ಮತ್ತೊಮ್ಮೆ ಬಿಜೆಪಿ ತೆಕ್ಕೆಗೆ ಹೊಸಪೇಟೆ ನಗರಸಭೆ

KannadaprabhaNewsNetwork | Published : Sep 13, 2024 1:32 AM

ಸಾರಾಂಶ

ನಗರಸಭೆ ಚುನಾವಣೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ ನಡುವೆ ಭಾರೀ ಪೈಪೋಟಿ ಏರ್ಪಟ್ಟಿತ್ತು.

ಹೊಸಪೇಟೆ: ತೀವ್ರ ಕುತೂಹಲಕ್ಕೆ ಎಡೆ ಮಾಡಿದ್ದ ಸ್ಥಳೀಯ ನಗರಸಭೆ ಚುನಾವಣೆಯಲ್ಲಿ ಮತ್ತೊಮ್ಮೆ ಬಿಜೆಪಿ ಜಯಭೇರಿ ಬಾರಿಸಿದ್ದು, ಕಾಂಗ್ರೆಸ್‌ ತೀವ್ರ ಮುಖಭಂಗ ಅನುಭವಿಸಿದೆ. ಅಧ್ಯಕ್ಷರಾಗಿ ಬಿಜೆಪಿಯ ರೂಪೇಶ್‌ಕುಮಾರ, ಉಪಾಧ್ಯಕ್ಷರಾಗಿ ರಮೇಶ್‌ ಗುಪ್ತಾ ಚುನಾಯಿತರಾದರು.

ನಗರಸಭೆ ಚುನಾವಣೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ ನಡುವೆ ಭಾರೀ ಪೈಪೋಟಿ ಏರ್ಪಟ್ಟಿತ್ತು. ಅಧ್ಯಕ್ಷ ಸ್ಥಾನ ಒಬಿಸಿ "ಎ "ಗೆ ಮೀಸಲಾಗಿತ್ತು. ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿತ್ತು. ಕಾಂಗ್ರೆಸ್‌ನಿಂದ ಅಧ್ಯಕ್ಷ ಸ್ಥಾನಕ್ಕೆ ಅಸ್ಲಂ ಮಾಳಗಿ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಎಚ್‌.ರಾಘವೇಂದ್ರ ನಾಮಪತ್ರ ಸಲ್ಲಿಸಿದ್ದರು.

ಬಿಜೆಪಿಯಿಂದ ಅಧ್ಯಕ್ಷ ಸ್ಥಾನಕ್ಕೆ ರೂಪೇಶ್‌ಕುಮಾರ, ಉಪಾಧ್ಯಕ್ಷ ಸ್ಥಾನಕ್ಕೆ ರಮೇಶ್‌ ಗುಪ್ತಾ ನಾಮಪತ್ರ ಸಲ್ಲಿಸಿದ್ದರು. ಬಿಜೆಪಿ ಹಾಗೂ ಕಾಂಗ್ರೆಸ್‌ ನಡುವೆ ಭಾರೀ ಹಣಾಹಣಿ ಏರ್ಪಟ್ಟಿತ್ತು. ಈ ನಡುವೆ ಕಾಂಗ್ರೆಸ್‌ ಸದಸ್ಯ ಎಚ್‌.ಕೆ. ಮಂಜುನಾಥ ಅವರನ್ನು ಅಪಹರಣ ಮಾಡಲಾಗಿದೆ ಎಂಬ ವದಂತಿಯೂ ಹಬ್ಬಿತ್ತು. ಇದರಿಂದ ಚುನಾವಣೆ ಮುಂದೂಡಿಕೆಯಾಗಲಿದೆ ಎಂಬ ಗುಮಾನಿಯೂ ಎದ್ದಿತ್ತು. ಆದರೆ, ಸದಸ್ಯ ಎಚ್.ಕೆ. ಮಂಜುನಾಥ ಸಮಯಕ್ಕೆ ಸರಿಯಾಗಿ ಆಗಮಿಸಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಾಳಯದಲ್ಲಿ ಉತ್ಸಾಹ ಮೂಡಿತ್ತು.

ಬಿಜೆಪಿಗೆ ಭರ್ಜರಿ ಗೆಲುವು:

ನಗರಸಭೆಯ 35 ಸದಸ್ಯರು ಹಾಗೂ ಕಾಂಗ್ರೆಸ್‌ನ ಸಂಸದ ಈ.ತುಕಾರಾಂ ಮತ್ತು ಶಾಸಕ ಎಚ್.ಆರ್‌. ಗವಿಯಪ್ಪ ಮತ ಚಲಾಯಿಸಿದ್ದರಿಂದ ಒಟ್ಟು ಮತಗಳು 37 ಆಗಿದ್ದವು. ಈ ಪೈಕಿ ಕಾಂಗ್ರೆಸ್‌ ಸದಸ್ಯ ಕೆ.ಮಹೇಶ್‌ಕುಮಾರ ಅಲಿಯಾಸ್‌ ಖಾರದಪುಡಿ ಮಹೇಶ್‌ ಗೈರು ಹಾಜರಾದ ಹಿನ್ನೆಲೆಯಲ್ಲಿ 36 ಮತಗಳಲ್ಲಿ ಬಿಜೆಪಿಯ ಅಭ್ಯರ್ಥಿಗಳಿಗೆ 19 ಮತಗಳು ಹಾಗೂ ಕಾಂಗ್ರೆಸ್‌ ಅಭ್ಯರ್ಥಿಗಳಿಗೆ 17 ಮತಗಳು ದೊರೆತವು. ಅಧ್ಯಕ್ಷರಾಗಿ ಬಿಜೆಪಿಯ ರೂಪೇಶ್‌ಕುಮಾರ ಹಾಗೂ ಉಪಾಧ್ಯಕ್ಷರಾಗಿ ರಮೇಶ್‌ ಗುಪ್ತಾ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಹಾಗೂ ಸಹಾಯಕ ಆಯುಕ್ತ ವಿವೇಕಾನಂದ ಅಧಿಕೃತವಾಗಿ ಘೋಷಣೆ ಮಾಡಿದರು.

ಸಂಸದ, ಶಾಸಕರು ಬಂದ್ರೂ ಸೋಲು:

ಬಳ್ಳಾರಿ ಸಂಸದ ತುಕಾರಾಂ, ಶಾಸಕ ಎಚ್.ಆರ್‌. ಗವಿಯಪ್ಪ ಚುನಾವಣೆಯಲ್ಲಿ ಮತ ಚಲಾಯಿಸಲು ಆಗಮಿಸಿದರೂ ಕಾಂಗ್ರೆಸ್‌ ಭಾರೀ ಮುಖಭಂಗ ಅನುಭವಿಸಿತು. ಕಾಂಗ್ರೆಸ್‌ನ ಸದಸ್ಯ ಕೆ.ಮಹೇಶಕುಮಾರ ಗೈರಾಗಿದ್ದು, ಕಾಂಗ್ರೆಸ್‌ಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಈ ನಡುವೆ ನಂಬಿದ್ದ ಪಕ್ಷೇತರ ಸದಸ್ಯರು ಕೂಡ ಕೈಕೊಟ್ಟಿದ್ದು, ಕಾಂಗ್ರೆಸ್‌ ಲೆಕ್ಕಾಚಾರ ತಲೆಕೆಳಗಾಗಿಸಿದೆ.

ಸಂಭ್ರಮ, ವಿಜಯೋತ್ಸವ:

ನಗರಸಭೆ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ ಬಾರಿಸಿದ ಹಿನ್ನೆಲೆಯಲ್ಲಿ ಜಿಲ್ಲೆ, ನಗರದಲ್ಲಿ ಬಿಜೆಪಿ ಕಾರ್ಯಕರ್ತರು ಹಾಗೂ ಮುಖಂಡರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು. ನಗರದಲ್ಲಿ ಕಾರ್ಯಕರ್ತರು ಭವ್ಯ ಮೆರವಣಿಗೆಯೊಂದಿಗೆ ವಿಜಯೋತ್ಸವ ಆಚರಿಸಿದರು. ಪೊಲೀಸರು ಸೂಕ್ತ ಬಂದೋಬಸ್ತ್‌ ಕೈಗೊಂಡಿದ್ದರು.

ಈ ಗೆಲುವು ಮಾಜಿ ಸಚಿವ ಆನಂದ ಸಿಂಗ್‌ ಅವರಿಗೆ ಕೊಡುಗೆಯಾಗಿ ನೀಡುವೆ. ಮೈಸೂರು ಮಾದರಿಯಲ್ಲಿ ಹೊಸಪೇಟೆಯನ್ನು ಸ್ವಚ್ಛ ನಗರಿಯನ್ನಾಗಿ ಮಾರ್ಪಡಿಸಲು ಶ್ರಮಿಸುವೆ. ಬೀದಿನಾಯಿಗಳ ಹಾವಳಿಗೆ ಕಡಿವಾಣ ಹಾಕುವೆ ಎನ್ನುತ್ತಾರೆ ಹೊಸಪೇಟೆ ನಗರಸಭೆ ನೂತ ಅಧ್ಯಕ್ಷ ರೂಪೇಶ್‌ಕುಮಾರ.

ಹೊಸಪೇಟೆ ನಗರಸಭೆಯಲ್ಲಿ ನಮಗೆ ಬಹುಮತ ಇಲ್ಲ. ಆದರೂ ನಾವು ಪಕ್ಷೇತರ ಸದಸ್ಯರನ್ನು ನಂಬಿಕೊಂಡು ಚುನಾವಣೆಗೆ ಇಳಿದಿದ್ದೆವು. ಆದರೆ, ನಮ್ಮ ರಾಜಕೀಯ ಲೆಕ್ಕಾಚಾರ ವರ್ಕ್‌ಔಟ್‌ ಆಗಿಲ್ಲ ಎನ್ನುತ್ತಾರೆ ಸಂಸದ ಈ.ತುಕಾರಾಂ.

Share this article