ಕುಷ್ಟಗಿ: ಫೇಸ್‌ಬುಕ್‌ನಲ್ಲಿ ನಾಲ್ಕು ಸಾಲು ಗೀಚಿದಾಕ್ಷಣ ಕವಿಯಾಗಲು ಸಾಧ್ಯವಿಲ್ಲ. ಇನ್‌ಸ್ಟಾಗ್ರಾಂನಲ್ಲಿ ಒಂದೆರಡು ಚುಟುಕು ಹಂಚಿಕೊಂಡ ತಕ್ಷಣ ಸಾಹಿತಿಯೂ ಆಗುವುದಿಲ್ಲ. ಸಾಹಿತ್ಯವೆಂಬುದು ನಿರಂತರ ಓದು, ಅಧ್ಯಯನ, ಅನುಭವ ಮತ್ತು ಅಭಿವ್ಯಕ್ತಿಯಿಂದ ಪಕ್ವಗೊಳ್ಳುವ ಕಲೆ ಎಂದು ಶಿಕ್ಷಕ ನಟರಾಜ ಸೋನಾರ್ ಹೇಳಿದರು.
ಒಂದೆರಡು ಕವನ, ಚುಟುಕು ಬರೆದು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡ ತಕ್ಷಣವೇ ಸ್ವಯಂ ಕವಿಯೆಂದು ಘೋಷಿಸಿಕೊಂಡು ಧಿಡೀರನೆ ಪುಸ್ತಕ ಪ್ರಕಟಿಸುವ ಆತುರ ಸಲ್ಲದು. ಮೊದಲು ಸಾಹಿತ್ಯದ ಪರಂಪರೆ, ಭಾಷೆಯ ಸೊಗಡು, ಪದಗಳ ಬಳಕೆ ಮತ್ತು ಅಭಿವ್ಯಕ್ತಿಯ ಸೂಕ್ಷ್ಮತೆ ಅರಿತುಕೊಳ್ಳಬೇಕು. ಆಗ ಮಾತ್ರ ಕಾಲದ ಪರೀಕ್ಷೆಯಲ್ಲಿ ನಿಲ್ಲುವ ಸಾಹಿತ್ಯ ರಚಿಸಲು ಸಾಧ್ಯ ಎಂದು ಕಿವಿಮಾತು ಹೇಳಿದರು.
ಚುಟುಕು ಎಂದರೆ ನಾಲ್ಕು ಸಾಲುಗಳ ಬರಹವಷ್ಟೇ ಅಲ್ಲ; ಕಿರಿದರಲ್ಲಿ ಹಿರಿದಾದ ಅರ್ಥ ತುಂಬುವ ಸಾಹಿತ್ಯ ಪ್ರಕಾರ. ಓದುಗರ ಮನಸ್ಸಿಗೆ ಕುಟುಕುವ ಪಂಚಿಂಗ್ ಇರಬೇಕು. ಅರ್ಥಕ್ಕೆ ಧಕ್ಕೆಯಾಗದಂತೆ ಕಡಿಮೆ ಪದಗಳಲ್ಲಿ ದೊಡ್ಡ ವಿಚಾರವನ್ನು ಪರಿಣಾಮಕಾರಿಯಾಗಿ ಕಟ್ಟಿಕೊಡಬೇಕು. ಓದುಗರ ಮನಸ್ಸನ್ನು ಕೆರಳಿಸಿ, ಚಿಂತನೆಗೆ ಹಚ್ಚಿ, ಭಾವನೆಗಳನ್ನು ಅರಳಿಸುವ ಶಕ್ತಿ ಚುಟುಕಿಗಿರಬೇಕು. ಆಗ ಮಾತ್ರ ಚುಟುಕು ಸಾಹಿತ್ಯಕ್ಕೆ ನಿಜವಾದ ಮೌಲ್ಯ ಬರುತ್ತದೆ ಎಂದು ವಿಶ್ಲೇಷಿಸಿದರು.ಸಮ್ಮೇಳನಾದ್ಯಕ್ಷ ಚಂದಪ್ಪ ಹಕ್ಕಿ, ಚುಸಾಪ ಜಿಲ್ಲಾ ಕಾರ್ಯದರ್ಶಿ ಮಹಾಂತೇಶ ನೆಲಗಣಿ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಚುಸಾಪ ಅಧ್ಯಕ್ಷ ಮಹೇಶ ಹಡಪದ, ವಿಶ್ವನಾಥ ಅಂಬಲಿಕೊಪ್ಪಮಠ, ಸಂತೋಷ ಎಚ್., ವೆಂಕಟೇಶ ಚಾಗಿ, ಹನುಮಂತಪ್ಪ ಪುರ್ತಗೇರಿ, ಶಿವಾಜಿ ಹಡಪದ, ಎಸ್.ಎಸ್. ಹಿರೇಮಠ, ಮೈಬೂಬು ನೆರೆಬೆಂಚಿ ಇದ್ದರು.