ನಾನು ಯಾರಿಗೂ ಠಕ್ಕರ್ ಕೊಡಲು ಇಲ್ಲಿಗೆ ಬಂದಿಲ್ಲ. ಇನ್ನೊಬ್ಬರನ್ನು ಮೆಚ್ಚಿಸುವುದಕ್ಕಾಗಿ ಉದ್ಯೋಗ ಮೇಳ ಮಾಡುತ್ತಿಲ್ಲ. ಜನರು ನನ್ನನ್ನು ನಂಬಿ ಮತ ಕೊಟ್ಟಿದ್ದಾರೆ. ಅವರ ಋಣ ತೀರಿಸುವ ಕೆಲಸ ಮಾಡುತ್ತಿದ್ದೇನೆ. ಇನ್ನೊಬ್ಬರು ಕೊಡುವ ಸರ್ಟಿಫಿಕೇಟ್‌ಗೆ ಕೆಲಸ ಮಾಡುವವನು ನಾನಲ್ಲ.
ಮಂಡ್ಯ : ನಾನು ಮತ್ತೆ ಮುಖ್ಯಮಂತ್ರಿಯಾದರೆ ಪ್ರತಿ ಜಿಲ್ಲೆಯಲ್ಲೂ ಒಂದು ಲಕ್ಷ ಉದ್ಯೋಗ ಸೃಷ್ಟಿಸುವುದಾಗಿ ಕೇಂದ್ರ ಉಕ್ಕು ಮತ್ತು ಭಾರೀ ಕೈಗಾರಿಕೆ ಸಚಿವ ಎಚ್.ಡಿ.ಕುಮಾರಸ್ವಾಮಿ ಅಭಯ ನೀಡಿದರು.
ನಗರದ ಸರ್ ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಶನಿವಾರ ಉದ್ಯೋಗ ಮೇಳದ ಸಮಾರೋಪ ಸಮಾರಂಭದಲ್ಲಿ ಮಾತನಾಡಿ, ಐದು ವರ್ಷಗಳ ಕಾಲ ಸಿಎಂ ಆಗಬೇಕೆನ್ನುವುದು ನನ್ನ ಕನಸು. ರಾಜ್ಯದ ಜನರು ನನ್ನ ಆಸೆ ಈಡೇರಿಸುವರೆಂಬ ವಿಶ್ವಾಸವಿದೆ ಎಂದು ಮತ್ತೊಮ್ಮೆ ಸಿಎಂ ಆಗುವ ಬಯಕೆಯನ್ನು ತೆರೆದಿಟ್ಟರು.
ಇದು ಅಂತ್ಯ ಅಲ್ಲ, ಆರಂಭ. ಎಲ್ಲರೂ ಈ ಭರವಸೆ ಇಟ್ಟುಕೊಳ್ಳಬೇಕು. ಹೊರಗಡೆ ಹೋಗಿ ಕೆಲಸ ಮಾಡಲು ಕೆಲವರಿಗೆ ವಿಶ್ವಾಸದ ಕೊರತೆ ಇದೆ. ಎಲ್ಲರಿಗೂ ರಾಜ್ಯದಲ್ಲಿಯೇ ಕೆಲಸ ಕೊಡಿಸಲು ಸಾಧ್ಯವಿಲ್ಲ. ಉದ್ಯೋಗ ಮೇಳದಲ್ಲಿ ಸಾವಿರ ಕುಟುಂಬಗಳಿಗೆ ಉದ್ಯೋಗ ದೊರಕುತ್ತಿದೆ. ಉದ್ಯೋಗ ಎಲ್ಲೇ ಸಿಕ್ಕರೂ ಹೋಗಿ ಕೆಲಸ ಮಾಡಿ. ನಮಗೂ ಈ ಹಿಂದೆ ಅಳುಕಿತ್ತು. ದೆಹಲಿಯಲ್ಲಿ ಕೆಲಸ ಮಾಡಲು ಹಿಂಜರಿಯುತ್ತಿದ್ದೆವು. ಆದರೆ ಅದಕ್ಕೆ ನಾವು ಹೊಂದಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಹೊಸ ಕಾರ್ಖಾನೆಗಳನ್ನು ತರಲು ಪ್ರಯತ್ನ:
ಜಿಲ್ಲೆಯಲ್ಲಿ ಕೆಲವು ಕಾರ್ಖಾನೆಗಳನ್ನ ತರಲು ಪ್ರಯತ್ನ ಮಾಡುತ್ತಿದ್ದೇನೆ. ಅದಕ್ಕೆ ಸಮಯಾವಕಾಶ ಬೇಕು. ರಾಜ್ಯ ರಾಜ್ಯಗಳ ನಡುವೆ ಪೈಪೋಟಿ ಇದೆ. ಹೊಸ ಉದ್ಯಮ ತರಲು ಪ್ರಾಮಾಣಿಕವಾಗಿ ಪ್ರಯತ್ನ ಮಾಡುತ್ತೇನೆ. ನಾನು ಸಿಎಂ ಆಗಿದ್ದ ಸಮಯದಲ್ಲಿ ಒಂದು ಸಾವಿರ ವಿಕಲಚೇತನರಿಗೆ ಉದ್ಯೋಗ ಕೊಡಿಸಿದ್ದೆ. ಆನಂತರ ಬಂದ ಸರ್ಕಾರಗಳು ಅವರನ್ನು ಕಾಯಂ ಮಾಡಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಠಕ್ಕರ್ ಕೊಡಲು ಬಂದಿಲ್ಲ:
ನಾನು ಯಾರಿಗೂ ಠಕ್ಕರ್ ಕೊಡಲು ಇಲ್ಲಿಗೆ ಬಂದಿಲ್ಲ. ಇನ್ನೊಬ್ಬರನ್ನು ಮೆಚ್ಚಿಸುವುದಕ್ಕಾಗಿ ಉದ್ಯೋಗ ಮೇಳ ಮಾಡುತ್ತಿಲ್ಲ. ಜನರು ನನ್ನನ್ನು ನಂಬಿ ಮತ ಕೊಟ್ಟಿದ್ದಾರೆ. ಅವರ ಋಣ ತೀರಿಸುವ ಕೆಲಸ ಮಾಡುತ್ತಿದ್ದೇನೆ. ಇನ್ನೊಬ್ಬರು ಕೊಡುವ ಸರ್ಟಿಫಿಕೇಟ್‌ಗೆ ಕೆಲಸ ಮಾಡುವವನು ನಾನಲ್ಲ. ನನ್ನ ಬಗ್ಗೆ ಸಣ್ಣದಾಗಿ ಮಾತನಾಡುವವರಿಗೆ ಇದೇ ಉತ್ತರ ಎಂದು ಹೇಳಿದರು.
೨೦೧೮ರಲ್ಲಿ ಸಿಎಂ ಆಗಿದ್ದಾಗ ೫೦ ಸಾವಿರ ಉದ್ಯೋಗ ಸೃಷ್ಟಿಸಲು ಡಿಸ್ನಿಲ್ಯಾಂಡ್ ಪ್ಲ್ಯಾನ್ ಮಾಡಿದೆ. ಕಾವೇರಿ ಪ್ರತಿಮೆ ಅಂತ ಅದು ಅಲ್ಲಿಗೆ ನಿಂತುಹೋಯಿತು. ಇವರು ಏನು ಮಾಡುತ್ತಾರೋ ನೋಡೋಣ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮಾಜಿ ಸಚಿವರಾದ ಸಿ.ಎಸ್.ಪುಟ್ಟರಾಜು, ಬಂಡೆಪ್ಪ ಕಾಶೆಂಪೂರ್, ಮಾಜಿ ಶಾಸಕ ರವೀಂದ್ರ ಶ್ರೀಕಂಠಯ್ಯ ಸೇರಿದಂತೆ ಇತರರಿದ್ದರು.