ಕಾಯಕದಲ್ಲಿ ನಿರತನಾದಡೆ ಗುರು ದರ್ಶನವಾದರೂ ಮರೆಯಬೇಕು, ಲಿಂಗ ಪೂಜೆಯಾದರೂ ಮರೆಯಬೇಕು
ಹರಪನಹಳ್ಳಿ: ಶ್ರದ್ಧೆಯಿಂದ ಕಾಯಕ ಮಾಡಿದಾಗ ಮಾತ್ರ ಜಗದ ನಾಯಕನಾಗಲು ಸಾಧ್ಯ ಎಂದು ತೆಗ್ಗಿನಮಠ ಸಂಸ್ಥಾನದ ಪೀಠಾಧ್ಯಕ್ಷ ವರಸದ್ಯೋಜಾತ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯಪಟ್ಟರು.
ನಗರದ ತೆಗ್ಗಿನಮಠದ ಧರ್ಮ ಭವನದಲ್ಲಿ ನಡೆದ ಶ್ರಾವಣ ಸಂಜೆ ಹಾಗೂ ಧರ್ಮ ಸಭೆಯ ಉದ್ಘಾಟನಾ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಕಾಯಕದಲ್ಲಿ ನಿರತನಾದಡೆ ಗುರು ದರ್ಶನವಾದರೂ ಮರೆಯಬೇಕು, ಲಿಂಗ ಪೂಜೆಯಾದರೂ ಮರೆಯಬೇಕು, ಜಂಗಮ ಮುಂದಿದ್ದರೂ ಹಂಗು ಹರಿಯಬೇಕು ಎನ್ನುವ ಶರಣರ ಮಾತು ತಮ್ಮ ಕಾಯಕತತ್ವದಿಂದ ಕಾಯಕ ನಿಷ್ಠೆ ಜಗತ್ತಿಗೆ ಸಾರಿದ್ದಾರೆ ಎಂದು ನುಡಿದರು.
ಸಮಾರಂಭ ಉದ್ಘಾಟಿಸಿ ಮಾತನಾಡಿದ ಶಾಸಕಿ ಎಂ.ಪಿ. ಲತಾ ಮಲ್ಲಿಕಾರ್ಜುನ ಶ್ರಾವಣ ಮಾಸವನ್ನು ಹಬ್ಬಗಳ ಹೆಬ್ಬಾಗಿಲು ಎಂದು ಕರೆಯಲಾಗುತ್ತದೆ, ಹಬ್ಬ ಆರಂಭವಾಗುವುದೇ ಶ್ರಾವಣ ಮಾಸದಿಂದ, ಶ್ರಾವಣಮಾಸ ಹೆಣ್ಣು ಮಕ್ಕಳ ಪ್ರಿಯವಾದ ಹಬ್ಬ, ಈ ಮಾಸದಲ್ಲಿ ಧರ್ಮ ಕಾರ್ಯ, ಪುರಾಣ, ಪ್ರವಚನ ಹೆಚ್ಚು ನಡೆಯುತ್ತವೆ ಎಲ್ಲರೂ ಈ ಹಬ್ಬ ಸಂತೋಷದಿಂದ ಆಚರಿಸಿ ಎಂದರು.
ಗಂಗಾವತಿಯ ಕೊಟ್ಟೂರೇಶ್ವರ ಪದವಿ ಕಾಲೇಜಿನ ನಿವೃತ್ತ ಉಪನ್ಯಾಸಕ ವಿ.ಜಿ. ಯಾವಗಲ್ ಶ್ರದ್ಧೆಯ ಕಾಯಕ ಜಗದ ನಾಯಕ ಕುರಿತು ವಿಶೇಷ ಉಪನ್ಯಾಸ ನೀಡಿ, ತೆಗ್ಗಿನಮಠ ಅನೇಕರ ಬಾಳಿನಲ್ಲಿ ಬೆಳಕು ನೀಡಿದೆ, ಶ್ರದ್ಧೆ ಭಕ್ತಿಯ ಮೂಲಕ ಸಮಾಜ ಜಾಗೃತಿ ಮೂಡಿಸುತ್ತಿದೆ ಎಂದು ನುಡಿದರು.
ಸ್ಥಳೀಯ ಕೆನರಾ ಬ್ಯಾಂಕ್ ಮ್ಯಾನೇಜರ್ ಜಯರಾಜೇಂದ್ರನ್ ಮಾತನಾಡಿ, ಸನಾತನ ಧರ್ಮ ಮತ್ತು ಸಂಸ್ಕೃತಿಯ ಮಹತ್ವ ಸಮಾಜಕ್ಕೆ ತಿಳಿಸುವ ಕೆಲಸ ತೆಗ್ಗಿನಮಠದ ಶ್ರೀಗಳು ಮಾಡುತ್ತಿದ್ದಾರೆ, ಜತೆಗೆ ತೆಗ್ಗಿನಮಠ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಾ ಬಂದಿದೆ ಎಂದರು.
ಬೆಸ್ಕಾಂನ ನಿವೃತ್ತ ಸಹಾಯಕ ಅಭಿಯಂತರ ಕೆ.ಭೀಮಪ್ಪ ಮಾತನಾಡಿ, ಭಾರತೀಯ ಸಂಸ್ಕೃತಿ ಇಂದಿನ ಯುವ ಪೀಳಿಗೆಯಲ್ಲಿ ಬಿತ್ತರಿಸುವ ಕೆಲಸ ತೆಗ್ಗಿನಮಠದ ಶ್ರೀಗಳು ಮಾಡುತ್ತಿದ್ದಾರೆ ಎಂದರು.
ತೆಗ್ಗಿನಮಠದ ಕಾರ್ಯದರ್ಶಿ ಡಾ. ಟಿ.ಎಂ.ಚಂದ್ರಶೇಖರಯ್ಯ ಪ್ರಾಸ್ತಾವಿಕವಾಗಿ ಮಾತನಾಡಿ, ಶ್ರಾವಣ ಸಂಜೆ ಕಾರ್ಯಕ್ರಮವನ್ನು ವಿಭಿನ್ನ ರೀತಿಯಲ್ಲಿ ಆಚರಿಸುವ ಮೂಲಕ ಜನರಿಗೆ ಉಪಯುಕ್ತ ವಿಷಯ ಹೊಸ ರೂಪದಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಹೇಳಿದರು.
ಮಾನಿಹಳ್ಳಿ ಪುರವರ್ಗ ಮಠದ ಡಾ. ಮಳೆಯೋಗಿಶ್ವರ ಶಿವಾಚಾರ್ಯ ಸ್ವಾಮೀಜಿ, ಕೂಡ್ಲಿಗಿ ಹಿರೇಮಠದ ಪ್ರಶಾಂತ ಸಾಗರ ಸ್ವಾಮೀಜಿ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಆಡಿಟರ್ ಅಮೃತ ಮಾತನಾಡಿದರು. ಈ ಸಂದರ್ಭದಲ್ಲಿ ಸಮಾಜ ಸೇವಕಿ ಎಚ್.ಎಂ. ಲಲಿತಮ್ಮ, ಉದ್ಯಮಿ ಉತ್ತಮ್ ಚಂದ್ ಜೈನ್, ಪಿಎಲ್ ಡಿ ಬ್ಯಾಂಕ್ ಉಪಾಧ್ಯಕ್ಷ ಗೊಂಗಡಿ ನಾಗರಾಜ, ಟಿಎಂಎಇ ಸಂಸ್ಥೆಯ ಉಪ ಕಾರ್ಯದರ್ಶಿ ಟಿ.ಎಂ. ವಿಜಯಕುಮಾರ್, ಟಿ.ಎಂ. ಪ್ರತೀಕ್, ಉದ್ಯಮಿ ಟಿ.ಎಂ. ವೀರೇಂದ್ರ ಸ್ವಾಮಿ, ಎ.ಬಿ. ಮಂಜುನಾಥ, ಮುದುಗಲ್ ಗುರುನಾಥ, ಪಿಎಲ್ ಡಿ ಬ್ಯಾಂಕ್ ನಿರ್ದೇಶಕ ಪಿ.ಬಿ.ಗೌಡ, ಕೆ. ದೇವೇಶ, ಕೆ. ನಾಗಭೂಷಣಯ್ಯ, ಸಿ.ಎಂ. ಕೊಟ್ರಯ್ಯ ಉಪಸ್ಥಿತರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.