ಕನ್ನಡಪ್ರಭ ವಾರ್ತೆ ಮಡಿಕೇರಿ
ಮಡಿಕೇರಿ, ವಿರಾಜಪೇಟೆ, ಸಿದ್ದಾಪುರ, ಕುಶಾಲನಗರ, ಸುಂಟಿಕೊಪ್ಪ ಸೇರಿದಂತೆ ಜಿಲ್ಲೆಯ ನಾನಾ ಕಡೆಗಳಲ್ಲಿ ಮಲಯಾಳಿ ಬಾಂಧವರು ಮನೆಯ ಮುಂಭಾಗ ಹೂವಿನ ರಂಗೋಲಿ ರಚಿಸಿ ಹಬ್ಬದ ವಿಶೇಷತೆಗಳಲ್ಲೊಂದಾದ ಓಣಂ ಸದ್ಯವನ್ನು ಸವಿಯುವ ಮೂಲಕ ಕುಟುಂಬ ಸಮೇತ ಓಣಂ ಹಬ್ಬವನ್ನು ಸಂಭ್ರಮಿಸಿದರು. ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜೆ ನಡೆಯಿತು.
ಪೂಕಳಂ: ಓಣಂ ಸಂದರ್ಭ ಹತ್ತು ದಿನಗಳೂ ಎಲ್ಲ ಮಲಯಾಳಿ ಬಾಂಧವರ ಮನೆಗಳ ಮುಂದೆ ಪೂಕಳಂ ಆಕರ್ಷಿಸುತ್ತದೆ. ಹತ್ತನೇ ದಿನ ದೊಡ್ಡದಾದ ಹೂವಿನ ರಂಗೋಲಿ ರಚಿಸಲಾಗುತ್ತದೆ. ಈ ದೊಡ್ಡ ರಂಗೋಲಿಗೆ ‘ಅತ್ತಂ ಪತ್ತನಿ ಪೊಣ್ಣಾಣಂ’ ಎಂದು ಕರೆಯುತ್ತಾರೆ. ಯಾವುದೇ ರಾಸಾಯನಿಕ ಬಣ್ಣಗಳನ್ನು ಬಳಸದೇ ನೈಸರ್ಗಿಕವಾಗಿ ಸಿಗುವ ನಾನಾ ಬಣ್ಣಗಳ ಹೂಗಳನ್ನು ಮಾತ್ರ ಬಳಸಿ ಈ ಪೂಕಳಂ ರಚಿಸಲಾಗುತ್ತದೆ. ಪೂಕಳಂ ಕೇವಲ ಆಕಷರ್ಣೆಗೆ ಮಾತ್ರ ರಚಿಸುವುದಿಲ್ಲ. ಇದಕ್ಕೆ ಧಾರ್ಮಿಕ ಐತಿಹ್ಯವೂ ಇದೆ. ಬಲಿ ಚಕ್ರವರ್ತಿ ತಮ್ಮ ಮನೆಗೆ ಬರುತ್ತಾನೆ ಎಂದು ನಂಬಿರುವ ಮಲಯಾಳಿ ಬಾಂಧವರು ಆತನನ್ನು ಸ್ವಾಗತಿಸುವುದಕ್ಕಾಗಿ ಈ ರಂಗೋಲಿ ರಚಿಸುತ್ತಾರೆ.