- ಅಂಗಾಂಗ ದಾನ ಅರಿವು ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿ ಡಾ. ಎ.ಎಂ.ಶಿಲ್ಪಶ್ರೀ
- - -ಕನ್ನಡಪ್ರಭ ವಾರ್ತೆ ದಾವಣಗೆರೆ ದೇಶದಲ್ಲಿ ಪ್ರತಿ ವರ್ಷ 6 ಸಾವಿರ ಜನರು ಅಂಗಾಂಗಗಳ ವೈಫಲ್ಯದಿಂದ ಸಾವನ್ನಪ್ಪುತ್ತಿದ್ದಾರೆ. ತಪ್ಪುಗ್ರಹಿಕೆ ಪೂರ್ವಾಗ್ರಹಗಳನ್ನು ಕಳಚೆ ಸ್ವಯಂಪ್ರೇರಣೆಯಿಂದ ಅಂಗಾಂಗಗಳ ದಾನಕ್ಕೆ ಪ್ರತಿಯೊಬ್ಬರೂ ಮುಂದಾಗಬೇಕು. ಇದರಿಂದ ಸಾವು, ನೋವುಗಳನ್ನು ತಡೆಯಲು ಸಾಧ್ಯ ಎಂದು ಜೆಜೆಎಂ ವೈದ್ಯಕೀಯ ಮಹಾವಿದ್ಯಾಲಯದ ಅರಿವಳಿಕೆ ವಿಭಾಗದ ಪ್ರಾಧ್ಯಾಪಕಿ, ಅಂಗಾಂಗಗಳ ದಾನದ ಅಂಬಾಸಿಡರ್ ಡಾ. ಎ.ಎಂ. ಶಿಲ್ಪಶ್ರೀ ಹೇಳಿದರು.
ನಗರದ ರಾ.ಲ. ಕಾನೂನು ಕಾಲೇಜಿನಲ್ಲಿ ಶುಕ್ರವಾರ ಯೂತ್ ರೆಡ್ ಕ್ರಾಸ್ ವಿಭಾಗ, ರಾಷ್ಟ್ರೀಯ ಸೇವಾ ಯೋಜನೆ, ಎಸ್.ಎಸ್. ಕೇರ್ ಟ್ರಸ್ಟ್‌ನಿಂದ ಹಮ್ಮಿಕೊಂಡಿದ್ದ ಅಂಗಾಂಗ ದಾನದ ಅರಿವು ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಅವರು ಮಾತನಾಡಿದರು.ವಿಶ್ವ ಅಂಗಾಂಗಗಳ ದಾನ ದಿನಾಚರಣೆ ಫೆ.14ರಂದು ಆಚರಿಸಲಾಗುತ್ತದೆ. ಆದರೆ, ಜನರಿಗೆ ಇನ್ನೂ ಅಂಗಾಂಗಗಳ ದಾನದ ಬಗ್ಗೆ ಅಷ್ಟಾಗಿ ಅರಿವು, ಜಾಗೃತಿ ಮೂಡಿಲ್ಲ ಎಂಬುದು ಅಷ್ಟೇ ಸತ್ಯ. ಪ್ರತಿ 17 ನಿಮಿಷಕ್ಕೊಂದು ಸಾವುಗಳು ಅಂಗಾಂಗ ವೈಫಲ್ಯದಿಂದಲೇ ಆಗುತ್ತಿವೆ. 1954ರಲ್ಲಿ ವಿಶ್ವದಲ್ಲೇ ಮೊದಲ ಬಾರಿಗೆ ಅಂಗಾಂಗಗಳ ಕಸಿ ಮಾಡಿ, ಯಶಸ್ಸನ್ನು ಕಾಣಲಾಯಿತು. ಅನಂತರದಲ್ಲಿ ಮಾಡಿದ ಯಾವುದೇ ಅಂಗಾಂಗ ಕಸಿಯೂ ಯಶಸ್ವಿಯಾಗಲಿಲ್ಲ. ಅದಕ್ಕೆ ಕಾರಣ ಹುಡುಕಿದಾಗ ಮೊದಲ ಸಲ ನಡೆದ ಕಸಿಯಲ್ಲಿ ಆ ಇಬ್ಬರೂ ಅವಳಿ ಮಕ್ಕಳಾಗಿದ್ದರಿಂದ ಅದು ಯಶಸ್ವಿಯಾಗಿತ್ತು. ರಕ್ತದ ಗುಂಪು ಸೇರಿದಂತೆ ಹಲವಾರು ಪರೀಕ್ಷೆಗಳಲ್ಲಿ ಹೊಂದಾಣಿಕೆಯಾದರೆ ಮಾತ್ರವೇ ಅಂಗಾಂಗ ಕಸಿ ಯಶಸ್ವಿ ಆಗುತ್ತದೆಂಬ ಸಂಗತಿ ನಂತರ ಗೊತ್ತಾಯಿತು ಎಂದ ಅವರು, ಅಂಗಾಂಗ ದಾನ ಮಾಡಲು ಅದಕ್ಕೆ ಆದ ನೀತಿ, ನಿಯಮಗಳ ಪಾಲನೆ ಅತ್ಯಂತ ಕಡ್ಡಾಯವಾಗಿದೆ ಎಂದು ತಿಳಿಸಿದರು.
ಪ್ರತಿ 17 ನಿಮಿಷಕ್ಕೊಂದು ಸಾವುಗಳು ಅಂಗಾಂಗ ವೈಫಲ್ಯದಿಂದಲೇ ಆಗುತ್ತಿವೆ. ದೇಶದಲ್ಲಿ ಪ್ರತಿ ವರ್ಷ ರಸ್ತೆ ಅಪಘಾತದಿಂದಲೇ 1.6 ಲಕ್ಷ ಜನ ಸಾವನ್ನಪ್ಪುತ್ತಿದ್ದಾರೆ. ಅಪಘಾತವಾದವರಲ್ಲಿ ಶೇ.67ರಷ್ಟು ಅಂದರೆ 93 ಸಾವಿರ ಜನರ ಮೆದುಳು ನಿಷ್ಕ್ರಿಯವಾಗಿರುತ್ತದೆ. ಅದರಲ್ಲಿ ಶೇ.0.05ರಷ್ಟು ಜನರು ಮಾತ್ರ ಅಂಗಾಂಗ ದಾನ ಮಾಡುತ್ತಾರೆಂಬುದೇ ನೋವಿನ ಸಂಗತಿ. ಧರ್ಮ, ಪೂರ್ವಗ್ರಹ, ಮೂಢನಂಬಿಕೆ, ತಪ್ಪುಗ್ರಹಿಕೆ ಇತ್ಯಾದಿಗಳೂ ಇದಕ್ಕೆಲ್ಲಾ ಕಾರಣವಾಗಿದೆ. ನೇತ್ರದಾನ ಭಾರತದಲ್ಲಿ ಹೆಚ್ಚಾಗಿರುವುದು ಸ್ವಾಗತಾರ್ಹ. ಅದೇ ರೀತಿ ದೇಹ ಮತ್ತು ಅಂಗಾಂಗಗಳ ದಾನಕ್ಕೂ ಜನರು ಮುಂದೆ ಬರಬೇಕು ಎಂದು ಡಾ. ಶಿಲ್ಪಶ್ರೀ ತಿಳಿಸಿದರು.ಜೆ.ಜೆ.ಎಂ. ವೈದ್ಯಕೀಯ ಮಹಾವಿದ್ಯಾಲಯದ ಮಕ್ಕಳ ತಜ್ಞ ಡಾ.ಮೂಗನಗೌಡ ಪಾಟೀಲ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ರಾ.ಲ. ಕಾನೂನು ಕಾಲೇಜಿನ ಡಾ. ಜಿ.ಎಸ್. ಯತೀಶ್ ಅಧ್ಯಕ್ಷತೆ ವಹಿಸಿದ್ದರು. ಕಾಲೇಜು ಬೋಧಕ-ಬೋಧಕೇತರ ಸಿಬ್ಬಂದಿ, ಕಾನೂನು ವಿದ್ಯಾರ್ಥಿ- ವಿದ್ಯಾರ್ಥಿನಿಯರು ಇದ್ದರು.
- - --16ಕೆಡಿವಿಜಿ3.ಜೆಪಿಜಿ:
ಕಾರ್ಯಕ್ರಮದಲ್ಲಿ ಅರಿವಳಿಕೆ ವಿಭಾಗದ ಪ್ರಾಧ್ಯಾಪಕಿ, ಅಂಗಾಂಗಗಳ ದಾನದ ಅಂಬಾಸಿಡರ್ ಡಾ. ಎ.ಎಂ. ಶಿಲ್ಪಶ್ರೀ ಮಾತನಾಡಿದರು.