ಕನ್ನಡಪ್ರಭ ವಾರ್ತೆ ಮಂಡ್ಯ
ಹದಿನಾರು ಬಾರಿ ಬಜೆಟ್ ಮಂಡಿಸಿರುವುದಾಗಿ ಎದೆಯುಬ್ಬರಸಿ ಹೇಳಿಕೊಳ್ಳುವ ಮುಖ್ಯಮಂತ್ರಿ ಸಿದ್ದರಾಮಯ್ಯ ಆರ್ಥಿಕ ತಜ್ಞನಲ್ಲ. ಒಂದೇ ವರ್ಷಕ್ಕೆ ಒಂದು ಲಕ್ಷ ಕೋಟಿ ರು. ಸಾಲ ಮಾಡಿರುವ ಸಿದ್ದರಾಮಯ್ಯ ಯಾವ ಸೀಮೆ ಆರ್ಥಿಕ ತಜ್ಞ ಎಂದು ವಿಪಕ್ಷ ನಾಯಕ ಆರ್.ಅಶೋಕ್ ವ್ಯಂಗ್ಯವಾಡಿದರು.ಮಂಡ್ಯ ವಿಶ್ವವಿದ್ಯಾಲಯ ಮುಚ್ಚುತ್ತಿರುವುದನ್ನು ವಿರೋಧಿಸಿ ಬಿಜೆಪಿ-ಜೆಡಿಎಸ್ ಹಮ್ಮಿಕೊಂಡಿದ್ದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿ, ಈ ಸರ್ಕಾರ ಪಾಪರ್ ಆಗಿದೆ. ವಿಧಾನಸೌಧದ ಮುಂದೆ ನಿಂತು ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಭಿಕ್ಷೆ ಬೇಡುತ್ತಿದ್ದಾರೆ. ಗ್ಯಾರಂಟಿ ಯೋಜನೆಗಳಿಗೆ ಹಣ ಒದಗಿಸಲಾಗದೆ ದಲಿತರ ಹಣಕ್ಕೆ ಕನ್ನ ಹಾಕಿರುವ ಸಿದ್ದರಾಮಯ್ಯ ಅವರದ್ದು ಡೋಂಗಿ ಸರ್ಕಾರ ಎಂದು ಕುಟುಕಿದರು.
ಮಂಡ್ಯಕ್ಕೆ ವಿವಿ ಅವಶ್ಯಕತೆ ಇಲ್ಲ, ಅದು ಲಾಭದಾಯಕವೂ ಆಗಿಲ್ಲ ಎಂದು ಸಮಿತಿ ಸರ್ಕಾರಕ್ಕೆ ವರದಿ ಕೊಟ್ಟಿದೆ. ಲಾಭವನ್ನೇ ನೋಡುವುದಾದರೆ ವಿವಿ ಕಟ್ಟಡಗಳನ್ನು ಬಾಡಿಗೆಗೆ ಕೊಟ್ಟುಬಿಡಿ. ಅದರಿಂದ ಒಳ್ಳೆಯ ಲಾಭ ಬರುತ್ತದೆ ಎಂದು ಲೇವಡಿ ಮಾಡಿದ ಅಶೋಕ್, ಲಾಭ-ನಷ್ಟದ ಲೆಕ್ಕ ಹಾಕುವುದಕ್ಕೆ ಶಿಕ್ಷಣ ವ್ಯಾಪಾರದ ಸರಕಲ್ಲ, ಶಿಕ್ಷಣ ನಮ್ಮ ದೇಶದ ಆಸ್ತಿ. ಶಿಕ್ಷಣ ನೀಡುವುದು ಸರ್ಕಾರದ ಕರ್ತವ್ಯ ಎಂದರು.ಜಿಲ್ಲೆಯಲ್ಲಿ ಇರುವ ೬ ಜನ ಕಾಂಗ್ರೆಸ್ ಶಾಸಕರಿಗೆ ಒಂದು ವಿವಿ ಉಳಿಸಿಕೊಳ್ಳುವ ಯೋಗ್ಯತೆ ಇಲ್ಲವೆಂದಾದರೆ ಅವರೆಲ್ಲಾ ಯಾಕಿರಬೇಕು. ಮಂಡ್ಯ ವಿದ್ಯಾರ್ಥಿಗಳು ವಿದ್ಯಾವಂತರಾಗುವುದು ಬೇಡವೆಂದು ಘೋಷಿಸಿಬಿಡಿ ಎಂದು ಆಕ್ರೋಶದಿಂದ ನುಡಿದ ಅವರು, ಕಾಂಗ್ರೆಸ್ ಅಧಿಕಾರಕ್ಕೆ ಬಂದು ವಿದ್ಯೆ ಕಿತ್ತುಕೊಂಡಿತು. ಅಬಕಾರಿ ಸಚಿವರು ಮುಚ್ಚಿರುವ ಬಾರ್ ಓಪನ್ ಮಾಡಿದರು.
ವಿದ್ಯಾರ್ಥಿಗಳ ಉತ್ತಮ ಭವಿಷ್ಯಕ್ಕಾಗಿ ತೆರೆಯಲಾದ ವಿವಿಗಳನ್ನು ಮುಚ್ಚುತ್ತಿರುವ ಈ ಸರ್ಕಾರಕ್ಕೆ ಮಾನ-ಮರ್ಯಾದೆ ಇದೆಯೇ. ಹಣ ಇಲ್ಲ ಎಂಬ ಕಾರಣಕ್ಕೆ ಮುಚ್ಚುತ್ತಿರುವುದಾಗಿ ಹೇಳುತ್ತಿರುವುದಕ್ಕೆ ನಾಚಿಕೆಯಾಗುವುದಿಲ್ಲವೇ ಎಂದು ಪ್ರಶ್ನಿಸಿದರು.ಧಮ್ಮು, ತಾಕತ್ತಿದ್ದರೆ ಡಿಕೆಶಿಯನ್ನು ಉಚ್ಛಾಟಿಸಲಿ: ಆರ್.ಅಶೋಕ್
ಕನ್ನಡಪ್ರಭ ವಾರ್ತೆ ಮಂಡ್ಯಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕುಂಭಮೇಳದಲ್ಲಿ ಭಾಗಿಯಾಗಿದ್ದು, ಉತ್ತರ ಪ್ರದೇಶ ಸಿಎಂ ಅವರನ್ನು ಹೊಗಳಿದ್ದು ಹಾಗೂ ಅಮಿತ್ ಶಾ ಜೊತೆ ವೇದಿಕೆ ಹಂಚಿಕೊಂಡಿದ್ದು ತಪ್ಪು ಎನ್ನುವುದಾದರೆ ಅವರನ್ನು ಪಕ್ಷದಿಂದ ಅಮಾನತುಗೊಳಿಸಿ ಕಾಂಗ್ರೆಸ್‌ನವರು ಧಮ್ಮು, ತಾಕತ್ತು ಪ್ರದರ್ಶಿಸಲಿ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಕೈ ನಾಯಕರಿಗೆ ಸವಾಲು ಹಾಕಿದರು.
ಬೆಂಗಳೂರಿನ ಈಶಾ ಫೌಂಡೇಷನ್‌ನಲ್ಲಿ ಅಮಿತ್ ಶಾ- ಡಿ.ಕೆ.ಶಿವಕುಮಾರ್ ವೇದಿಕೆ ಹಂಚಿಕೊಂಡಿದ್ದಕ್ಕೆ ಕಾಂಗ್ರೆಸ್‌ನ ಕೆಲವು ನಾಯಕರು ಅಪಸ್ವರ ಎತ್ತಿರುವ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿ, ನಾವ್ಯಾರೂ ಡಿಕೆಶಿಯನ್ನು ಪಕ್ಷಕ್ಕೆ ಬರುವಂತೆ ಕರೆದಿಲ್ಲ. ಡಿಕೆಶಿ ಬಿಜೆಪಿ ಪಕ್ಷಕ್ಕೆ ಬರುವ ವಿಚಾರವಾಗಿ ಪಕ್ಷದ ನಾಯಕರೂ ನಮ್ಮೊಂದಿಗೆ ಚರ್ಚೆ ನಡೆಸಿಲ್ಲ. ಮೊದಲು ಕಾಂಗ್ರೆಸ್‌ನವರು ಡಿಕೆಶಿಯನ್ನು ಪಕ್ಷದಿಂದ ಸಸ್ಪೆಂಡ್ ಮಾಡಲಿ, ಮುಂದೆ ಕೇಂದ್ರದ ನಾಯಕರೇ ಎಲ್ಲ ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದರು.ಡಿ.ಕೆ.ಶಿವಕುಮಾರ್ ಬೇರೆ ಕಾಂಗ್ರೆಸ್ ನಾಯಕರಂತಲ್ಲ. ಅವರದ್ದು ಒದ್ದು ಕಿತ್ತುಕೊಳ್ಳುವ ಜಾಯಾಮಾನ. ಖರ್ಗೆ ಕುಂಭಮೇಳಕ್ಕೆ ಹೋಗಬೇಡಿ ಎಂದಿದ್ದರು. ಆದರೂ ಶಿವಕುಮಾರ್ ಕುಂಭಮೇಳಕ್ಕೆ ಹೋದರು. ಪ್ರಧಾನ ಮಂತ್ರಿ ಮೋದಿ ಅವರನ್ನೂ ಭೇಟಿ ಮಾಡಿದರು. ಕುಂಭಮೇಳ ವಿಚಾರವಾಗಿ ಕಾಂಗ್ರೆಸ್ ನಾಯಕರು ಟೀಕೆ ಮಾಡಿದರು. ಆದರೆ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಅವರನ್ನು ಡಿಕೆಶಿ ಹೊಗಳಿದರು. ಈಗ ಈಶಾ ಫೌಂಡೇಶನ್‌ಗೆ ಹೋಗಿ ಅಮಿತ್ ಶಾ ಜೊತೆ ಕುಳಿತಿದ್ದನ್ನೂ ಕಾಂಗ್ರೆಸ್ ನಾಯಕರು ಟೀಕಿಸುತ್ತಾರೆಂದರೆ ಅವರ ಮನಸ್ಥಿತಿ ಎಂತಹದ್ದು ಎನ್ನುವುದು ಅರ್ಥವಾಗುತ್ತೆ ಎಂದರು.