುರಳಿ, ವಿಧಾನಪರಿಷತ್ ಸದಸ್ಯ ಕೆ.ಎಸ್. ನವೀನ್, ಬಿಜೆಪಿ ನಗರ ಮಂಡಲ ಅಧ್ಯಕ್ಷ ನವೀನ್ ಚಾಲುಕ್ಯ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಸೌಭಾಗ್ಯ ಬಸವರಾಜನ್, ವಕ್ತಾರ ನಾಗರಾಜ್‍ ಬೇದ್ರೆ ಸೇರಿದಂತೆ ಅನೇಕರು ಸ್ವಚ್ಛತಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.