ಕನ್ನಡಪ್ರಭ ವಾರ್ತೆ ಹಿರಿಯೂರು:
ತಾಲೂಕಿನ ವಾಣಿ ವಿಲಾಸ ಜಲಾಶಯ ಮೂರನೇ ಬಾರಿಗೆ ಕೋಡಿ ಬಿದ್ದಿದ್ದು ಜಲಾಶಯಕ್ಕೆ ಜ.18ರಂದು ಬಾಗಿನ ಅರ್ಪಣೆ ಮಾಡಲು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಆಗಮಿಸುತ್ತಿದ್ದು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಕರೆ ನೀಡಿದರು.ನಗರದ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ವಿವಿ ಸಾಗರ ಡ್ಯಾಂಗೆ ಬಾಗಿನ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ವಿವಿ ಸಾಗರ ಜಲಾಷಯ ತುಂಬುವುದರೊಂದಿಗೆ ತಾಲೂಕಿನ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. ಇದು ಹಬ್ಬದ ವಾತಾವರಣ ಉಂಟು ಮಾಡುವ ಸಂಭ್ರಮವಾಗಿದ್ದು, ಪಕ್ಷದ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಬಾಗಿನದ ಅದ್ಭುತ ಘಳಿಗೆಗೆ ಸಾಕ್ಷಿಯಾಗಬೇಕು ಎಂದರು.
ಹಲವು ಮನವಿ ಮತ್ತು ನಿರಂತರ ಪ್ರಯತ್ನದ ಮೂಲಕ ತಾಲೂಕಿನ ಜನರ ನೀರಿನ ಸಂಕಷ್ಟ ಬಗೆ ಹರಿಯುವ ಸಮಯ ಬಂದಿದೆ. ಈಗಾಗಲೇ ಜೆಜಿ ಹಳ್ಳಿ ಹೋಬಳಿ ಮತ್ತು ಧರ್ಮಪುರ ಭಾಗದ ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಸಂಬಂಧಪಟ್ಟ ಸಚಿವರಲ್ಲಿ ಮನವಿ ಮಾಡಲಾಗಿದ್ದು ಅವರಿಂದಲೂ ಸಹ ಅನುದಾನ ಒದಗಿಸುವ ಭರವಸೆ ಸಿಕ್ಕಿದೆ. ನಾನೆಂದೂ ನೀರಿನ ವಿಚಾರದಲ್ಲಿ ರಾಜಕೀಯ ಮಾಡಿದವನಲ್ಲ. ಬರ ಬಂದರೂ ಕೆರೆ ತುಂಬಿದರು ಅದನ್ನು ರಾಜಕೀಯ ಲಾಭ ಮಾಡಿಕೊಳ್ಳುವ ಉದ್ದೇಶವಿಲ್ಲ. ಕುಡಿಯುವ ನೀರಿಗೂ ಹಾಹಾಕಾರ ಬಂದದ್ದನ್ನು ನಾನು ನೋಡಿದ್ದೇನೆ. ಅವರ ಸಂಕಷ್ಟಗಳ ಅರಿವಿದೆ ಎಂದರು.ನೀರಿನ ಅಭಾವಕ್ಕೆ ಶಾಶ್ವತ ಪರಿಹಾರ ಒದಗಿಸುವ ನಿಟ್ಟಿನಲ್ಲಿ ನಾನು ಕೆಲಸ ಮಾಡಲು ಬದ್ದನಿದ್ದೇನೆ. ಅದೇ ಹಾದಿಯಲ್ಲಿ ಪ್ರಯತ್ನ ನಡೆಯುತ್ತಿದೆ. ಇದೀಗ ಜಿಲ್ಲೆಯ ಜೀವನಾಡಿಯಾದ ವಿವಿ ಸಾಗರ ಜಲಾಷಯ ಭರ್ತಿಯಾಗಿದ್ದು, ಬಾಗಿನ ಕಾರ್ಯಕ್ರಮ ಜ.18ಕ್ಕೆ ನಿಗದಿಯಾಗಿದೆ. ಅದಕ್ಕಾಗಿ ಎಲ್ಲಾ ಸಿದ್ಧತೆಗಳು ನಡೆದಿವೆ. ತಾಲೂಕಿನ ಕೆರೆಗಳಿಗೆ ಹಾಗೂ ಎಲ್ಲಾ ಹಳ್ಳಿಗಳ ಕುಡಿಯುವ ನೀರಿಗೆ ವ್ಯವಸ್ಥೆ ಮಾಡಲಾಗುತ್ತಿದ್ದು ಇನ್ನುಳಿದಿರುವ ಅವಧಿಯಲ್ಲಿ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು. ಜ.18ರ ಬಾಗಿನ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು, ಸಾರ್ವಜನಿಕರು ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿ ಎಂದರು.
ಈ ಸಂದರ್ಭದಲ್ಲಿ ಕೆಪಿಸಿಸಿ ಸದಸ್ಯ ಅಮೃತೇಶ್ವರ ಸ್ವಾಮಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಈರಲಿಂಗೇಗೌಡ, ಖಾದಿ ರಮೇಶ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸುರೇಖಾಮಣಿ, ನಗರಸಭೆ ಅಧ್ಯಕ್ಷ ಅಜಯ್ ಕುಮಾರ್, ಉಪಾಧ್ಯಕ್ಷೆ ಅಂಬಿಕಾ ಆರಾಧ್ಯ ಮುಖಂಡರಾದ ಸುರೇಶ್ ಬಾಬು, ನಾಗೇಂದ್ರ ನಾಯ್ಕ, ಕೃಷ್ಣಮೂರ್ತಿ, ಡಾ. ಸುಜಾತ, ರಜಿಯಾ ಸುಲ್ತಾನ್, ಜ್ಯೋತಿ ಲಕ್ಷ್ಮಿ, ಕೃಷಿಕ ಸಮಾಜದ ಅಧ್ಯಕ್ಷ ಚಿಗಳಿಕಟ್ಟೆ ಕಾಂತರಾಜು, ಕಾಶಾಮಯ್ಯ, ಜಿ ಎಲ್ ಮೂರ್ತಿ, ಸಾದತ್ ಉಲ್ಲಾ, ಹರೀಶ್ ಹಾಗೂ ನಗರಸಭೆ ಸದಸ್ಯರು, ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಉಪಸ್ಥಿತರಿದ್ದರು.