ಮತ್ತೊಮ್ಮೆ ಸಿದ್ದು ಸಿಎಂ, ಅಂಬಾರಿ ಆನೆಗಳಾದ ಬಲರಾಮ, ಅರ್ಜುನ ಸಾವು, ಹೊಗೆಬಾಂಬ್‌ನಲ್ಲಿ ಮನೋರಂಜನ್ ಆರೋಪಿ...

KannadaprabhaNewsNetwork | Published : Dec 31, 2023 1:30 AM

ಸಾರಾಂಶ

2023ರಲ್ಲಿ ಮೈಸೂರು ಜಿಲ್ಲೆಯಲ್ಲಿ ನಡೆದಿರುವ ಪ್ರಮುಖ ಘಟನಾವಳಿ ಕುರಿತು ಚುಟುಕಾಗಿ ಜನತೆಗೆ ತಿಳಿಸುವ ಪ್ರಯತ್ನ. ರಾಜಕೀಯ, ಸಾಂಸ್ಕೃತಿಕ, ಮಹನೀಯರ ಅಗಲಿಕೆ, ಅಪರಾಧ ಪ್ರಕರಣಗಳಲ್ಲಿ ಮೈಸೂರು ಜಿಲ್ಲೆಗೆ ಕಪ್ಪುಚುಕ್ಕಿ ಜೊತೆಗೆ ಪ್ರಶಸ್ತಿಗಳ ಸರಮಾಲೆ, ಪ್ರಮುಖ ಅಭಿವೃದ್ಧಿ ಕಾಮಗಾರಿಗಳು... ಹೀಗೇ... ನೋವು, ನಲಿವುಗಳೊಂದಿಗೆ ಉರುಳಿದ 2023

ಅಂಶಿ ಪ್ರಸನ್ನಕುಮಾರ್

ಕನ್ನಡಪ್ರಭ ವಾರ್ತೆ ಮೈಸೂರು

ಡಿ.ದೇವರಾಜ ಅರಸು ನಂತರ ಜಿಲ್ಲೆಯವರಾದ ಸಿದ್ದರಾಮಯ್ಯ ಎರಡನೇ ಬಾರಿಗೆ ಮುಖ್ಯಮಂತ್ರಿ, ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಜಂಬೂ ಸವಾರಿಯಲ್ಲಿ ಅಂಬಾರಿ ಹೊತ್ತಿದ್ದ ಆನೆಗಳಾದ ಬಲರಾಮ, ಅರ್ಜುನ ಸಾವು, ಜಿಲ್ಲೆಯ ವಿವಿಧೆಡೆ ವನ್ಯಪ್ರಾಣಿ- ಮಾನವ ಸಂಘರ್ಷ, ದೆಹಲಿಯ ನೂತನ ಸಂಸತ್ ಭವನದಲ್ಲಿ ಹೊಗೆಬಾಂಬ್ ಪ್ರಕರಣದಲ್ಲಿ ಮೈಸೂರಿನ ಮನೋರಂಜನ್ ಆರೋಪಿ...

- ಇವು 2023ರಲ್ಲಿ ಜಿಲ್ಲೆಯಲ್ಲಿ ನಡೆದಿರುವ ಪ್ರಮುಖ ಘಟನಾವಳಿಗಳು.

ಈ ವರ್ಷ ವಿಧಾನಸಭಾ ಚುನಾವಣೆ ನಡೆದಿದ್ದರಿಂದ ರಾಜಕಾರಣ ಜೋರಾಗಿತ್ತು. ಕಾಂಗ್ರೆಸ್ ಪರವಾಗಿ ರಾಹುಲ್ ಗಾಂಧಿ, ಪ್ರಿಯಾಂಕ ಗಾಂದಿ, ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್, ಬಿಜೆಪಿ ಪರವಾಗಿ ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ ಬಿ.ಎಸ್. ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಜೆಡಿಎಸ್ ಪರವಾಗಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡಸ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಮತ್ತಿತರರು ಪ್ರಚಾರ ಮಾಡಿದರು.

ಜಿಲ್ಲೆಯಲ್ಲಿ ರಾಜಕೀಯ ಸ್ಥಿತ್ಯಂತರಗಳಾದವು. ಒಟ್ಟು 11 ವಿಧಾನಸಭಾ ಸ್ಥಾನಗಳ ಪೈಕಿ ಕಾಂಗ್ರೆಸ್- 8, ಜೆಡಿಎಸ್-2, ಬಿಜೆಪಿ- 1 ಸ್ಥಾನಗಳನ್ನು ಮಾತ್ರ ಪಡೆದವು. ಡಾ.ಎಚ್.ಸಿ. ಮಹದೇವಪ್ಪ, ಕೆ.ವೆಂಕಟೇಶ್ ಮತ್ತೊಮ್ಮೆ ಸಚಿವರಾಗಿ ಕ್ರಮವಾಗಿ ಮೈಸೂರು, ಚಾಮರಾಜನಗರ ಉಸ್ತುವಾರಿ ಹೊತ್ತಿದ್ದಾರೆ.

ಜಿಪಂ ಹಾಗೂ ತಾಪಂಗಳಿಗೆ ಅವಧಿ ಮುಗಿದು ಮೂರು ವರ್ಷ ಕಳೆದರೂ ಚುನಾವಣೆ ನಡೆದಿಲ್ಲ. ಮೈಸೂರು ನಗರಪಾಲಿಕೆ ಚುನಾಯಿತ ಅವಧಿ ಕೂಡ ಮುಕ್ತಾಯವಾಗಿದೆ.

ಮಹಿಷ ದಸರಾ ಆಚರಣೆಯ ವಿಚಾರದಲ್ಲಿ ಬಿಜೆಪಿ ಹಾಗೂ ಪ್ರಗತಿಪರರ ನಡುವೆ ಪರ- ವಿರೋಧ ವಾಗ್ಯುದ್ಧವೇ ನಡೆಯಿತು. ಅಂತಿಮವಾಗಿ ಪುರಭವನ ಆವರಣದಲ್ಲಿ ಮಹಿಷ ಉತ್ಸವ ನಡೆಯಿತು.

ಮೈಸೂರಿನ ಸಂಸದ ಪ್ರತಾಪ್ ಸಿಂಹ ಅವರ ಕಚೇರಿಯಿಂದ ವೀಕ್ಷಕರ ಪಾಸ್ ಪಡೆದಿದ್ದ ಮನೋರಂಜನ್, ಆತನ ಸ್ನೇಹಿತ ಸಾಗರ್ ಶರ್ಮಾ ದೆಹಲಿಯ ನೂತನ ಸಂಸತ್ ಭವನದ ಗ್ಯಾಲರಿಯಿಂದ ಜಿಗಿದು ಹೊಗೆ ಬಾಂಬ್ ಸಿಡಿಸಿದರು. ಇದು ಆತಂಕದ ಜೊತೆಗೆ ಮೈಸೂರಿಗೆ ಕಪ್ಪುಚುಕ್ಕೆಯಾಯಿತು.

ಪಿರಿಯಾಪಟ್ಟಣ ಆನೆಚೌಕೂರು ಬಳಿ ಜಮೀನಿನ ಮಾಲೀಕ ಹಾರಿಸಿದ ಗುಂಡೇಟಿನಿಂದ ಗಾಯಗೊಂಡಿದ್ದ ಮಾಜಿ ಅಂಬಾರಿ ಆನೆ ಕೆಲ ದಿನಗಳ ನಂತರ ಸಾವಿಗೀಡಾಯಿತು. ಹಾಸನದಲ್ಲಿ ಪುಂಡಾನೆ ಸೆರೆ ಹಿಡಿಯಲು ಹೋಗಿ ಮಾಜಿ ಅಂಬಾರಿ ಆನೆ ಅರ್ಜುನ ಕೂಡ ಸಾವಿಗೀಡಾಯಿತು.

ಟಿ.ನರಸೀಪುರ ತಾಲೂಕಿನಲ್ಲಿ ಚಿರತೆ ಹಾವಳಿ. ಕೆಲವರು ಬಲಿಯಾದರೆ ನಂಜನಗೂಡು ಎಚ್.ಡಿ. ಕೋಟೆ, ಹುಣಸೂರು ತಾಲೂಕಿನಲ್ಲಿ ಹುಲಿ ದಾಳಿಯಿಂದ ಆರು, ಕಾಡನೆ ದಾಳಿಯಿಂದ ಮೂವರು ಬಲಿಯಾದರು.

ಅಪರಾಧ ಪ್ರಕರಣಗಳು:

ಗುಜರಾತ್‌ನಲ್ಲಿ ಸ್ಯಾಂಟ್ರೋ ರವಿ ಬಂಧನ, ಟಿ. ನರಸೀಪುರ ಯುವಬ್ರಿಗೇಡ್ ಕಾರ್ಯಕರ್ತನ ಕಗ್ಗೊಲೆ

ಕುರುಬೂರು ಬಳಿ ಭೀಕರ ಅಪಘಾತದಲ್ಲಿ ಬಳ್ಳಾರಿ ಜಿಲ್ಲೆಯ ಹನ್ನೊಂದು ಮಂದಿ ಸಾವಿಗೀಡಾದರು.

ಅಗಲಿದವರು:

ಹಿರಿಯ ಸಮಾಜವಾದಿ ಪ.ಮಲ್ಲೇಶ್, ಸಾಹಿತಿ ಪ್ರೊ. ಮಲೆಯೂರು ಗುರುಸ್ವಾಮಿ, ಮಾಜಿ ಸಂಸದ ಆರ್. ಧ್ರುವನಾರಾಯಣ, ನೃತ್ಯಕಲಾವಿದೆ ಉಮಾ ರಾವ್, ಮಾಜಿ ರಾಯಭಾರಿ ಮಾಧವನ್, ಕಾನೂನು ತಜ್ಞ ಪ್ರೊ.ಸಿಕೆಎನ್ ರಾಜ, ವಿಮರ್ಶಕ ಪ್ರೊ. ಜಿ.ಎಚ್. ನಾಯಕ, ಕವಿ ಹಾಡುಪಾಡು ರಾಮಸ್ವಾಮಿ, ಸಂಗೀತ ವಿದುಷಿ ಡಾ.ಗೌರಿ ಕುಪ್ಪುಸ್ವಾಮಿ, ಪ್ರೊ.ಎಂ. ವೆಂಕೋಬರಾವ್, ನಿವೃತ್ತ ಕುಲಪತಿ ಪ್ರೊ.ಕೆ. ಭೈರಪ್ಪ, ಪೇಪರ್ ಸುಬ್ಬಣ್ಣ ಅಗಲಿದ ಪ್ರಮುಖರು.

ಪ್ರಶಸ್ತಿ ಪುರಸ್ಕಾರಗಳು:

ಖ್ಯಾತ ಕಾದಂಬರಿಕಾರ ಡಾ.ಎಸ್.ಎಲ್. ಭೈರಪ್ಪಗೆ ಪದ್ಮಭೂಷಣ, ವಿಜ್ಞಾನಿ ಖಾದರ್ ವಲಿ, ಪುರಾತತ್ವಶಾಸ್ತ್ರಜ್ಞ ಸುಬ್ಬರಾಮನ್ ಅವರಿಗೆ ಪದ್ಮಶ್ರೀ, ಪ್ರೊ.ಸಿ. ನಾಗಣ್ಣ, ಡಾ.ಕಬ್ಬಿನಾಲೆ ವಸಂತಭಾರದ್ವಾಜ, ಪಿ. ಗೌರಯ್ಯ, ಪಿ. ಗಂಗಾಧರಸ್ವಾಮಿ, ಪತ್ರಿಕಾ ವಿತರಕ ಜವರಪ್ಪ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ದೊರೆಯಿತು. ಜಿಎಲ್ಎನ್ ಸಿಂಹ ಅವರಿಗೆ ವರ್ಣಶಿಲ್ಪಿ ವೆಂಕಟಪ್ಪ ಪ್ರಶಸ್ತಿ ದೊರೆತಿದೆ.

ವಿಷ್ಣು ಸ್ಮಾರಕ- ಬಿಜಿಎಸ್ ಸಾಂಸ್ಕೃತಿಕ ಭವನ:

ಎಚ್.ಡಿ.ಕೋಟೆ ರಸ್ತೆಯ ಉದ್ಬೂರ್ ಗೇಟ್ ಬಳಿ ಡಾ.ವಿಷ್ಣುವರ್ಧನ್ ಸ್ಮಾರಕ ಲೋಕಾರ್ಪಣೆಯಾಯಿತು.

ಮೈಸೂರು- ಬೆಂಗಳೂರು ದಶಪಥಕ್ಕೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದರು. ಹೆಬ್ಬಾಳಿನಲ್ಲಿ ಬಿಜಿಎಸ್ ಸಾಂಸ್ಕೃತಿಕ ಭವನ ಲೋಕಾರ್ಪಣೆಯಾಯಿತು. ಜಿಲ್ಲಾಧಿಕಾರಿ ಕಚೇರಿ ನಗರದ ಹೃದಯ ಭಾಗದಿಂದ ಸಿದ್ಧಾರ್ಥನಗರದ ನೂತನ ಸಮುಚ್ಚಯಕ್ಕ ಸ್ತಳಾಂತರವಾಗಿದೆ.

ನೇಮಕಾತಿ:

ಮೈಸೂರು ವಿವಿಕುಲಪತಿಯಾಗಿ ಪ್ರೊ.ಎನ್.ಕೆ. ಲೋಕನಾಥ್ ನೇಮಕವಾದರು. ಇದರ ವಿರುದ್ಧ ಪ್ರೊ.ಶರತ್ ಅನಂತಮೂರ್ತಿ ಹೈಕೋರ್ಟಿನ ಮೊರೆ ಹೋಗಿದ್ದರಿಂದ ಮೂರು ತಿಂಗಳು ಮೈವಿವಿಗೆ ಹಂಗಾಮಿ ಕುಲಪತಿಯೂ ಇರಲಿಲ್ಲ. ಕೊನೆಗೆ ಲೋಕನಾಥ್ ಅವರು ವಿಭಾಗೀಯ ಪೀಠದಿಂದ ತಡೆಯಾಜ್ಞೆ ಪಡೆದು, ಕುಲಪತಿಯಾಗಿ ಮುಂದುವರೆಯುತ್ತಿದ್ದಾರೆ.

Share this article