ಮಲೆಯಾಳ ಸಮಾಜದ ಕಾರ್‍ಯಕ್ರಮ । ಹೂವಿನ ರಂಗೋಲಿ, ಸಿಂಗಾರಿ ಮೇಳ । ಉಚಿತ ಆರೋಗ್ಯ ಶಿಬಿರ
ಕನ್ನಡಪ್ರಭ ವಾರ್ತೆ ಚಾಮರಾಜನಗರ
ವೈವಿದ್ಯಮಯ ಸಂಸ್ಕೃತಿ ಇದ್ದರೂ ಮನುಷ್ಯರೆಲ್ಲರೂ ಒಂದೇ ಎನ್ನುವ ತತ್ವದಡಿ ನಡೆಯುವ ಓಣಂ ಹಬ್ಬ ನಮ್ಮ ಹೆಮ್ಮೆ ಎಂದು ಮಲೆಯಾಳಂ ಸಮಾಜದ ಜಿಲ್ಲಾಧ್ಯಕ್ಷ ರಾಜು ವರ್ಗೀಸ್ ಹೇಳಿದರು.ಜಿಲ್ಲಾ ಮಲೆಯಾಳ ಸಮಾಜದಿಂದ ಜೋಡಿರಸ್ತೆಯ ಸಂತ ಪೌಲರ ಸಮುದಾಯ ಭವನದಲ್ಲಿ ಏರ್ಪಡಿಸಿದ್ದ ಓಣಂ ಸಂಗಮ ಆಚರಣೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಜಿಲ್ಲೆಯಲ್ಲಿರುವ ಮಳೆಯಾಳಂ ಸಮಾಜಕ್ಕೆ ಎಲ್ಲರನ್ನು ಸಂಘಟಿಸುವ ಗುರುತರ ಜವಾಬ್ದಾರಿ ಇದೆ. ನಾವು ಮೂಲತಃ ಕೇರಳದವರಾದರೂ, ಕೃಷಿ, ವ್ಯಾಪಾರ, ಉದ್ಯೋಗ ಆಶ್ರಯಿಸಿ, ದೇಶಾದ್ಯಂತ ನೆಲೆಸಿದ್ದೇವೆ. ಅದೇ ರೀತಿ ಜಿಲ್ಲೆಯಲ್ಲೂ ಇದ್ದೇವೆ. ಕನ್ನಡ ಭಾಷೆ ಕಲಿಯಬೇಕು. ಕನ್ನಡ ಸಂಸ್ಕೃತಿ ಅಳವಡಿಸಿಕೊಳ್ಳಬೇಕು, ಸಹಕಾರದೊಂದಿಗೆ ಕನ್ನಡಿಗರೊಂದಿಗೆ ಉತ್ತಮ ಬಾಂಧವ್ಯ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ನಾಟಕ ಅಕಾಡೆಮಿ ಪುರಸ್ಕೃತ, ಹಿರಿಯ ಪತ್ರಕರ್ತ ಅಬ್ರಹಾಂ ಡಿ.ಸಿಲ್ವ, ಡಾ. ಬಸವರಾಜೇಂದ್ರ ಅವರನ್ನು ಸನ್ಮಾನಿಸಲಾಯಿತು, ಸಮಾಜದ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ ವಿತರಿಸಲಾಯಿತು.
ಹಿರಿಯ ಪತ್ರಕರ್ತ ಅಬ್ರಹಾಂ ಡಿ.ಸಿಲ್ವ ಮಾತನಾಡಿ, ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ವಿವಿಧ ಸಂಸ್ಕೃತಿ ಇದ್ದರೂ ವಿವಿಧತೆಯಲ್ಲಿ ಏಕತೆ ಸಾರುವುದು ನಮ್ಮ ಗುಣ, ಮಹಾದಾನಿ ಬಲಿ ಚಕ್ರವರ್ತಿಯ ಆಗಮನದ ಹಬ್ಬವಾದ ಓಣಂ ಸುಗ್ಗಿಯ ಕಾಲದ ಹಬ್ಬವಾಗಿದೆ ಎಂದರು.