ಶಿಗ್ಗಾಂವಿ: ಅಂಗವಿಕಲರ ಯಾವುದೇ ಸಮಸ್ಯೆ ಇದ್ದರೂ ತಾಲೂಕು ವೈದ್ಯಾಧಿಕಾರಿಗಳು ನನ್ನ ಗಮನಕ್ಕೆ ತರಬೇಕು. ಅಂಗವಿಕಲರ ಸಮಸ್ಯೆಗಳಿಗೆ ಅಧಿಕಾರಿಗಳು ಸ್ಥಳದಲ್ಲೇ ಪರಿಹಾರ ಒದಗಿಸಬೇಕು ಎಂದು ತಾಲೂಕಾ ದಂಡಾಧಿಕಾರಿ ಸಂತೋಷ ಹಿರೇಮಠ ಹೇಳಿದರು.ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ಆಯೋಜಿಸಿದ್ದ ವಿಶೇಷಚೇತನರ ಕುಂದು-ಕೊರತೆ ಆಲಿಸುವ ಸಭೆಯಲ್ಲಿ ಅಹವಾಲು ಸ್ವೀಕರಿಸಿ ಅವರು ಮಾತನಾಡಿದರು. ಪ್ರತಿ ಸೋಮವಾರ ಬೆಳಗ್ಗೆ ೧೦ರಿಂದ ೧೧ರ ವರಗೆ ಅಂಗವಿಕಲರು ಅಹವಾಲುಗಳನ್ನು ಸಲ್ಲಿಸಿ, ಸ್ಥಳದಲ್ಲೆ ಪರಿಹಾರ ಪಡೆಯಬಹುದು ಎಂದರು.ಪ್ರತಿ ಗ್ರಾಪಂನಲ್ಲಿ ನಡೆಯುವ ವಿಶೇಷ ಚೇತನರ ಸಭೆಗಳಲ್ಲಿ ಎಲ್ಲ ಇಲಾಖೆಯ ಅಧಿಕಾರಿಗಳು ಭಾಗವಹಿಸುವಂತೆ ಆರೋಗ್ಯ ಇಲಾಖೆ ಕ್ರಮ ಕೈಗೊಂಡು, ಸ್ಥಳದಲ್ಲೆ ಪರಿಹಾರ ನೀಡಬೇಕು. ವಿವಿಧ ಕಾರಣಗಳಿಂದಾಗಿ ತಾಲೂಕಿನ ೪೫ ಪಿಂಚಣಿ ಕಾರ್ಡುಗಳು ರದ್ದಾಗಿದ್ದು, ಅವರು ಸರಿಯಾದ ದಾಖಲೆ ಸಮೇತ ಇಲಾಖೆ ಸಂಪರ್ಕಿಸಬೇಕು ಎಂದು ಹೇಳಿದರು.
ಬಿಜೆಪಿ ತಾಲೂಕು ಅಧ್ಯಕ್ಷ ಶಿವಾನಂದ ಮ್ಯಾಗೇರಿ, ಪುಟ್ಟಪ್ಪ ಜಲದಿ, ಶಿದ್ದಪ್ಪಾ ಮಸಳಿ, ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.ಸಭೆಯಲ್ಲಿ ಕೇಳಿಬಂದ ಸಮಸ್ಯೆಗಳು: ನಕಲಿ ಅಂಗವಿಕಲರ ನಿಯಂತ್ರಣಕ್ಕೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕು. ವಿಶೇಷ ಚೇತನರು ಸೌಲಭ್ಯಗಳಿಗಾಗಿ ಅರ್ಜಿ ಸಲ್ಲಿಸಲು ಹೋದಾಗ ಕಂಪ್ಯೂಟರ್ ಆಪರೇಟರ್‌ಗಳು ಅಲೆದಾಡಿಸುತ್ತಿದ್ದಾರೆ. ಹಿಯರಿಂಗ್ ಮಶಿನ್‌ಗಳನ್ನು ಬಳಸುವವರ ಸ್ಕ್ಯಾನಿಂಗ್ ಮಾಡಿಸಲು ಹುಬ್ಬಳ್ಳಿಗೆ ಅಥವಾ ಹಾವೇರಿಗೆ ಹೋಗಬೇಕಿದೆ. ಸ್ಥಳೀಯವಾಗಿ ಈ ವ್ಯವಸ್ಥೆ ಮಾಡಿಕೊಡಬೇಕು. ೬೦ ವರ್ಷ ಮೇಲ್ಪಟ್ಟವರ ಯುಡಿಐಡಿ ಕಾರ್ಡ್ ರದ್ದಾಗುತ್ತಿದ್ದು, ಅವರು ಹಿರಿಯ ನಾಗರಿಕರ ಕೋಟಾದಲ್ಲಿ ಸೌಲಭ್ಯ ಪಡೆಯಲು ಸಮಸ್ಯೆಗಳಾಗುತ್ತಿವೆ.
ಅಂಗವಿಕಲರಿಗೆ ಇರುವ ಸವಲತ್ತುಗಳನ್ನು ಕುರಿತಂತೆ ಪ್ರತಿ ಗ್ರಾಪಂನಲ್ಲಿ ಮಾಹಿತಿ ಫಲಕ ಅಳವಡಿಸಬೇಕು. ಅಂಗವಿಕಲರ ಕ್ಯಾಂಪುಗಳನ್ನು ಎರಡನೇ ಮಹಡಿಯಲ್ಲಿ ಮಾಡುತ್ತಿದ್ದು, ಅಂಗವಿಕಲರಿಗೆ ಸಮಸ್ಯೆಯಾಗುತ್ತಿದೆ. ಅದನ್ನು ನೆಲಮಹಡಿಯಲ್ಲಿ ಮಾಡಬೇಕು. ತಾಲೂಕಿನಲ್ಲಿ ೧ರಿಂದ ೧೦ನೇ ತರಗತಿ ಒಳಗಿನ ಮಕ್ಕಳಲ್ಲಿ ೪೭೬ ವಿಶೇಷ ಚೇತನ ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದು ಶೇ. ೨೫ ಮಕ್ಕಳಿಗೆ ಯುಡಿಐಡಿ ಕಾರ್ಡ್ ಆಗಿಲ್ಲ. ಹೀಗೆ ಹಲವು ಸಮಸ್ಯೆಗಳ ಕುರಿತು ಸಭೆಯ ಗಮನಕ್ಕೆ ತರಲಾಯಿತು.ಶಕ್ತಿ ಯೋಜನೆಯಿಂದ ವಿಶೇಷ ಚೇತನರಿಗೆ ಬಸ್ಸುಗಳಲ್ಲಿ ಮೀಸಲಿಟ್ಟ ಸೀಟು ಸಿಗುತ್ತಿಲ್ಲ. ವಿಶೇಷ ಚೇತನರ ಮೀಸಲಿಟ್ಟ ಸೀಟನ್ನು ಕೊಡಿಸುವ ಜವಾಬ್ದಾರಿ ಕಂಡಕ್ಟರ್‌ಗಳದ್ದಾಗಿದ್ದು, ಇಲಾಖೆಯಿಂದ ಆದೇಶ ಹೊರಡಿಸಬೇಕು ಎಂದು ವಾಯವ್ಯ ರಸ್ತೆ ಸಾರಿಗೆ ಸಂಸ್ಥೆಯ ಮಾಜಿ ಉಪಾಧ್ಯಕ್ಷ ಶಿವಾನಂದ ಮ್ಯಾಗೇರಿ ಹೇಳಿದರು.ವಿಶೇಷಚೇತನರು ತಮ್ಮ ಕೆಲಸಕ್ಕಾಗಿ ಇಲಾಖೆಗಳಿಗೆ ಬಂದಾಗ ಅಧಿಕಾರಿಗಳು ಅವರೊಂದಿಗೆ ಗೌರವದಿಂದ ವರ್ತಿಸಬೇಕು ಎಂದು ತಾಲೂಕು ದಂಡಾಧಿಕಾರಿ ಸಂತೋಷ ಹಿರೇಮಠ ಹೇಳಿದರು.