ಜಂಗಮ ಸಮಾಜಕ್ಕೆ ಒಂದು ಎಕರೆ ಭೂಮಿ: ರೆಡ್ಡಿ

KannadaprabhaNewsNetwork | Published : Mar 25, 2025 12:47 AM

ಸಾರಾಂಶ

ಶ್ರೀರೇಣುಕಾಚಾರ್ಯರ ಕಲ್ಯಾಣ ಮಂಟಪ ಮತ್ತು ವಸತಿ ನಿಲಯಗಳ ನಿರ್ಮಾಣಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ಮೇ ಅಂತ್ಯಕ್ಕೆ ಆನೆಗೊಂದಿ ಬಳಿ ಭೂಮಿ ಖರೀದಿಸಿ ಜಂಗಮ ಸಮಾಜದ ಸಂಘದ ಹೆಸರಿಗೆ ನೋಂದಣಿ ಮಾಡಿಸುವುದಾಗಿ ಶಾಸಕರು ಭರವಸೆ ನೀಡಿದ್ದಾರೆ.

ಗಂಗಾವತಿ:

ತಾಲೂಕಿನ ಆನೆಗೊಂದಿ ಬಳಿ ಜಂಗಮ ಸಮಾಜಕ್ಕೆ ಸ್ವಂತ ಖರ್ಚಿನಿಂದ ಒಂದು ಎಕರೆ ಭೂಮಿ ಕೊಡಿಸುವುದಾಗಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಹೇಳಿದರು.

ನಗರದ ಸಿಬಿಎಸ್ ಕಲ್ಯಾಣ ಮಂಟಪದಲ್ಲಿ ಜರುಗಿದ ಆದಿ ಜಗದ್ಗುರು ಶ್ರೀರೇಣುಕಾಚಾರ್ಯರ ಜಯಂತ್ಯುತ್ಸವ ಮತ್ತು ಯುಗಮಾನೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಶ್ರೀರೇಣುಕಾಚಾರ್ಯರ ಕಲ್ಯಾಣ ಮಂಟಪ ಮತ್ತು ವಸತಿ ನಿಲಯಗಳ ನಿರ್ಮಾಣಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಹೇಳಿದ ಶಾಸಕರು, ಮೇ ಅಂತ್ಯಕ್ಕೆ ಆನೆಗೊಂದಿ ಬಳಿ ಭೂಮಿ ಖರೀದಿಸಿ ಜಂಗಮ ಸಮಾಜದ ಸಂಘದ ಹೆಸರಿಗೆ ನೋಂದಣಿ ಮಾಡಿಸುವುದಾಗಿ ಭರವಸೆ ನೀಡಿದ ಅವರು, ವೀರಶೈವ ಜಂಗಮ ಸಮಾಜದವರಿಗೆ ನ್ಯಾಯಬದ್ಧವಾದ ಬೇಡ ಜಂಗಮ ಪ್ರಮಾಣ ಪತ್ರ ರಾಜಕೀಯ ಷಡ್ಯಂತ್ರದಿಂದ ಸಿಗುತ್ತಿಲ್ಲ ಎಂದು ವಿಷಾದ ವ್ಯಕ್ತ ಪಡಿಸಿದರು.ಕರ್ನಾಟಕದಲ್ಲಿ ಜಂಗಮ ಮಠ-ಮಾನ್ಯಗಳು ಸರ್ವ ವರ್ಗದ ಜನರಿಗೆ ಅನ್ನ, ಅಕ್ಷರ ದಾಸೋಹ ಕಲ್ಪಿಸಿ ಶೈಕ್ಷಣಿಕ, ಆರ್ಥಿಕ, ಸಾಮಾಜಿಕ ಬೆಳವಣಿಗೆಗೆ ದೊಡ್ಡಮಟ್ಟದ ಕೊಡುಗೆ ನೀಡಿವೆ ಎಂದರು.

ಸಂಸದ ರಾಜಶೇಖರ್ ಹಿಟ್ನಾಳ್ ಮಾತನಾಡಿ, ಈ ಹಿಂದೇ ಸರ್ವ ಸಮುದಾಯದವರು ಜಂಗಮರಿಲ್ಲದೇ ಧಾರ್ಮಿಕ ಕಾರ್ಯ ನೆರವೇರಿಸುತ್ತಿರಲಿಲ್ಲ. ಬದಲಾದ ದಿನಗಳಲ್ಲಿ ಜನರು ಮತ್ತು ಭಕ್ತರು ಬದಲಾಗಿದ್ದಾರೆ. ಜಂಗಮರು ಮಾತ್ರ ಇಂದಿಗೂ ಧಾರ್ಮಿಕ, ಸಂಪ್ರದಾಯಗಳ ಆಚರಣೆ, ಉಪದೇಶಗಳ ಮೂಲಕ ಜನರನ್ನು ಆಧ್ಯಾತ್ಮಿಕದ ಕಡೆ ಕೊಂಡ್ಯೊಯುವ ಕೆಲಸ ಮುಂದುವರಿಸಿದ್ದಾರೆ ಎಂದರು.

ಮಾಜಿ ಶಾಸಕ ಪರಣ್ಣ ಮುನವಳ್ಳಿ ಮಾತನಾಡಿ, ರಾಜ್ಯದಲ್ಲಿ ವೀರಶೈವ ಮಠ-ಮಾನ್ಯಗಳು ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿ ಮಾಡಿವೆ ಎಂದು ಹೇಳಿದರು.

ಮಾಜಿ ಸಂಸದ ಶಿವರಾಮಗೌಡ, ಜಿಪಂ ಮಾಜಿ ಸದಸ್ಯ ಎಚ್.ಎಂ. ಸಿದ್ದರಾಮಸ್ವಾಮಿ, ತಿಪ್ಪೇರುದ್ರಸ್ವಾಮಿ, ಬಸವರಾಜಸ್ವಾಮಿ ಮಳೇಮಠ, ವೀರಯ್ಯಸ್ವಾಮಿ ಹೇರೂರು ಸೇರಿದಂತೆ ಪ್ರಮುಖರು ಇದ್ದರು. ವಿವಿಧ ಮಠಾಧೀಶರು ಸಾನ್ನಿಧ್ಯ ವಹಿಸಿದ್ದರು. ಇದಕ್ಕಿಂತ ಪೂರ್ವದಲ್ಲಿ ನಗರದಲ್ಲಿ ರೇಣುಕಾಚಾರ್ಯರ ಭಾವಚಿತ್ರ ಮತ್ತು ಪೂರ್ಣಕುಂಭದ ಮೆರವಣಿಗೆ ಜರುಗಿತು.

Share this article